ಅಶ್ಲೀಲ ಚಿತ್ರೀಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ
ರಬಕವಿ-ಬನಹಟ್ಟಿ,ಸೆ18: ಹಿಂದು ಧರ್ಮದ ಶ್ರೇಷ್ಠ ಗ್ರಂಥ `ರಾಮಾಯಣ’ ಬರೆದ ಮಹರ್ಷಿ ವಾಲ್ಮೀಕಿ ಹಾಗು ಖ್ಯಾತ ಚಿತ್ರನಟ ಸುದೀಪ್ ಅವರನ್ನು ಅಶ್ಲೀಲವಾಗಿ ಚಿತ್ರೀಕರಿಸಿ, `ಜೈ ತುಲಮಿಕಿ’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ವಿವಿಧ ವಾಲ್ಮೀಕಿ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಶುಕ್ರವಾರ ನಗರದ ತಹಶೀಲ್ದಾರ ಕಚೇರಿಗೆ ತೆರಳಿ ವಿಶೇಷ ತಹಶೀಲ್ದಾರ ಎಸ್.ಬಿ. ಕಾಂಬಳೆಯವರಿಗೆ ಮನವಿ ಅರ್ಪಿಸುವ ಮೂಲಕ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧ ರಬಕವಿಯ ಬಸವರಾಜ ಹುಚ್ಚಪ್ಪ ಕೊಕ್ಕಣ್ಣವರ ಹಾಗು ಚೇತನ ಕಾಮಶೆಟ್ಟಿ ಹಾಗು ಪ್ರಶಾಂತ ಮಹಾದೇವ ಸಾಲಿಮಠ ಎಂಬಾತರನ್ನು ತೇರದಾಳ ಠಾಣಾ ಪೊಲೀಸರು ಬಂಧಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಈ ಮೂವರು ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಜರುಗಬೇಕೆಂದು ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದ ಕಾರ್ಯದರ್ಶಿ ಪ್ರೊ. ಫಕೀರಪ್ಪ ತಳವಾರ ಹೇಳಿದರು.
ಇದೇ ಸಂದರ್ಭ ಕೆ.ಎಚ್. ಮಂಟೂರ, ರಮೇಶ ಮಳ್ಳಿಗೇರಿ, ಪರಸಪ್ಪ ನಾಯಕ, ಕಾಶಿರಾಯ ನಾಯಕ, ಸುರೇಶ ವಾಲಿಕಾರ, ಚಂದ್ರಕಾಂತ ಪೋಲಿಸ್, ಪ್ರಕಾಶ ಸನದಿ, ಸುರೇಶ ತಳವಾರ, ಪ್ರಕಾಶ ಕಂಪನಾಯಕ, ಎಸ್.ಬಿ. ಹೊಳ್ಳ, ದೇವನಾಳ, ವಿಠ್ಠಲ ಕಿಗುಟಿ ಸೇರಿದಂತೆ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ಹಾಗು ರಬಕವಿ-ಬನಹಟ್ಟಿ ತಾಲೂಕು ಮಹರ್ಷಿ ವಾಲ್ಮೀಕಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅನೇಕರಿದ್ದರು.

Social Plugin