ಬನಹಟ್ಟಿ ಠಾಣೆಯಲ್ಲಿ ಪೊಲೀಸರ ಕೊರತೆ..!
ಕೂಗಳತೆಯಲ್ಲಿದ್ದರೂ ಸಂಬಂಧವಿಲ್ಲ ಈ ಠಾಣೆ..!!
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಸೆ18: ಪಟ್ಟಣದ ಆರಕ್ಷಕ ಸಿಬ್ಬಂದಿ ಸಮರ್ಪಕ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವ್ಯವಸ್ಥೆ ಹೆಚ್ಚಾಗಿದೆ ಎಂಬ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ!
ಹೌದು, ಪೊಲೀಸ್ ಠಾಣೆಯಲ್ಲಿ ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಸಿಬ್ಬಂದಿ ಇರುವುದೇ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಇಲಾಖೆಯ ಕೆಲ ಅಧಿಕಾರಿಗಳಿಂದ ಹೌದು ಎಂಬ ಉತ್ತರ ಕೇಳಿ ಬರುತ್ತಿದೆ. ಪಟ್ಟಣದಲ್ಲಿ ಪೊಲೀಸ್ ಠಾಣೆಯಲ್ಲಿ ಲಭ್ಯವಿರುವ ಸಿಬ್ಬಂದಿ ಕೇವಲ 46!. ಇರುವ ಅಲ್ಪ ಸಿಬ್ಬಂದಿ ಮೇಲೆ ಎಲ್ಲ ಕೆಲಸಗಳನ್ನುಕೈಗೊಳ್ಳಬೇಕು. ವಿಶ್ರಾಂತಿಯಿಲ್ಲದೆ ನಿರಂತರ ಕೆಲಸದಲ್ಲಿ ತೊಡಗುತ್ತಿರುವುದು ಸಿಬ್ಬಂದಿ ಮಾನಸಿಕ ನೆಮ್ಮದಿ ಕೆಡಿಸಿದೆ.
ಅಧಿಕಾರಿಗಳಿಂದ ಹಿಡಿದು 46 ಜನ ಪೊಲೀಸರಲ್ಲಿ, ನಾಲ್ವರು ಕಂಪ್ಯೂಟರ್, ಓರ್ವ ಬರಹಗಾರ, ಮೂವರು ನ್ಯಾಯಾಲಯ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದ್ದಾರೆ. ಇನ್ನು ಪ್ರತಿಭಟನೆ, ಅಪಘಾತಗಳಂತ ಕಾರ್ಯಗಳಿಗೆ ನಿಯೋಜಿಸಲಾಗುತ್ತಿದ್ದು, ಅಳಿದುಳಿದ ಸಿಬ್ಬಂದಿಗಳಿಂದಲೇ ಉಳಿದ ಕೆಲಸಗಳನ್ನು ಮಾಡಿಸಲಾಗುತ್ತಿದೆ.
ಸದ್ಯ ಪಟ್ಟಣದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದ್ದರಿಂದ ಪೊಲೀಸರಿಂದ ಮಾಡಲ್ಪಡಬೇಕಾದ ನಾನಾ ರೀತಿಯ ಕೆಲಸ ನಿರ್ವಹಿಸುವಲ್ಲಿ ವಿಫಲತೆಯಲ್ಲೂ ಸಫಲತೆ ಕಾಣುವಂತಾಗಿದೆ. ಒಬ್ಬ ಪೇದೆ 8 ಗಂಟೆ ಕೆಲಸ ಮಾಡಬೇಕಾದವರು ಇಲ್ಲಿ 16 ಗಂಟೆ ಕತೌಯ ನಿರ್ವಹಿಸುತ್ತಿದ್ದಾರೆ. ಸದ್ಯ ಒಬ್ಬ ಪೇದೆಯೂ 24 ಗಂಟೆ ಕೆಲಸ ಮಾಡಿದರೂ ಸಿಬ್ಬಂದಿ ಕೊರತೆಯಿಂದಾಗಿ ಇನ್ನೂ ನಾನಾ ಕೆಲಸಗಳು ಉಳಿಯುತ್ತಿವೆಯಂತೆ...!
