ಸ್ಕಾಲರ್‍ಶಿಪ್‍ಗಾಗಿ ಹೆತ್ತವರ ಅಲೆದಾಟ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಸೆ23: ಪರಿಶಿಷ್ಟ ಜಾತಿ ಹಾಗು ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್‍ಗಾಗಿ ಹೆತ್ತವರ ಅಲೆದಾಟ ಎಂದೋ ಆರಂಭವಾಗಿದೆ. ಕೆಲವರಿಗೆ ಬ್ಯಾಂಕ್ ಖಾತೆಗೆ ಹಣ ಇನ್ನೂ ಜಮಾ ಆಗಿಲ್ಲ. ಸಮಸ್ಯೆ ಏನು? ಈ ಬಗ್ಗೆ ಯಾರಲ್ಲಿ ಕೇಳಬೇಕು? ಪರಿಹಾರ ಏನು? ಎಂಬ ವಿಚಾರ ಯಾರಿಗೂ ಗೊತ್ತಿಲ್ಲ. ಹೆತ್ತವರು ತಬ್ಬಿಬ್ಬಾಗಿದ್ದಾರೆ.
ಸ್ಥಳೀಯ ಭಾರತೀಯ ಸ್ಟೇಟ್ ಬ್ಯಾಂಕ್‍ನಲ್ಲಿ ವಿದ್ಯಾರ್ಥಿಗಳ ಪಾಲಕರು ದಿನಂಪ್ರತಿ ಅಲೆದು ಸುಸ್ತಾಗಿದ್ದಾರೆ. ಕಳೆದೆರಡು ವರ್ಷಗಳಿಂದ ವಾರ್ಷಿಕ 1 ಸಾವಿರ ರೂ.ಗಳು ಬರುತ್ತಿಲ್ಲ. ಇದರ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದರೆ ಆಧಾರ್ ಲಿಂಕ್ ಮಾಡಬೇಕೆಂದು ಹೇಳುತ್ತಿದ್ದರೆ, ಕೆಲವರಿಗೆ ಸಂಬಂಧಿಸಿದ ಇಲಾಖೆ ಸಂಪರ್ಕಿಸಿ ಇಲ್ಲೇನು ಮಾಹಿತಿ ಒದಗುವದಿಲ್ಲವೆಂಬ ಹಾರಿಕೆ ಉತ್ತರ ನೀಡುತ್ತ ಸತಾಯಿಸುತ್ತಿದ್ದಾರೆಂಬುದು ಸ್ಥಳೀಯರ ಆರೋಪವಾಗಿದೆ.
ರಾಜ್ಯ ಸರ್ಕಾರ ಕಡ ಕುಟುಂಬಗಳ ವಿದ್ಯಾರ್ಥಿಗಳ ಸಹಾಯಕ್ಕೆಂದು ಯೋಜನೆ ರೂಪಿಸಿರುವದನ್ನು ಬ್ಯಾಂಕ್‍ಗಳು ಈ ರೀತಿ ಯೋಜನೆ ವಿಫಲಗೊಳಿಸುವಲ್ಲಿ ಕಾರಣವಾಗುತ್ತ, ಯೋಜನೆ ದುರುಪಯೋಗವಾಗಲು ಕಾರಣವಾಗಿದ್ದರೆ, ಮತ್ತೊಂದೆಡೆ ಈ ಸ್ಕಾಲರ್‍ಶಿಪ್‍ನ್ನೇ ನಂಬಿ ಶಿಕ್ಷಣ ಕಲಿಯುತ್ತಿರುವ ಕುಟುಂಬಗಳಿಗೆ ಬ್ಯಾಂಕ್ ಹೇಳಿಕೆಗಳು ಕಂಟಕವಾಗುತ್ತಿವೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಮಧ್ಯಸ್ಥಿಕೆ ವಹಿಸಿ ರಬಕವಿ-ಬನಹಟ್ಟಿ ತಾಲೂಕಿನ ನೂರಾರು ಅರ್ಹ ಬಡಕುಟುಂಬಗಳಿಗೆ ದೊರಕಬೇಕಾದ ನ್ಯಾಯಬದ್ಧ ಯೋಜನೆ ಒದಗಿಸುವಲ್ಲಿ ಮುಂದಾಗಬೇಕಿದೆ.
`ಸ್ಕಾಲರ್‍ಶಿಪ್ ಹಣ ಜಮಾ ಆಗಿದೆಯೇ ಎಂದು ಕೇಳಲು ಬ್ಯಾಂಕ್‍ಗೆ ತೆರಳಿದರೆ, ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತ ನಮಗೇನು ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನ್ಯಾಯ ಒದಗಿಸಬೇಕು.’----ಭೀಮಶಿ ಮಣ್ಣವಡ್ಡರ.