ಬನಹಟ್ಟಿಯ ಮಿಳ್ಳಿಯವರ ತೋಟದಲ್ಲಿ ಶಾಸಕ ಸಿದ್ದು ಸವದಿಯವರಿಗೆ ರೈತ ಬಾಂಧವರಿಂದ ಸನ್ಮಾನಿಸಲಾಯಿತು.

                     ನೇಕಾರರ ಹಿತ ಕಾಪಾಡುವಲ್ಲಿ ಶ್ರಮಿಸುವೆ-ಸವದಿ
ರಬಕವಿ-ಬನಹಟ್ಟಿ,ಸೆ12: ರಾಜ್ಯದಲ್ಲಿನ ಸುಮಾರು 2 ಲಕ್ಷ ನೇಕಾರರ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಕೊರೊನಾ ಮಾಹಾಮಾರಿಯಿಂದಾಗಿ ಮತ್ತಷ್ಟು ಸಂದಿಗ್ಧ ಪರಿಸ್ಥಿತಿಗೆ ತಂದೊಡ್ಡಿದ್ದು, ಇವೆಲ್ಲದಕ್ಕೂ ರಾಮಬಾಣವಾಗಿ ಸರ್ಕಾರದಿಂದ ದೊರಕುವ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಮೂಲಕ ನೇಕಾರರ ಹಿತ ಕಾಪಾಡುವದಾಗಿ ತೇರದಾಳ ಶಾಸಕ, ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ನಗರದ ವಾರ್ಡ್ ನಂ.8 ರ ಮಿಳ್ಳಿ ತೋಟದಲ್ಲಿ ರೈತ ಬಾಂಧವರಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಘೋಷಣೆ ಮಾಡಿದರನ್ವಯ ಪ್ರತಿ ನೇಕಾರ ಕುಟುಂಬಕ್ಕೂ ತಲಾ 1 ಲಕ್ಷ ರೂ.ಗಳವರೆಗಿನ ಸಹಕಾರಿ ಬ್ಯಾಂಕ್ ಹಾಗು ಸಂಘಗಳಲ್ಲಿರುವ ಸಾಲವನ್ನು ಮನ್ನಾ ಮಾಡುವಲ್ಲಿ ಅಧಿಕೃತವಾಗಿ ಯಶಸ್ವಿಯಾಗಿದೆ. ಕೆಲವೇ ಕುಟುಂಬಗಳಿಗೆ ಈ ಯೋಜನೆ ತಲುಪಬೇಕಿದ್ದು, ಸಹಕಾರಿ ಸಂಘಗಳ ಲೋಪದೋಷದಿಂದಾಗಿ ವಿಳಂಬಕ್ಕೆ ಕಾರಣವಾಗಿದೆ. ಶೀಘ್ರದಲ್ಲಿಯೇ ಬಾಕಿ ಉಳಿದಿರುವ ನೇಕಾರರ ಸಾಲಮನ್ನಾ ಮಾಡುವದಾಗಿ ತಿಳಿಸಿದರು. ಒಟ್ಟು 88 ಕೋಟಿ ರೂ.ಗಳಷ್ಟು ಸಾಲಮನ್ನಾಗೆ ಮೀಸಲಿಟ್ಟಿರುವ ರಾಜ್ಯ ಸರ್ಕಾರ ಇದೀಗ 58 ಕೋಟಿ ರೂ.ಗಳನ್ನು ಆಯಾ ಸಹಕಾರಿ ಸಂಘ ಹಾಗು ಬ್ಯಾಂಕ್‍ಗಳಿಗೆ ಒದಗಿಸಿದೆ. ಇನ್ನುಳಿದ ಫಲಾನುಭವಿಗಳಿಗೂ ಉಳಿದ 30 ಕೋಟಿ ರೂ.ಗಳನ್ನು ಹಂಚಲಾಗುವದೆಂದರು.
ರಾಜು ಅಂಬಲಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಲಕ್ಕಪ್ಪ ಪಾಟೀಲ, ಆನಂದ ಕಂಪು, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಹೊಸೂರ, ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿ ಉಕುಮನಾಳ ಅವರನ್ನು ಸನ್ಮಾನಿಸಲಾಯಿತು.
ನಗರಸಭಾ ಸದಸ್ಯ ಗೌರಿ ಮಿಳ್ಳಿ, ಶಾಂತಾ ಸೊರಗಾಂವಿ, ಮಾಲಾ ಬಾವಲತ್ತಿ, ವೈಷ್ಣವಿ ಬಾಗೇವಾಡಿ, ಪವಿತ್ರಾ ತುಕ್ಕಣ್ಣವರ, ಈಶ್ವರ ಪಾಟೀಲ, ರಮೇಶ ಮಿಳ್ಳಿ, ಮಲ್ಲಪ್ಪ ಹಂದಿಗುಂದ, ಜಯವಂತ ಮಿಳ್ಳಿ ಸೇರಿದಂತೆ ಅನೇಕರಿದ್ದರು.