ಶಿಕ್ಷಕರ ದಿನದಂದು ನನ್ನದೊಂದು ಸಣ್ಣ ತರಗತಿ.........

ಇಂದಿನ ಪಠ್ಯ # √
ಟಿವಿ ಸುದ್ದಿ ಮಾಧ್ಯಮಗಳ ಹುಚ್ಚಾಟ ಮತ್ತು ವೀಕ್ಷಕರ ಪೀಕಲಾಟ
*******************************

ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಹೆಚ್ಚಿಗೆ ಹೇಳುವುದು ಏನೂ ಇಲ್ಲ........

ಕಡ್ಡಾಯ ಶಿಕ್ಷಣದ ಪರಿಣಾಮವಾಗಿ, ನಾವು ಅನಧಿಕೃತವಾಗಿ ಕುಟುಂಬ ಮತ್ತು ಸುತ್ತಲಿನ ಪರಿಸರದಿಂದ ಪ್ರಭಾವಿತರಾಗಿ ಬೆಳೆದರೆ, ಅಧಿಕೃತವಾಗಿ ಶಾಲೆ, ಶಿಕ್ಷಕರು, ಪಠ್ಯ ಮತ್ತು ಶಿಕ್ಷಣ ಕ್ರಮದ ಮೂಲಕವೇ ನಮ್ಮೆಲ್ಲ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತೇವೆ. ನಮ್ಮ ಚಿಂತನೆಗಳು ಟಿಸಿಲೊಡೆದು ಒಂದು ರೂಪ ಬರುವುದೇ ಆ ಬಾಲ್ಯದ ಶಿಕ್ಷಣ ಮತ್ತು ಆ ವಯಸ್ಸಿನಲ್ಲಿ.

ಒಬ್ಬ ವ್ಯಕ್ತಿ ಶಿಕ್ಷಣ ಮತ್ತು ಶಿಕ್ಷಕರಿಂದ ರೂಪುಗೊಳ್ಳುವುದಾದರೆ ಇಡೀ ಸಮಾಜ ಇದೇ ವ್ಯಕ್ತಿಗಳ ಒಂದು ಸಮೂಹ. ಅಂದರೆ ಶಿಕ್ಷಣ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು......
-------------------------------------------

Philo Taylor Farnsworth ಎಂಬುವವರು Television ಎಂಬುದನ್ನು ಕಂಡುಹಿಡಿದರು.
ಇದೊಂದು ಅದ್ಬುತ ಎಲೆಕ್ಟ್ರಾನಿಕ್ ತಂತ್ರಜ್ಞಾನ ಎಂಬುದು ನಿಜ. ಮನರಂಜನೆ, ಜ್ಞಾನ, ಮಾಹಿತಿ ಎಲ್ಲವನ್ನೂ ದೃಶ್ಯಗಳಾಗಿ ನಮ್ಮ ಮನೆಯಲ್ಲಿಯೇ ಕುಳಿತು ಸವಿಯುವ ಅತ್ಯುತ್ತಮ ವಿಧಾನ. 

ಅಂತಹ ತಂತ್ರಜ್ಞಾನದ ಒಂದು ಶಿಶು ಟಿವಿ ಸುದ್ದಿ ಮಾಧ್ಯಮಗಳು. ವಿಶ್ವದ ಮೂಲೆ ಮೂಲೆಯ ಸುದ್ದಿಗಳನ್ನು ಜಾಹೀರಾತುಗಳನ್ನು, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ಐತಿಹಾಸಿಕ ಮುಂತಾದ ಎಲ್ಲವನ್ನೂ ನಮಗೆ ನೀಡುವ ಒಂದು ಸಮೂಹ ಸಂಪರ್ಕ ಮಾಧ್ಯಮ.

ಸ್ಯಾಟಲೈಟ್ ತಂತ್ರಜ್ಞಾನದ ಮೂಲಕ ಅದನ್ನು ವೀಕ್ಷಿಸುತ್ತೇವೆ. ಇಷ್ಟೊಂದು ಮಹತ್ವದ ಮತ್ತು ಅತ್ಯುತ್ತಮ ವಿಧಾನವನ್ನು ಅದರಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರು ಹೇಗೆ ಉಪಯೋಗಿಸುತ್ತಿದ್ದಾರೆ ಎಂದು ನೋಡಿದರೆ ದುಃಖ ಮತ್ತು ಕೋಪ ಒಟ್ಟಿಗೆ ಬರುತ್ತದೆ.

