ರಬಕವಿಯ ಜಿಎಲ್‍ಬಿಸಿ ತಂಗುದಾಣದಲ್ಲಿ ರೈತರು ನಡೆಸಿದ ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿದರು.


ಕಬ್ಬಿನ ಬಾಕಿ ಹಣ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
*ಜನಪ್ರತಿನಿಧಿಗಳು ಮಧ್ಯಸ್ಥಿಕೆ ವಹಿಸಲು ರೈತರ ಒತ್ತಾಯ
ರಬಕವಿ-ಬನಹಟ್ಟಿ,ಸೆ11: ತಾಲೂಕಿನ ಸಾವರಿನ್ ಸಕ್ಕರೆ ಕಾರ್ಖಾನೆಯಿಂದ 2017-18 ರಲ್ಲಿನ ಕಬ್ಬಿನ ಬಾಕಿ ಹಣ ರೈತರಿಗೆ ಬರಬೇಕಾದದ್ದು ಇನ್ನೂ ದೊರೆತಿಲ್ಲ. ಇದನ್ನು ಸರ್ಕಾರ ಅಥವಾ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವದೆಂದು ಜಿಪಂ ಉಪಾಧ್ಯಕ್ಷೆ, ರೈತ ಮುಖಂಡ ಮುತ್ತಪ್ಪ ಕೋಮಾರ ಹೇಳಿದರು.
ರಬಕವಿಯ ಜಿಎಲ್‍ಬಿಸಿ ತಂಗುದಾಣದಲ್ಲಿ ದಿಢೀರ್ ಸಭೆ ನಡೆಸಿದ ರೈತರು ಸುಮಾರು 1500 ರೈತರ 21 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಲ್ಲಿ ಜನಪ್ರತಿನಿಧಿಗಳು ಮಧ್ಯಸ್ಥಿಕೆ ವಹಿಸಬೇಕೆಂದರು. ಇಬ್ಬರು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗು ಲಕ್ಷ್ಮಣ ಸವದಿ ನೆರೆಯ ಕ್ಷೇತ್ರದವರಾಗಿದ್ದು, ಕಾರ್ಖಾನೆ ಹಾಗು ರೈತರ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯಿದ್ದರೂ ಯಾವದೇ ಸಹಕಾರ ನೀಡದಿರುವದು ವಿಪರ್ಯಾಸದ ಸಂಗತಿಯಾಗಿದೆ ಎಂದು ಕೋಮಾರ ಬೇಸರ ವ್ಯಕ್ತಪಡಿಸಿದರು.
ತಕ್ಷಣವೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸುವ ಮೂಲಕ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೇಟಿ ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೇಟಿ, ತಾಲೂಕಾಧ್ಯಕ್ಷ ಹೊನ್ನಪ್ಪ ಬಿರಡಿ, ಶ್ರೀಕಾಂತ ಘೂಳನ್ನವರ, ಶಿವಾನಂದ ಚೌಗಲಾ, ನಾಗೇಶ ಚಿನವಾರ, ಬಸವಂತ ಕಾಂಬಳೆ, ಮಲ್ಲು ಬರವ, ಅಲ್ಲಪ್ಪ ಆರೆನ್ನಾಡ, ಲಕ್ಷ್ಮಣ ಬ್ಯಾಳಿ, ಬಂದು ಪಕಾಲಿ, ಸುರೇಶ ಢವಳೇಶ್ವರ ಸೇರಿದಂತೆ ಅನೇಕರಿದ್ದರು.
`ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈತರ ಕಬ್ಬಿನ ಬಿಲ್ ಹಣ ಸಂದಾಯವಾಗುವಲ್ಲಿ ಸರ್ಕಾರ ತಕ್ಷಣವೇ ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವದು.’--- ಗಂಗಾಧರ ಮೇಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸಂಘ.
`ಸಾವರಿನ್ ಸಕ್ಕರೆ ಕಾರ್ಖಾನೆಗೆ ಸಂಬಂಧ 20 ಕೋಟಿ ರೂ. ರೈತರ ಕಬ್ಬಿನ ಬಿಲ್ ಬಾಕಿಯಿದೆ. ಅಪೆಕ್ಸ್ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್‍ಗಳು ಈಗಾಗಲೇ ಕಾರ್ಖಾನೆಗೆ ಸಾಲ ನೀಡಿದ್ದು, ಕಾರ್ಖಾನೆ ಹರಾಜಿಗೆ ಕಾನೂನು ತೊಡಕಾಗಿದೆ. ಸರ್ಕಾರದಿಂದ ಬ್ಯಾಂಕ್‍ಗೆ ತಿಳಿಸಲಾಗಿದ್ದು, ರೈತರ ಬಾಕಿ ಹಣ ನೀಡಿದ್ದಲ್ಲಿ ತಮ್ಮ ಸುಪರ್ದಿಗೆ ಬಿಟ್ಟುಕೊಡುವದಾಗಿ ತಿಳಿಸಿದ್ದು, ಬ್ಯಾಂಕ್‍ನ ಉತ್ತರದ ನಿರೀಕ್ಷೆಯಲ್ಲಿದ್ದೇವೆ. ಅಲ್ಲದೆ ಸದ್ಯ ನ್ಯಾಯಾಲಯ ಮೆಟ್ಟಿಲೇರಿದ್ದು, ಮುಂದಿನ ಮಾರ್ಗಸೂಚಿಯಂತೆ ಕಾರ್ಯನಿರ್ವಹಣೆಯಾಗುವ ಮೂಲಕ ರೈತರಿಗೆ ನ್ಯಾಯ ಒದಗಿಸಲು ಬದ್ಧ’.------ಸಿದ್ದು ಹುಲ್ಲೋಳ್ಳಿ, ಉಪವಿಭಾಗಾಧಿಕಾರಿ, ಜಮಖಂಡಿ.
`ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ರೈತರಿಂದ ಕಬ್ಬು ಖರೀದಿಸಿದ ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ಬಾಕಿ ಹಣ ರೈತರಿಗೆ ಕಂಟಕವಾಗಿದೆ. ಶೀಘ್ರವೇ ಇತ್ಯರ್ಥಗೊಳ್ಳಲಿ’.----ಹೊನ್ನಪ್ಪ ಬಿರಡಿ, ತಾಲೂಕಾಧ್ಯಕ್ಷ, ರೈತ ಸಂಘ, ರಬಕವಿ-ಬನಹಟ್ಟಿ.