ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ನಟಿ,
ಅರ್ಣಬ್ ಗೋಸ್ವಾಮಿ....
ರಾಷ್ಟ್ರೀಯ ಸುದ್ದಿ ಮಾಧ್ಯಮದ ಪತ್ರಕರ್ತ ನಿರೂಪಕ,
ಉದ್ದವ್ ಠಾಕ್ರೆ......
ಮಹಾರಾಷ್ಟ್ರದ ಮುಖ್ಯಮಂತ್ರಿ,
ಸಂಜಯ್ ರಾವತ್.....
ಪ್ರಖ್ಯಾತ ಸಾಮ್ನಾ ಪತ್ರಿಕೆಯ
ಸಹ ಸಂಪಾದಕ,
ಅನಿಲ್ ದೇಶಮುಖ್.....
ಮಹಾರಾಷ್ಟ್ರದ ಗೃಹ ಮಂತ್ರಿ,
ಚಿಕ್ಕ ವಯಸ್ಸಿನಲ್ಲಿ ಗೋಲಿ, ಗಿಲ್ಲಿ ದಾಂಡು, ಕಬಡ್ಡಿ, ಚೆಂಡಾಟ ಆಡುವಾಗ ಏನಾದರೂ ಮೋಸ ಆದರೆ ಮಕ್ಕಳು ಕೆಟ್ಟ ಮಾತುಗಳಲ್ಲಿ ಜಗವಾಡುತ್ತಾರೆ,
ಬೀದಿ ಬದಿಯ ಗಲಾಟೆಗಳಲ್ಲಿ ಕುಡುಕರ ಭಾಷೆಯೂ ತುಂಬಾ ಕೆಟ್ಟದ್ದಾಗಿರುತ್ತದೆ.
ಈಗ ರಾಷ್ಟ್ರೀಯ ಟಿವಿ ಸುದ್ದಿವಾಹಿನಿಗಳಲ್ಲಿ ಅದೇ ರೀತಿಯ ಕೆಟ್ಟ ಕೊಳಕ ಭಾಷೆಯ ಸೇಡಿನ ದುಷ್ಟ ಮನೋಭಾವದ ಆಟ ನಡೆಯುತ್ತಿದೆ......
ಅರ್ಣಬ್ ಗೋಸ್ವಾಮಿ........
ಸಾಮಾನ್ಯ ಸುದ್ದಿಗೆ ಪೆಟ್ರೋಲ್ ಸುರಿದು ಧಗಧಗನೆ ಉರಿಯುವಾಗ ದೇಶ ಭಕ್ತಿಯ ಮುಖವಾಡ ಹಾಕಿಕೊಂಡು ನಾಗಿಣಿ ನೃತ್ಯ ಮಾಡುತ್ತಾ ಎಲುಬಿಲ್ಲದ ನಾಲಿಗೆಯಲ್ಲಿ ಭಾಷೆಯ ಮೇಲೆ ಅತ್ಯಾಚಾರ ಮಾಡುವ ಮತಿಹೀನ, ಇಡೀ ಮಾಧ್ಯಮ ಲೋಕದ ನೈತಿಕ ಅಧಃಪತನದ ಪ್ರತಿನಿಧಿ ಮತ್ತು ಪತ್ರಕರ್ತ ವೃತ್ತಿಗೆ ಒಂದು ಕಪ್ಪು ಚುಕ್ಕೆ .......
ಉದ್ದವ್ ಠಾಕ್ರೆ..........
ಆಡಳಿತದ ಗಂಧ ಗಾಳಿಯೂ ಇಲ್ಲದ, ಸೇಡು ದ್ವೇಷ ಅಸೂಯೆಯ ಮನೋಭಾವದ ಗಲಭೆ ಕೋರನೊಬ್ಬ ಪ್ರಜಾಪ್ರಭುತ್ವದ ಹೀನ ಸುಳಿಯೊಂದನ್ನು ಹಿಡಿದುಕೊಂಡು ಅಧಿಕಾರದಲ್ಲಿ ತೇಲುತ್ತಿರುವ ವ್ಯಂಗಚಿತ್ರಕಾರನ ಶಿಲ್ಪದಲ್ಲಿ ಮೂಡಿದ ವ್ಯಂಗ್ಯ. ಉದ್ರೇಕ ಮತ್ತು ಪ್ರಚೋದನಕಾರಿ ವಿಷಯಗಳಿಗೆ ಹೇಗೆ ಒಂದು ಬೃಹತ್ ರಾಜ್ಯದ ಮುಖ್ಯಮಂತ್ರಿ ಪ್ರತಿಕ್ರಿಯಿಸಬೇಕು ಎಂಬುದನ್ನು ಅರಿಯದ ಮೂರ್ಖ .......