ರಾಜಕಾರಣಿಗಳ ಮೇಲೆ ಇದ್ದಷ್ಟೇ ಕೋಪ ಈಗ ಟಿವಿ ನ್ಯೂಸ್ ಚಾನಲ್ ಗಳ ಕಡೆ ತಿರುಗುತ್ತಿದೆ. ಆ ಕಾರಣಕ್ಕೇ ಟಿವಿಯವರು ಕೂಡ 'ನಾವು ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಮತ್ತು ನಾವೂ ಕೂಡ ಕೊರೋನಾ ವಾರಿಯರ್ಸ್ ' ಎಂದು ಮತ್ತೆ ಮತ್ತೆ ಘೋಷಿಸುತ್ತಿವೆ. ಆದರೆ ಜನರು ಮಾಧ್ಯಮ ವೈರಸ್‌ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. 
ಹಾಗಿದ್ದರೆ ಸತ್ಯ ಏನು?.

ಮೊದಲನೆಯದಾಗಿ ಮಾಧ್ಯಮ ಎಂಬುದೇ ಒಂದು ಅತ್ಯುತ್ತಮ ವ್ಯವಸ್ಥೆ. ಸಮಾಜದ ಓರೆಕೋರೆಗಳನ್ನು ಮತ್ತು ಸ್ವಾಸ್ಥ್ಯವನ್ನು ಕಾಪಾಡಲು ಇರುವ ಪ್ರಬಲ ಅಸ್ತ್ರ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕಾನೂನಾತ್ಮಕವಾಗಿ ಸಮಾಜವನ್ನು ನಿಯಂತ್ರಿಸಿದರೆ ಮಾಧ್ಯಮ ನೈತಿಕ ಮೌಲ್ಯಗಳನ್ನು ಎತ್ತಿಹಿಡಿದು ಇಡೀ ಜನ ಸಮುದಾಯಕ್ಕೆ ಸಂವಿಧಾನತ್ಮಕ ಹಕ್ಕುಗಳನ್ನು ತಿಳಿಸಿ ಅವರು ತಮ್ಮ ಕರ್ತವ್ಯಗಳನ್ನೂ ಪಾಲಿಸುವಂತೆ ಮಾಡಬಲ್ಲ ಕಾವಲುಗಾರ. ಒಂದು ರೀತಿಯಲ್ಲಿ ದುಷ್ಟ ಶಿಕ್ಷಕ ಶಿಷ್ಠ ರಕ್ಷಕ ಎಂಬ ಆಧುನಿಕ ದೇವರ ರೂಪದಂತೆ.

ಸ್ವಾತಂತ್ರ್ಯಾ ನಂತರ ಬಹುತೇಕ ಪತ್ರಿಕಾ ಮಾಧ್ಯಮಗಳು ಸಣ್ಣ ಪುಟ್ಟ ದೋಷಗಳ ನಡುವೆಯೂ ಸಾಕಷ್ಟು ಉತ್ತಮವಾಗಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿವೆ. ಕೆಲವು ಸೇವಾಮನೋಭಾವದ ರಾಜಕಾರಣಿಗಳಂತೆ ಪತ್ರಕರ್ತರೂ ದಕ್ಷ, ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ಮಾಡಿದ್ದಾರೆ. ಕರ್ನಾಟಕದ ಮಟ್ಟಿಗೂ ಇದು ವಾಸ್ತವ. ಕೆಲವು ವಾರಪತ್ರಿಕೆಗಳು ಕೆಲವೊಮ್ಮೆ ಸ್ವಲ್ಪ ಖಾರವಾದ ಭಾಷೆ ಬಳಸಿರುವುದನ್ನು ಬಿಟ್ಟರೆ ಬಹುತೇಕ ಸಂವೇದನಾಶೀಲ ಮತ್ತು ವಿಚಾರ ಪ್ರಚೋದಕವಾಗಿದ್ದವು.

