ಮಹಿಳೆಯರಿಗೆ 21ದಿನಗಳ ಯೋಗ ತರಬೇತಿ ಶಿಬಿರ ಸಮಾರೋಪ
ರೋಗಗಳಿಂದ ದೂರವಿರಲು ಯೋಗ ಅವಶ್ಯ
( ಸ್ವರೂಪ ಸಂದರ್ಶನ : ಮ.ಕೃ.ಮೇಗಾಡಿ)
ಹೊಸೂರು : ಮೌನ ಮನಸ್ಸನ್ನು ಶುದ್ಧಿ ಮಾಡುತ್ತದೆ, ಸ್ನಾನ ದೇಹವನ್ನು ಶುದ್ಧಿ ಮಾಡುತ್ತದೆ, ಪ್ರಾರ್ಥನೆ ಆತ್ಮ ಶುದ್ಧಿ ಮಾಡುತ್ತದೆ, ಯೋಗಜ್ಞಾನ ನಮ್ಮ ಇಡೀ ಜೀವನವನ್ನೇ ಶುದ್ಧಿ ಮಾಡುತ್ತದೆ. ಆರೋಗ್ಯ ಸುಧಾರಣೆಯಿಂದ ಹಿಡಿದು ಮೋಕ್ಷ ಸಾಧನೆಗೆ, ರೋಗಗಳಿಂದ ದೂರವಿರಲು ಯೋಗ ಅವಶ್ಯವೆಂದು ಕರ್ನಾಟಕ ಜಾನಪದ ಪರಿಷತ್ತಿನ ರಬಕವಿ-ಬನಹಟ್ಟಿ ತಾಲೂಕಾ ಘಟಕದ ಅಧ್ಯಕ್ಷ ಮ.ಕೃ.ಮೇಗಾಡಿ ಹೇಳಿದರು.
ಹೊಸೂರು ನೀಲಕಂಠಮಠದ ಸಭಾಭವನದಲ್ಲಿ, 21ದಿನಗಳವರೆಗೆ ನಡೆದ ಮಹಿಳೆಯರಿಗೆ ಯೋಗ ಶಿಬಿರದ ಸಮಾರೋಪ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಕಷ್ಟ ನಷ್ಟ, ನೋವು ಯಾತನೆ, ದುಗುಡ ದುಮ್ಮಾನಗಳಿಗೆ ಏಕೈಕ ಔಷಧ ಯೋಗ ಎಂದರು.
ಹಳೆಹುಬ್ಬಳ್ಳಿ ನೀಲಕಂಠಮಠದ ಜಗದ್ಗುರು ಶ್ರೀಶಿವಶಂಕರ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಇಡೀ ವಿಶ್ವವೇ ತಲೆಬಾಗಿ 192ದೇಶಗಳು ಯೋಗವನ್ನು ಒಪ್ಪಿಕೊಂಡಿವೆ. ಆರೋಗ್ಯಕ್ಕಾಗಿ, ಮಾನಸಿಕ ನೆಮ್ಮದಿಗಾಗಿ ನಿತ್ಯ ಯೋಗ ಮಾಡಬೇಕು. ಆರೋಗ್ಯವೇ ಭಾಗ್ಯ ಹೊರತು ಗೋಲ್ಡ್ ಈಸ್ ವೆಲ್ಥ್ ಅಂದಿಲ್ಲ. ಈ ಕೊರೊನಾ ಕಾಲದಲ್ಲಿ ದೇಶವೇ ಸ್ತಬ್ಧವಾದ ಸಂದರ್ಭದಲ್ಲಿ ಆರೋಗ್ಯದ ಮಹತ್ವ ಅರಿವಾಗಿದೆ. ಪ್ರತಿಯೊಬ್ಬರೂ ಯೋಗ ಮಾಡಬೇಕು. ಒಂದು ಗಂಟೆಯಾದರೂ ಪ್ರತಿದಿನ ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕು. ಯೋಗದ ಮಹತ್ವವನ್ನು ಮಹಿಳೆಯರು ಅರಿಯಬೇಕೆಂದು ಹೇಳಿದರು.
ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿ, ಸಮಾಜ ಸೇವಕರಾದ ನಂದು ಗಾಯಕವಾಡ ಮಾತನಾಡಿ, ತಂದೆ-ತಾಯಿ-ಗುರುಗಳಿಗೆ ತಲೆಬಾಗಿದವನಿಗೆ ಜಗತ್ತು ತಲೆಬಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಜೀವನ ನಡೆಸಬೇಕು. ಮಹಿಳೆಯರು, ಯುವಕರು, ಪ್ರತಿಯೊಬ್ಬರೂ ನಿತ್ಯ ಯೋಗಕ್ಕೆ ಸಮಯ ಮೀಸಲಿಡಬೇಕು ಎಂದರು.
ಯೋಗ ತರಬೇತಿ ನೀಡಿದ ಸುವರ್ಣಾ ಕವಟಗಿ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು ರೋಗ ಮುಕ್ತ ಜೀವನ ನಡೆಸಲು ಯೋಗ ಅತ್ಯುತ್ತಮ ಔಷಧಿ ಎಂದರು.
ಡಾ. ಸತೀಶ ಮಾಳಿ, ಜ್ಯೋತಿಷಿ ಶಂಕರೆಪ್ಪಣ್ಣ ಅಮ್ಮಲಝೇರಿ ಮಾತನಾಡಿದರು.
ಧರೆಪ್ಪ ಉಳ್ಳಾಗಡ್ಡಿ, ಗಿರಮಲ್ಲಪ್ಪ ಬಾಗೇವಾಡಿ, ನಾಮದೇವ ಆಲಗೂರ, ಅಶೋಕ ಹಳ್ಳೂರ, ನಗರಸಭಾ ಸದಸ್ಯರಾದ ಅರುಣ ಬುದ್ನಿ, ರೇಖಾ ರವಿ ಕೊರ್ತಿ, ಕಾಮಧೇನು ಮಾತೃ ಮಂಡಳಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಡೊಮ್ಮನಾಳ, ಶಿಕ್ಷಕ ಮಹೇಶಕುಮಾರ ಕವಟಗೊಪ್ಪ ವೇದಿಕೆಯಲಿದ್ದರು.
ರಕ್ಷಿತಾ ಗುಂಡಿ, ಸಾವಿತ್ರಿ ತಮದಡ್ಡಿ ಪ್ರಾರ್ಥಿಸಿದರು. ದಾನಮ್ಮ ಬೀಳಗಿ ಸಂಗಡಿಗರು ಯೋಗಗೀತೆ ಹಾಡಿದರು. ದಾನಮ್ಮಾ ಗಿರಿಸಾಗರ, ಮೀನಾಕ್ಷ ಮಿಡಕನಟ್ಟಿ, ಸರೋಜಿನಿ ಗಿರಿಸಾಗರ ಅನಿಸಿಕೆಗಳನ್ನು ಹೇಳಿದರು. ಚಂದ್ರಕಾಂತ ಜೈನಾಪುರ ನಿರೂಪಿಸಿದರು. ಮಹಾಲಿಂಗ ಸಂಕಾನಟ್ಟಿ ವಂದಿಸಿದರು.
ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕಾರ್ಯಕ್ರಮ ನೆರವೇರಿಸಲಾಯಿತು.
ಫೋಟೊ ವಿವರ : ಹೊಸೂರು ನೀಲಕಂಠಮಠದ ಸಭಾಭವನದಲ್ಲಿ, 21ದಿನಗಳವರೆಗೆ ನಡೆದ ಮಹಿಳೆಯರಿಗೆ ಯೋಗ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮ.ಕೃ.ಮೇಗಾಡಿ ಮಾತನಾಡಿದರು.


Social Plugin