ಕಂಗನಾ ರನೋತ್........
ಸಿನಿಮಾ ನಟಿಯೊಬ್ಬಳು ವಿವೇಚನೆ ಇಲ್ಲದೆ ತನಗೆ ಒದಗಿದ ಜನಪ್ರಿಯತೆ, ಮಹಿಳೆ ಎಂಬ ಗೌರವವನ್ನು ಹೇಗೆ ಸಮಾಜಮುಖಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಯದೆ ಪ್ರಚಾರಕ್ಕಾಗಿ ಸತ್ಯದ ಹೆಸರಿನಲ್ಲಿ ಅವಿವೇಕಿಯಂತೆ ಮಾತನಾಡಿ ರಾಜಕೀಯ ದಾಳವಾದ ಮತ್ತು ಸೇಡಿನ ಹಕ್ಕಿಯಂತೆ ಮಾತನಾಡಿ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾದ ನಟಿ. ಸಂಯಮ ಎಂಬುದೇ ಇಲ್ಲದ ಪ್ರಚಾರ ಪ್ರಿಯೆ.......
ಸಂಜಯ್ ರಾವತ್,
ಅನಿಲ್ ದೇಶ್ ಮುಖ್......
ಮಾಡುವ ಕೆಲಸ ಬಿಟ್ಟು ಇನ್ನೇನೋ ಮಾಡಿದಂತೆ......!!!
ಜೀವ ಜೀವನದ ಆಯ್ಕೆಯ ನಡುವೆ ಮನುಷ್ಯ ಪ್ರಾಣಿ ಒದ್ದಾಡುತ್ತಿರುವಾಗ ಇವರುಗಳು ತಮ್ಮ ತೆವಲುಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಮನುಷ್ಯ ಸಂಸ್ಕಾರದ ಯಾವ ಲಕ್ಷಣಗಳು ಇವರುಗಳು ಕಲಿತಿಲ್ಲ......
ಕೆಲವು ಪ್ರಖ್ಯಾತರು ಮತ್ತು ಕುಖ್ಯಾತರಿಗೆ ಒಂದು ಹುಚ್ಚು ಇದೆ. ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಮಾಧ್ಯಮಗಳ ಸುದ್ದಿಯಾಗಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಎಡಪಂಥೀಯ ಅಥವಾ ಬಲಪಂಥೀಯ ಮೂಲಭೂತವಾದಿಗಳ ಬೆಂಬಲ ಗಳಿಸಲು ಹಾಗು ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳ ಬೆಂಬಲ ಗಳಿಸಲು ಪ್ರಯತ್ನಿಸುತ್ತಾರೆ. ಹಿಂದೆ ದಾವೂದ್ ಇಬ್ರಾಹಿಂ ಮತ್ತು ಚೋಟಾ ರಾಜನ್ ಎಂಬ ಕ್ರಿಮಿನಲ್ ಗಳು ಸಹ ಇದೇ ತಂತ್ರ ಅನುಸರಿಸಿದರು. ಕೊನೆಗೆ ಇದರ ಲಾಭವನ್ನು ನಮ್ಮ ಶತ್ರು ದೇಶ ಪಾಕಿಸ್ತಾನ ಪಡೆಯಿತು.
ಮಹಾರಾಷ್ಟ್ರ " ಪಾಕಿಸ್ತಾನ ಆಕ್ರಮಿತ ಕಾಶ್ಮೀರ " ಎಂಬ ಕಂಗನಾ ಅತಿರೇಕದ ಹೇಳಿಕೆ, ಅದಕ್ಕೆ ವಿರುದ್ಧವಾಗಿ ಒಂದು ಸರ್ಕಾರ ಸೇಡಿಗೆ ಬಿದ್ದು ಆಕೆಯ ಕಟ್ಟಡ ನೆಲ ಸಮ ಮಾಡುವುದು, ಅರ್ಣಬ್ ಎಂಬ ದಗಲ್ಬಾಜಿ ಅದಕ್ಕೆ ಪೆಟ್ರೋಲ್ ಸುರಿಯುವುದು, ಪುಡಿ ರೌಡಿಗಳಂತೆ ಏಕ ವಚನದ ಪದ ಪ್ರಯೋಗಗಳು ಇವರು ಸಾರ್ವಜನಿಕ ಜೀವನದಲ್ಲಿ ಇರಲು ಅಯೋಗ್ಯರು ಎಂಬುದನ್ನು ಸೂಚಿಸುತ್ತದೆ.