ಆದರೆ ಇಂದಿನ ಟಿವಿ ಸುದ್ದಿ ಮಾಧ್ಯಮಗಳ ವಸ್ತುಸ್ಥಿತಿ ಅದಕ್ಕೆ ತದ್ವಿರುದ್ದವಾಗಿದೆ. ಇಂದು ಈ ಮಾಧ್ಯಮಗಳ ಮೇಲೆ ಜನಸಾಮಾನ್ಯರು ಬಳಸುತ್ತಿರುವ ಅತ್ಯಂತ ಕೆಟ್ಟ ಭಾಷೆಗೆ ಮೂಲ ಕಾರಣ ಅದೇ ಮಾಧ್ಯಮಗಳೇ. ಶುದ್ಧ, ಸಭ್ಯ ಅನುಕರಣೀಯ ಭಾಷೆ ಬಳಸಬೇಕಾದ ಮಾಧ್ಯಮದವರೆ ಪುಂಡ ಪೋಕರಿಗಳ, ಕುಡುಕರ, ಬೀದಿ ಜಗಳಗಂಟರ ಭಾಷೆಯನ್ನು ಸಭ್ಯತೆಯ ಎಲ್ಲೆ ಮೀರಿ ಪ್ರಯೋಗಿಸಿದ ಪರಿಣಾಮ ಅದೇ ಅವರಿಗೆ ತಿರುಗುಬಾಣವಾಗಿದೆ.

ಪತ್ರಕರ್ತರೆಂದರೆ ಬುದ್ದಿವಂತರು ತಿಳಿದವರು ವಿವೇಚನೆಯಿರುವವರು ಗೌರವಾನ್ವಿತರು ಎಂದು ಭಾವಿಸಿದ್ದ ಸಾಮಾನ್ಯ ವೀಕ್ಷಕರು ಟಿವಿಗಳಲ್ಲಿ ಬಳಸಲ್ಪಟ್ಟ (ವಿಷಯ ಏನೇ ಇರಲಿ) ಮೂರನೇ ದರ್ಜೆಯ ಭಾಷೆ ನೋಡಿ ಸಹಜವಾಗೇ ಪ್ರೇರಿತರಾದರು. 
ಇದು ಕ್ರಿಯೆಗೆ ಪ್ರತಿಕ್ರಿಯೆ ಅಷ್ಟೆ.
ಅತ್ಯಂತ ಕೆಟ್ಟ ವಿಮರ್ಶೆ, ವಿವೇಚನೆಯಿಲ್ಲದ ಚರ್ಚೆಗಳ ಮುಖಾಂತರ ಜನರ ಯೋಚನಾ ಕ್ರಮದ ಮೇಲೆಯೇ ದಾಳಿ ಮಾಡಿದ ಅವರ ತಲೆಕೆಡಿಸಿ ಈಗ ಅವರಿಂದಲೇ ಟೀಕೆಗೆ ಒಳಗಾಗುತ್ತಿದೆ. ಟೀಕೆ ಉಗ್ರವಾಗಿದ್ದರೂ, ಆಕ್ರೋಶಭರಿತವಾಗಿದ್ದರೂ ಭಾಷೆ ಸಭ್ಯವಾಗಿರಬೇಕಿತ್ತು. ಪದಗಳು ಪ್ರಬುದ್ಧವಾಗಿರಬೇಕಿತ್ತು. ಅಲ್ಲಿಯೇ ಸೋಲಾಗಿದೆ. ವ್ಯವಸ್ಥೆಯ ಹುಳುಕುಗಳನ್ನು ಟೀಕಿಸುವ ಬರದಲ್ಲಿ ಬಾಯಿಗೆ ಬಂದಂತೆ ತಲೆಕೆಟ್ಟವರು ಮಾತನಾಡುವಂತೆ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಗಳು, MLA ರಾಜಕಾರಣಿಗಳನ್ನು ಏಕವಚನದಲ್ಲಿ ಟೀಕಿಸುತ್ತಿದ್ದರೆ ಅದು ALL MOST ಅಮ್ಮನ್, ಅಕ್ಕನ್, ಅಯ್ಯನ್ ಹಂತಕ್ಕೆ ಬಂದಿತು. ಕಲ್ಲು ಎಸೆಯುವ, ಟೈರು ಸುಡುವ ಅಪ್ರಬುದ್ಧರ ನಡವಳಿಕೆಗಳನ್ನು ಅಳವಡಿಸಿಕೊಂಡಂತಾಯಿತು.
                         