ಹೀಗಾಗಿ ಸುಮಾರು 4 ಜನ ಗೃರ ರಕ್ಷಕ ಸಿಬ್ಬಂದಿಗಳನ್ನು ಪೊಲೀಸರ ಕರ್ತವ್ಯ ನಿರ್ವಹಿಸಲು ಇಲಾಖೆ ಪಡೆದುಕೊಂಡಿದೆ. ಆದಾಗ್ಯೂ ಪೊಲೀಸರಿಗೆ ಹೆಚ್ಚು ಕಡಿಮೆ ಕೇಳದ ಜನ ಗೃಹ ರಕ್ಷಕ ಸಿಬ್ಬಂದಿ ಪೊಲೀಸರ ರೀತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ಸಫಲತೆ ಕಂಡರೂ ಕಾಣದಂತಾಗುತ್ತಿವೆ. ಪೊಲೀಸ್ ಠಾಣೆಯಲ್ಲಿರುವ ಅಸ್ತ್ರಗಳು ಓಬೇರಾಯನ ಕಾಲದವುಗಳಾಗಿ ತುಕು ಹಿಡಿಯವಂತಾಗಿದ್ದು, ಇನ್ನೂ ಅವುಗಳನ್ನೇ ಹಿಡಿದು ಓಡಾಡುತ್ತಾರೆ. ಅಲ್ಲದೆ ಓಡಿಸುವ ವಾಹನ ಹಾಗು ವಾಕಿಟಾಕಿಗಳು ಕಡಿಮೆ ಬೀಳುತ್ತಿವೆ ಎಂದು ತಿಳಿದು ಬಂದಿದೆ.
ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆ. ಹೀಗಾಗಿ ಪಟ್ಟಣದಲ್ಲಿ ರಿಂಗ್ ರೋಡ್ ವ್ಯವಸ್ಥೆ ಕಲ್ಪಿಸಲು ಶಾಸಕರು ಮನಸ್ಸು ಮಾಡಬೇಕು. ಸಂಚಾರಿ ಪೊಲೀಸ್ ಠಾಣೆ ಬರಬೇಕು. ಇಲ್ಲಿನ ಠಾಣೆಯ ಈ ಮೊದಲು ಹಾಗು ಈಗಿನ ಅಧಿಕಾರಿಗಳು ಅನೇಕ ಬಾರಿ ಉನ್ನತ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದವರಿಗೆ ಸಿಬ್ಬಂದಿಗಳ ಕೊರತೆ ನೀಗಿಸಿ ಎಂದು ಮನವಿ ಮಾಡಿದರ ಮನವಿಗೆ ಸ್ಪಂದನೆ ಇಲ್ಲವಾಗಿದೆ.
ರಬಕವಿಗಿಲ್ಲ ಠಾಣೆ ಭಾಗ್ಯ: ಕೂಗಳತೆಯಲ್ಲಿಯೇ ಇರುವ ಪೊಲೀಸ್ ಠಾಣೆಯು ರಬಕವಿ ಪಟ್ಟಣಕ್ಕೆ ಯಾವದೇ ಸಂಬಂಧವಿಲ್ಲ. ಬದಲಾಗಿ 8 ಕಿ.ಮೀ. ದೂರದ ತೇರದಾಳ ಪಟ್ಟಣಕ್ಕೆ ಜನತೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಯಾವದೇ ಪ್ರಕರಣಕ್ಕಾಗಿ ರಬಕವಿಯ ಪೊಲೀಸ್ ಹೊರವಲಯ ಠಾಣೆಯಿದ್ದು, ಠಾಣಾಧಿಕಾರಿಗಳನ್ನು ಭೆಟ್ಟಿಗೆ ತೆರಳಬೇಕಾದರೆ ದೂರದ ತೇರದಾಳ ಪಟ್ಟಣಕ್ಕೆ ತೆರಳಬೇಕಿದೆ. ಇದರಿಂದ ಮಹಿಳೆಯರು, ವಯಸ್ಕರಿಗೆ ತೀವ್ರ ತೊಂದರೆಯಾಗುವಲ್ಲಿ ಕಾರಣವಾಗಿದೆ ಎಂಬುದು ಜನತೆಯ ಬೇಸರವಾಗಿದೆ.
`ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಸಂಬಂಧಪಟ್ಟವರು ಗಮನಕ್ಕೆ ತಂದಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಸ್ಪಂದಿಸುವೆ’.-----ಸಿದ್ದು ಸವದಿ, ಶಾಸಕರು, ತೇರದಾಳ ಕ್ಷೇತ್ರ.

Social Plugin