ಸಂಯಮ ಇಲ್ಲ, ಸಭ್ಯತೆ ಇಲ್ಲ, ಕಾನೂನಿನ ಭಯವಿಲ್ಲ, ಸಂಸ್ಕಾರದ ಸುಳಿವಿಲ್ಲ, ಸಂಸ್ಕೃತಿಗೆ ಬೆಲೆ ಇಲ್ಲ,
ನೈತಿಕತೆ ಇಲ್ಲವೇ ಇಲ್ಲ.
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೇಲೆ ದ್ವೇಷ, ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಮೇಲೆ ದ್ವೇಷ. ಇದರ ಮಧ್ಯೆ ಬೆಂಕಿ ಹಾಕಿ ಚಳಿ ಕಾಣಿಸಿಕೊಳ್ಳುವ ಅರ್ಣಬ್ ತರದ ಪತ್ರಕರ್ತರು, ಜನ ಮಾತ್ರ ಅನಾಥರು.....
ಸಾವಿರಾರು ವರ್ಷಗಳ ಸಾಮಾಜಿಕ ಅನುಭವದಿಂದ, ಅಪಾರ ಅಧ್ಯಯನದಿಂದ ಒಂದು ಅತ್ಯುತ್ತಮ ಸಂವಿಧಾನ ರಚಿಸಿ ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಮಗೆ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಘಟನೆಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು. ಕೆಲವೇ ರಾಜಕಾರಣಿಗಳು, ಸಿನಿಮಾ ನಟರು, ಪತ್ರಕರ್ತರು ಒಂದು ವ್ಯವಸ್ಥೆಯನ್ನು ತಮ್ಮ ವೈಯಕ್ತಿಕ ತೆವಲಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವಾಗ ಸರಿ ತಪ್ಪುಗಳ ಚರ್ಚೆಗಿಂತ ಇಂತಹ ವ್ಯಕ್ತಿಗಳನ್ನು ನಿರ್ಲಕ್ಷಿಸಬೇಕು ಮತ್ತು ಸಾಧ್ಯವಾದರೆ ಬಹಿಷ್ಕರಿಸಬೇಕು.
ಅರ್ಣಬ್ ರನ್ನು ಪತ್ರಕರ್ತರು,
ಕಂಗನಾರನ್ನು ಸಿನಿಮಾ ಉದ್ಯಮದವರು, ಉದ್ದವ್ ಠಾಕ್ರೆಯವರನ್ನು ಸಾರ್ವಜನಿಕರು ಬಹಿಷ್ಕರಿಸಬೇಕು. ಮೊದಲು ಸಾರ್ವಜನಿಕ ಜೀವನದ ನೀತಿ ನಿಯಮಗಳನ್ನು ಅವರಿಗೆ ಕಲಿಸಬೇಕು.
ವಿಷಯ ಏನೇ ಇರಲಿ ಮೊದಲು ಜವಾಬ್ದಾರಿಯುತ ನಾಗರಿಕರಾಗಿ ವರ್ತಸುವಂತೆ ಮಾಡಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ವ್ಯತ್ಯಾಸ ತಿಳಿಸಬೇಕು. ಇಲ್ಲದಿದ್ದರೆ ಈ ರೀತಿಯ ಘಟನೆಗಳು ನಡೆದಾಗ ಪರ ವಿರೋಧದ ಚರ್ಚೆಗಳಿಗೆ ನಮ್ಮನ್ನು ಉಪಯೋಗಿಸಿಕೊಂಡು ನಮ್ಮನ್ನೂ ಮೂರ್ಖರನ್ನಾಗಿಸುತ್ತಾರೆ.
ಸರಿ ತಪ್ಪುಗಳು ನಾಗರಿಕ ವರ್ತನೆಯ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ರೀತಿಯ ದ್ವೇಷ ಅಸೂಯೆಯ ಅನಾಗರಿಕ ವ್ಯಕ್ತಿತ್ವದವರಿಗೆ ಯಾವುದೇ ಚರ್ಚೆಗಳ ಅವಶ್ಯಕತೆ ಇಲ್ಲ. ಅವರುಗಳು ಬಹಿಷ್ಕಾರಕ್ಕೆ ಮಾತ್ರ ಅರ್ಹರು. ಆಗಲೇ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯ.........
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ : ವಿವೇಕಾನಂದ. ಹೆಚ್.ಕೆ.

Social Plugin