ಎಂತೆಂತಹ  ಮಹಾನ್ ಜ್ಞಾನಿಗಳು, ದಾಸರು, ಪಂಡಿತರು ತಿಪ್ಪರಲಾಗ ಹಾಕಿದರೂ ಬಗೆಹರಿಸಲಾಗದ ಸಾಂಸಾರಿಕ ವಿಷಯಗಳನ್ನು ಬಗೆಹರಿಸಲು  ಇನ್ನು ಎಳೆಯ, ಬದುಕಿನ ಅ ಆ ಇ ಈ ಕಲಿಯುತ್ತಿರುವ Anchor ಗಳೆಂಬ ಪಡ್ಡೆಗಳನ್ನು ಕ್ಯಾಮರಾ ಮುಂದೆ ಕೂರಿಸಿ ಅಪಹಾಸ್ಯಕ್ಕೆ ಈಡಾದರು. ದ್ವೇಷದಲ್ಲಿನ ಪ್ರೀತಿ, ಪ್ರೀತಿಯಲ್ಲಿನ ದ್ವೇಷ ಅರಿಯದ ಸಂಸಾರ ಸಾಗರದ ಸೂಕ್ಷ್ಮಾತಿಸೂಕ್ಷ್ಮಗಳ ಲವಲೇಶವೂ ತಿಳಿಯದ ಮೇಕಪ್ ರಾಜ ರಾಣಿಯರು ಮೊದಲೇ ಬೀದಿರಂಪ ಮಾಡಿಕೊಂಡ ಸಾಂಸಾರಿಕ ಜಗಳಗಳಲ್ಲಿ ತೀರ್ಪಗಾರರಾಗಿ ತೇಪೆಹಾಕುವ ಕೆಲಸ ಮಾಡಿದರು. ಅವರೇನು ತತ್ವಜ್ಞಾನಿಗಳೆ, ಸಮಾಜ ಶಾಸ್ತ್ರಜ್ಞರೆ, ಕಾನೂನು ಪಂಡಿತರೆ.........
                 
ಯಾವುದೋ ಬಾವುಟ ಹಿಡಿದ ಪುಢಾರಿಗಳನ್ನು, ಜೈಕಾರ ಹಾಕಿದವರನ್ನು ನಾಯಕರಂತೆ ಬಿಂಬಿಸಿದರು. ಕವಡೆ ಶಾಸ್ತ್ರ, ಗಿಣಿಶಾಸ್ತ್ರದವರನ್ನು ಭವಿಷ್ಯ ಬದಲಾಯಿಸುವ ದೇವರುಗಳಂತೆ ಚಿತ್ರಿಸಿದರು. ಈಗ ಅದರ ಫಲ ಅನುಭವಿಸುತ್ತಿದ್ದಾರೆ. Social Media ಗಳ ಜನಪ್ರಿಯತೆಯನ್ನು ಪೂರಕವಾಗಿ ಬಳಸದೆ ಅದರ ಪ್ರಭಾವಕ್ಕೆ ಬೆಚ್ಚಿ ವಿಚಲಿತರಾದರು. BREAKING NEWS ಗಳು ಅತ್ಯಂತ ಕಡಿಮೆ ಸಮಯದಲ್ಲಿಯೇ ಅಪಹಾಸ್ಯಕ್ಕೆ ಈಡಾಗಿರುವುದನ್ನು ಗಮನಿಸಬಹುದು.

ನಾವು ಯಾವುದನ್ನು ನಮ್ಮ ಮಕ್ಕಳಿಂದ ಎಳೆಯ ವಯಸ್ಸಿನಲ್ಲಿ ದೂರ ಇರಿಸಬೇಕು ಎಂದು ಭಾವಿಸುತ್ತಿದ್ದೆವೋ ಅದನ್ನು ಬಹಿರಂಗವಾಗಿ ಟಿವಿಯಲ್ಲಿ ಸಾವಿರಾರು ಬಾರಿ ತೋರಿಸುವ ಲಜ್ಜೆಗೆಟ್ಟ ವರ್ತನೆಗಳಿಗು ಈ ಟಿವಿ ಸುದ್ದಿ ಮಾಧ್ಯಮಗಳು ಕಾರಣವಾಗುತ್ತಿವೆ.
ಚರ್ಚೆಗಳನ್ನು ಜಗಳಗಂಟರ ವೇದಿಕೆಗಳಾಗಿ ಪರಿವರ್ತಿಸಿದೆ ಅಪಕೀರ್ತಿ ಇವರಿಗೇ ಸಲ್ಲುತ್ತದೆ.

ಹೇಳುತ್ತಾ ಹೋದರೆ ಅವರ ಪ್ರತಿ ನಿಮಿಷದ ಅಸಂಬದ್ಧ ಪ್ರಲಾಪಗಳಿಗೆ ಕೊನೆಯೇ ಇಲ್ಲ.

