ರಬಕವಿ-ಬನಹಟ್ಟಿಯಲ್ಲಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದವರು ಬೇಡ ಜಂಗಮರಿಗೆ ಸಂವಿಧಾನಬದ್ಧ ಹಕ್ಕನ್ನು ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಸಂವಿಧಾನ ಬದ್ಧ ಹಕ್ಕಿಗಾಗಿ ಬೇಡ ಜಂಗಮರ ಹೋರಾಟವಾಗಿದೆ
ರಬಕವಿ-ಬನಹಟ್ಟಿ,ಸೆ30: ಬೇಡ ಜಂಗಮರು ಯಾವುದೆ ಸರ್ಕಾರದಿಂದ ಭಿಕ್ಷೆ ಕೇಳುತ್ತಿಲ್ಲ. ನಾವು ನಮ್ಮ ಸಂವಿಧಾನಬದ್ಧ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದ್ದರಿಂದ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಕರ್ನಾಟಕ ರಾಜ್ಯ ಬೇಡ ಜಂಗಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಭೃಂಗಿಮಠ ಆಗ್ರಹಿಸಿದರು.
ಅವರು ಬುಧವಾರ ಸ್ಥಳೀಯ ತಹಶೀಲ್ದಾರ ಕಾರ್ಯಾಲಯದಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದರು.
ಸರ್ಕಾರದ ಕೆಲವು ಪ್ರಮುಖ ರಾಜಕಾರಣಿಗಳು ಬೇಡ ಜಂಗಮ ಸಮಾಜದ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಂಥವರಿಗೆ ತಕ್ಕ ಪಾಠ ಕಲಿಸಲಾಗುವುದು. ಎಲ್ಲ ಪಕ್ಷದವರೂ ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ ಒತ್ತಾಯಿಸಬೇಕು ಎಂದು ಮಲ್ಲಿಕಾರ್ಜುನ ಭೃಂಗಿಮಠ ತಿಳಿಸಿದರು.
ಈ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರ ಕಾಡದೇವರ, ಉಪಾಧ್ಯಕ್ಷ ಗಂಗಾಧರಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ವೀರಭದ್ರಶಾಸ್ತ್ರಿ ಹಿರೇಮಠ, ಸಮಾಜದ ಮುಖಂಡರಾದ ಚನ್ನಯ್ಯ ಲಿಂಗದ, ಬಸಯ್ಯ ವಸ್ತ್ರದ ಮುಂತಾದವರು ಸಭೆಯಲ್ಲಿ ಮಾತನಾಡಿದರು.
ಸ್ಥಳೀಯ ಕಾಡಸಿದ್ಧೇಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಾರ್ಯಾಲಯದವರೆಗೆ ಮೆರವಣಿಗೆಯಲ್ಲಿ ತೆರಳಿ ಶಿರಸ್ತೆದಾರ ಬಸವರಾಜ ಬಿಜ್ಜರಗಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವರುದ್ರಯ್ಯ ಕಾಡದೇವರ, ಸಂಜಯ ಅಮ್ಮಣಗಿಮಠ, ಈಶ್ವರಯ್ಯ ಕಾಡದೇವರ, ಶಂಕರ ಅಂಗಡಿ, ದಯನಾಂದನ ಬಾಗಲಕೋಟಮಠ, ಬಸವರಾಜ ಅಮ್ಮಣಗಿಮಠ, ಬಾಳಯ್ಯ ಪೂಜಾರಿ, ಗುರು ಕಾಡದೇವರ, ಗಂಗಯ್ಯ ಬಂಗಿ ಸೇರಿದಂತೆ ಅನೇಕರು ಇದ್ದರು.

Social Plugin