ನೀರು ಸಂರಕ್ಷಿಸಿದವರೇ ನಿಜವಾದ ಶ್ರೀಮಂತರು
ರಬಕವಿ-ಬನಹಟ್ಟಿ,ಸೆ19: ಹೆಚ್ಚೆಚ್ಚು ಕೊಳವೆಬಾವಿ ಕೊರೆಸುವದು ಕೂಡ ನೀರಿನ ತೀವ್ರತೆ ಸೂಚಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಮಳೆ ನೀರು ಸಂಗ್ರಹ ವಿಧಾನವನ್ನು ಅಳವಡಿಸಿಕೊಳ್ಳುವದು ಸೂಕ್ತ, ಪ್ರತಿ ಕೊಳವೆಬಾವಿಗೂ ಇಂಗುಗುಂಡಿ ನಿರ್ಮಿಸುವದು ಅಗತ್ಯವೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಇಲ್ಲಿನ ಬಿಲಾಲ್ ಮಸೂತಿ ಹಿಂಭಾಗದಲ್ಲಿ ಕೊಳವೆ ಬಾವಿ ಕೊರೆಯುವ ಸಂದರ್ಭ ಮಾತನಾಡಿದ ಅವರು, ಅಂತರ್ಜಲ ಮಟ್ಟ ಹೆಚ್ಚಿಸಬೇಕಾದರೆ ಮೊದಲು ಜಲ ಮರುಪೂರಣ ಅಳವಡಿಸಿಕೊಳ್ಳಬೇಕು. ಇಂದಿನ ದಿನದಲ್ಲಿ ಹಣ, ಬಂಗಾರಕ್ಕಿಂತ ನೀರನ್ನು ಸಂರಕ್ಷಿಸಿಕೊಂಡವರು ನಿಜವಾದ ಶ್ರೀಮಂತರು. ದೇಶದಲ್ಲಿ 7 ಕೋಟಿ ಕೊಳವೆ ಬಾವಿಗಳಿದ್ದು, ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಳೆ ನೀರು ಸಂಗ್ರಹ ಮಾಡುವ ಮೂಲಕ ಈ ಕೊಳವೆಬಾವಿಗಳ ಅಂತರ್ಜಲ ಹೆಚ್ಚಿಸಬಹುದಾಗಿದೆ ಎಂದರು.
ರಬಕವಿ-ಬನಹಟ್ಟಿ ನಗರಸಭೆಯಾದ್ಯಂತ ಅವಶ್ಯವಿರುವ ಪ್ರದೇಶಗಳಲ್ಲಿ ಕೊಳವೆಬಾವಿಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಕಡಿಮೆಗೊಂಡು ನೀರಿನ ಮಹತ್ವವನ್ನು ಅರಿಯಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ನೀರು ಸುಲಭವಾಗಿ ದೊರಕುವದೆಂದರು.
ಧರೆಪ್ಪ ಉಳ್ಳಾಗಡ್ಡಿ, ನಗರಸಭೆ ಸದಸ್ಯ ಮುರಾದ ಮೋಮಿನ್, ಸಿದ್ರಾಮ ಸವದತ್ತಿ, ಭೀಮಶಿ ಪಾಟೀಲ, ಬಂದೇನವಾಜ್ ಡಾಂಗೆ, ಎಸ್.ಬಿ. ಶರಣಪ್ಪನವರ, ಅಶೋಕ ರಾವಳ, ಬಶೀರ ಮೋಮಿನ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಮಲಿಕ್ ಬಾರಿಗಡ್ಡಿ, ಬಿಲಾಲ್ ಮಸೀದ್ ಅಧ್ಯಕ್ಷರು ಹಾಗು ದೈವ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Social Plugin