ಎಷ್ಟೋ ವಿಷಯಗಳನ್ನು ತಮ್ಮ ಮೂಗಿನ ನೇರಕ್ಕೇ ಮಾತನಾಡಿ ಅವರಿಗೆ ವಿರುದ್ಧ ಇರುವ ವಿಷಯಗಳನ್ನು ಮರೆಮಾಚುವ  ಕುತಂತ್ರ ಬುದ್ದಿ ಜನರ ಗಮನಕ್ಕೆ ಬರುತ್ತಿದೆ.

ಇಡೀ ಟಿವಿ ಮಾಧ್ಯಮ ಸಮೂಹವೇ ಇದಕ್ಕೆ ಕಾರಣ ಎಂದು ಹೇಳುತ್ತಿಲ್ಲ. ಆದರೆ ಮುಖ್ಯವಾಗಿ ಕೆಲವು ಮಾಲೀಕರು ಮತ್ತು ಸುದ್ದಿ ಸಂಪಾದಕರೇ ಇದಕ್ಕೆ ಬಹುತೇಕ ಹೊಣೆ.
ಹಣ ಮುಖ್ಯವೇ ಹೊರತು ಹಣವೇ ಮುಖ್ಯ ಎಂದು ಭಾವಿಸಿ ವಿವೇಚನೆಯಿಂದ ವರ್ತಿಸದ ಪರಿಣಾಮವೇ ಈ ದುಸ್ಥಿತಿ.
ಅದೇರೀತಿ.....
ಟಿವಿ ಸುದ್ದಿ ಮಾಧ್ಯಮಗಳಿಂದ ಆಗುತ್ತಿರುವ ಕೆಲವು ಒಳ್ಳೆಯ ಕೆಲಸಗಳು....................

ಮಾಧ್ಯಮಗಳು ವ್ಯಾಪಕವಾದ ನಂತರ......

ರಾಜಕಾರಣಿಗಳು, ಪೋಲೀಸರು ಅಥವಾ ಬೇರೆ ಪ್ರಭಾವಿ ವ್ಯಕ್ತಿಗಳು ಮೊದಲಿನಂತೆ ಸಾರ್ವಜನಿಕರು ಮತ್ತು ದುರ್ಬಲರ ಮೇಲೆ ದೌರ್ಜನ್ಯ ಮಾಡುವುದು ಕಡಿಮೆಯಾಗುತ್ತಿದೆ. ಮಾಧ್ಯಮಗಳ ಭಯವೇ ಇದಕ್ಕೆ ಮುಖ್ಯ ಕಾರಣ.....

ಜನ ಪ್ರತಿನಿಧಿಗಳು - ಸರ್ಕಾರಿ ಅಧಿಕಾರಿಗಳು ನೇರ ಭ್ರಷ್ಟಾಚಾರ ಮಾಡಲು ಹೆದರುತ್ತಾರೆ. ಮಾಹಿತಿ ಹಕ್ಕುಗಳ ಕಾನೂನು ಮತ್ತು ಮಾಧ್ಯಮ ಇದಕ್ಕೆ ನೇರ ಕಾರಣ.......

ಸಾರ್ವಜನಿಕ ಕುಂದುಕೊರತೆಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಅದಕ್ಕೆ ಒತ್ತಾಯಪೂರ್ವಕವಾಗಿಯಾದರೂ  ಸ್ವಲ್ಪ ಮಟ್ಟಿಗೆ ಬೇಗ ಸ್ಪಂದನೆ ಸಿಗುತ್ತದೆ. ಮೊದಲಿನಷ್ಟು ನಿರ್ಲಕ್ಷಿಸಲು ಸಾಧ್ಯವಿಲ್ಲ...........

ಹಳ್ಳಿಗಳ ಅಥವಾ ನಿರ್ಲಕ್ಷಿತ ಸಮುದಾಯಗಳ ಬಹಳಷ್ಟು ವಿವಿಧ ಕ್ಷೇತ್ರಗಳ ಪ್ರತಿಭೆಗಳು ಮುಖ್ಯವಾಹಿನಿಯ ಬೆಳಕಿಗೆ ಬರಲು ಮಾಧ್ಯಮಗಳು ಸಹಾಯ ಮಾಡಿವೆ.........

ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಕೆಲವು ಸಾಧಕರು ಮತ್ತು ಒಂದಷ್ಟು  ವಿಶೇಷ ಸಂದರ್ಭದಲ್ಲಿ ಸಾಮಾನ್ಯ ಜನರ ಬಗ್ಗೆಯೂ ಕಾರ್ಯಕ್ರಮ ರೂಪಿಸಿ ಹಣ ಸಂಗ್ರಹಿಸಿ ಅವರಿಗೆ ನೆರವಾಗುತ್ತಿರುವುದು ಸಹ ಮಾಧ್ಯಮಗಳ ಒಳ್ಳೆಯ ಕೆಲಸ.

ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಪೋಲೀಸ್ ಮತ್ತು ಆರೋಗ್ಯ ಇಲಾಖೆಯ ರೀತಿಯಲ್ಲಿ ಮಾಧ್ಯಮಗಳು ಸಹ ಜನರ ಸಂಕಷ್ಟಕ್ಕೆ ಬಹುಬೇಗ ಸ್ಪಂದಿಸುವ ಕೆಲಸ ಮಾಡುತ್ತಿವೆ..........

ಕೆಲವು ಸಂದರ್ಭಗಳಲ್ಲಿ ಪೋಲೀಸ್ ಮತ್ತು ನ್ಯಾಯಾಂಗಕ್ಕೆ ಪರ್ಯಾಯ ನ್ಯಾಯ ಒದಗಿಸುವ ಕೆಲಸವನ್ನು ಸಹ ಸ್ವಲ್ಪಮಟ್ಟಿಗೆ ಮಾಡುತ್ತಿವೆ.............

ಮಾಧ್ಯಮಗಳಿಂದ ಸಾಮಾನ್ಯ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದಷ್ಟು ಅರ್ಥ ಸಿಕ್ಕಿದೆ.

ಇದಲ್ಲದೆ ಇನ್ನೂ ಕೆಲವು ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳು ಮಾಧ್ಯಮಗಳಿಂದ ಸಮಾಜಕ್ಕೆ ಆಗುತ್ತಿದೆ.

ವೈಯಕ್ತಿಕವಾಗಿ ಈಗಿನ ಆಧುನಿಕ ಮಾಧ್ಯಮಗಳ ಕಾರ್ಯ ಶೈಲಿಯ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳಿಗೆ ನಾನು 1.೦೦ ಅಂಕಗಳಲ್ಲಿ ಈ ಕೆಳಗಿನ ರೀತಿ ಅಂಕ ನೀಡುತ್ತೇನೆ.....

ಒಳ್ಳೆಯ ಕೆಲಸಗಳು ಮತ್ತು ಒಳ್ಳೆಯ ಪರಿಣಾಮಗಳಿಗೆ ನೀಡುವ ಅಂಕ 1೦೦/3೦ ಮಾತ್ರ.

ಕೆಟ್ಟ ಕೆಲಸಗಳು ಮತ್ತು ದುಷ್ಪರಿಣಾಮಗಳಿಗೆ ನೀಡುವ ಅಂಕ 1೦೦/7೦.

ಈಗಲೂ ಕಾಲ ಮಿಂಚಿಲ್ಲ. ಅದರಲ್ಲಿ ತೊಡಗಿಸಿಕೊಂಡ ಮೇಲ್ದರ್ಜೆಯ ವ್ಯಕ್ತಿಗಳು ಆತ್ಮಾವಲೋಕನ ಮಾಡಿಕೊಂಡು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಸಮಾಜಕ್ಕೆ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಸಾಧ್ಯ.

ಹಾಗಾಗಲಿ ಎಂದು ಆಶಿಸುತ್ತಾ........

ಶಿಕ್ಷಕರ ದಿನಾಚರಣೆ ಅಂಗವಾಗಿ ನಮ್ಮ ಮಾಹಿತಿಗಳ ಕಣಜ, ನಮ್ಮ ಅಭಿಪ್ರಾಯಗಳು ರೂಪಗೊಳ್ಳುವ ಪ್ರೇರಕ ಶಕ್ತಿ ಟಿವಿ ಸುದ್ದಿ ಮಾಧ್ಯಮಗಳ ವಿಷಯದಲ್ಲಿ ಒಂದು ತರಗತಿ ನಡೆಸಲು ಅವಕಾಶ ನೀಡಿದ ಎಲ್ಲರಿಗೂ ವಂದಿಸುತ್ತಾ....
ಶಿಕ್ಷಕರ ದಿನದ ಶುಭಾಶಯಗಳು....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ಲೇಖನ - ವಿವೇಕಾನಂದ. ಹೆಚ್.ಕೆ.