ತೇರದಾಳ ಪಟ್ಟಣದಲ್ಲಿ ಹದೆಗೆಟ್ಟ ಮುಖ್ಯ ರಸ್ತೆಗಳು.

ತೇರದಾಳ ಪಟ್ಟಣದಲ್ಲಿ ಹದೆಗೆಟ್ಟಿರುವ ರಸ್ತೆಗಳು ದುರಸ್ತಿ ಯಾವಾಗ ?

ತೇರದಾಳ : ಪಟ್ಟಣದಲ್ಲಿ ಸಂಚರಿಸುವ ಮುಖ್ಯ ರಸ್ತೆಗಳು ಹದೆಗೆಟ್ಟು ಹೋಗಿದ್ದು ಸಾರ್ವಜನಿಕರು ಸಂಚರಿಸಲು ತೊಂದರೆಯಾಗುತ್ತಿದೆ. ಸಂಬಂದಿಸಿ ಇಲಾಖೆಯವರು ಇದನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲವೆಂದು ನ್ಯಾಯವಾದಿ ಶ್ರೀನಿವಾಸ ಶೇಗುಣಸಿ ದೂರಿದ್ದಾರೆ.

  24*7 ನಳಗಳ ಜೋಡಣೆ ಮಾಡುವ ಸಲುವಾಗಿ ಪಟ್ಟಣದಲ್ಲಿನ ಮುಖ್ಯ ರಸ್ತೆಗಳನ್ನು ಅಗೆದು ಬಿಟ್ಟಿರುವುದರಿಂದ ವಾಹನ ಸಂಚಾರಿಗಳಿಗೆ ಹಾಗೂ ಪಾದಚಾರಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಮಳೆಯಾದಾಗ ರಸ್ತೆಗಳಲ್ಲಿ ಉಂಟಾದ ತಗ್ಗು ದಿನ್ನೆಗಳಲ್ಲಿ ನೀರು ತುಂಬಿ ನಿಂತು ದ್ವಿಚಕ್ರ ವಾಹನ ಸವಾರರಿಗೆ ಅದು ಗೊತ್ತಾಗದೆ ಸವಾರರು ಬೀಳುತ್ತಿದ್ದಾರೆ. 24*7 ನಳಗಳ ಜೋಡಣೆ ಮಾಡುವ ಸಲುವಾಗಿ ನೆಲವನ್ನು ಅಗೆಯುತ್ತಿರುವಾಗ ಮೊದಲಿನ ಹಳೆಯ ನಳ ಜೋಡಣೆಗೆ ಜೋಡಿಸಿದ ಪೈಪಗಳು ಒಡೆದು ಸಾಕಷ್ಟು ನೀರು ಪೋಲಾಗುತ್ತಿದೆ ಅದನ್ನು ದುರಸ್ತಿ ಮಾಡಲು ಪುರಸಭೆ ಅಧಿಕಾರಿಗಳಿಗೆ ಹೇಳಿದರೆ ಕ್ಯಾರೆ ಅನ್ನುತ್ತಿಲ್ಲ. ರಸ್ತೆ ದುರಸ್ತಿ ಕಾರ್ಯವನ್ನು 24*7 ನಳ ಜೋಡಣೆ ಗುತ್ತಿಗೆದಾರರು ಮಾಡುತ್ತಾರೆ ಎಂದು ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಹೇಳಿ ಕಳುಹಿಸುತ್ತಾರೆ ಎಂದು ಶೇಗುಣಸಿಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗುತ್ತಿಗೆದಾರರಿಂದ ಬೇಗನೆ ಈ ರಸ್ತೆ ದುರಸ್ತಿ ಕಾರ್ಯವನ್ನು ಮಾಡಬೇಕು. ಹಾಗೂ ಅಲ್ಲಲ್ಲಿ ಒಡೆದಿರುವ ನಳದ ಪೈಪ್‍ಗಳನ್ನು ದುರಸ್ತಿ ಕಾರ್ಯ ಮಾಡಬೇಕು.

   ಜಮಖಂಡಿ ಕಾಗವಾಡ ರಾಜ್ಯ ಹೆದ್ದಾರಿ ರಸ್ತೆಯು ತೀರಾ ಹದೆಗೆಟ್ಟು ಹೋಗಿದೆ. ವಾಹನ ಸವಾರರು ಸಂಚರಿಸಲು ಚಾಲಕರು ಹರ ಸಾಹಸ ಪಡುತ್ತಿದ್ದಾರೆ. ಅಲ್ಲಲ್ಲಿ ರಸ್ತೆ ಕಿತ್ತು ಹೋಗಿದ್ದು ತಗ್ಗು ದಿನ್ನೆಗಳು ಬಿದ್ದಿವೆ. ಆ ತಗ್ಗು ದಿನ್ನೆಗಳನ್ನು ಮುಚ್ಚುವ ಕೆಲಸವಾಗಬೇಕಿದೆ. ಪಟ್ಟಣದ ದಾನಿಗೊಂಡ ಆಸ್ಪತ್ರೆಯ ಹತ್ತಿರ ರಸ್ತೆ ತೀರಾ ಹದೆಗೆಟ್ಟು ಹೋಗಿದೆ. ಇದನ್ನು ದುರಸ್ತಿ ಕಾರ್ಯ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಹೇಳಿದರೆ ಬೇಜವಾಬ್ದಾರಿ ಉತ್ತರ ಹೇಳುತ್ತಿದ್ದಾರೆ. ಸಂಭಂದಿಸಿದ ಇಲಾಖೆಯವರು ಈ ರಸ್ತೆಗಳ ದುರಸ್ತಿ ಕಾರ್ಯವನ್ನು ಮಾಡಿ ಸಾರ್ವಜನಿಕರಿಗೆ ಸಂಚರಿಸಲು ಅನುವು ಮಾಡಿಕೊಡಬೇಕು ಹಾಗೂ ಪೈಪಗಳು ಒಡೆದು ನೀರು ಪೋಲಾಗುತ್ತಿರುವುದನ್ನು  ತಡೆಯಬೇಕು ಎಂದು ಅವರು ತಿಳಿಸಿದ್ದಾರೆ. ಈ ಕಾರ್ಯ ಆಗದೇ ಹೋದಲ್ಲಿ ನಾನೇ ಸ್ವತಃ ಪುರಸಭೆ ಮುಂದೆ ಸತ್ಯಾಗ್ರಹ ಕುಳಿತು ಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.