ರಬಕವಿ-ಬನಹಟ್ಟಿ ತಾಲೂಕು ನಕ್ಷೆ.

ಮೌನಗೊಂಡ ತಾಲೂಕು ರಚನಾ ಸಮಿತಿ: ಹೋರಾಟದಲ್ಲಿ ಮಂದಗತಿ
ರಬಕವಿ-ಬನಹಟ್ಟಿ,ಸೆ23: ರಾಜ್ಯದಲ್ಲಿ ನೂತನ ತಾಲೂಕು ಕೇಂದ್ರವಾಗಲು 1973 ರಲ್ಲಿ ರಚಿತವಾದ ವಾಸುದೇವ ರಾವ್ ಆಯೋಗ, 1984 ರಲ್ಲಿ ರಚಿಸಿದ ಹುಂಡೇಕರ್ ಸಮಿತಿ, 2007 ರ ಎಂ.ಬಿ. ಪ್ರಕಾಶ ಸಮಿತಿಗಳಲ್ಲಿ ಮೊದಲ ಪ್ರಾಶಸ್ತ್ಯ ಪಡೆಯುವಲ್ಲಿ ನಗರಸಭೆಯಾಗಿದ್ದ ರಬಕವಿ-ಬನಹಟ್ಟಿ ನಗರವು ತಾಲೂಕಾ ಕೇಂದ್ರವಾಗಲು ಅರ್ಹವಾದುದು ಎಂದು ತಿಳಿಸಿದ್ದವು. 
ಇದಕ್ಕನುಗುಣವಾಗಿ 2008 ರಲ್ಲಿ ಅಧಿಕೃತವಾಗಿ ಭೀಮಶಿ ಮಗದುಮ್ ಅಧ್ಯಕ್ಷತೆಯಲ್ಲಿ ನಿರ್ಮಾಣಗೊಂಡ ರಬಕವಿ-ಬನಹಟ್ಟಿ ತಾಲೂಕು ಹೋರಾಟ ಸಮಿತಿಯ ಸತತ ದಶಕದ ಹೋರಾಟಕ್ಕೆ 2018 ಜನೇವರಿ 26 ರಂದು ಅಧಿಕೃತವಾಗಿ ತಾಲೂಕಾ ಕೇಂದ್ರದ ಜೊತೆಗೆ ತಹಶೀಲ್ದಾರ ಕಚೇರಿಯೂ ಸಹಿತ ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸುವಲ್ಲಿ ಸಮಿತಿ ಯಶಸ್ಸು ಕಂಡಿದೆ.
ಇದೀಗ ತಾಲೂಕಾ ಕೇಂದ್ರವಾಗಿ ಕಳೆದೆರಡುವರೆ ವರ್ಷಗಳೇ ಗತಿಸಿದರೂ, ತಾಲೂಕಾ ಹೋರಾಟ ಸಮಿತಿ ನಂತರದ ದಿನಗಳಲ್ಲಿ ಶಂಕರ ಸೊರಗಾಂವಿಯವರ ಅಧ್ಯಕ್ಷೀಯ ಅವಧಿಯಲ್ಲಿ ತಾಲೂಕಾ ರಚನಾ ಸಮಿತಿ ಎಂದು ಪರಿವರ್ತನೆಗೊಂಡಿತ್ತು. ಇದಕ್ಕೆ ಪೂರಕವಾಗಿ ತಾಲೂಕಾ ಕೇಂದ್ರವಾದ ನಂತರ ಅಗತ್ಯವಾಗಿ ಸರ್ಕಾರದಿಂದ ಸಾರ್ವಜನಿಕ ಸೇವೆಗಾಗಿ ದೊರಕಬೇಕಾದ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಸಂದರ್ಭದಲ್ಲಿ ಸಮಿತಿಯು ಮೌನಗೊಂಡಿರುವದು ಬೇಸರ ತರುವಂಥದ್ದು ಎಂಬುದು ಜನಸಾಮಾನ್ಯರ ಅಂಬೋಣವಾಗಿದೆ.