ಅನಾರೋಗ್ಯದಲ್ಲಿ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆ

ಆರೋಗ್ಯ ಕೇಂದ್ರಕ್ಕೇ ಅನಾರೋಗ್ಯ
*ಏಳೆಂಟು ವರ್ಷಗಳಿಂದ ಅಂಬ್ಯುಲೆನ್ಸ್. ರಕ್ಷಾ ಸಮಿತಿ ನೇಮಕಕ್ಕೆ ಒತ್ತಾಯ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಸೆ3: ಸಮರ್ಪಕವಾದ ಚಿಕಿತ್ಸೆ ಸೇರಿದಂತೆ ಇತರೆ ಸೌಲಭ್ಯಗಳಿಂದ ದೂರ ಉಳಿದ ಕಾರಣ ರಬಕವಿ-ಬನಹಟ್ಟಿ ತಾಲೂಕಿನ ಏಕೈಕ ಸಮುದಾಯ ಕೇಂದ್ರವು ಇದೀಗ ಅನಾರೋಗ್ಯದಿಂದ ಬಳಲುತ್ತಿದೆ.

ತಾಲೂಕಾ ಕೇಂದ್ರವಾಗಿ ನಾಲ್ಕು ವರ್ಷಗಳೇ ಗತಿಸಿದರೂ ಸರ್ಕಾರಿ ಆಸ್ಪತ್ರೆ ಮಾತ್ರ ಹಿಂದಿನಂತೆ ಕಾರ್ಯನಿರ್ವಹಿಸುತ್ತಿರುವದಲ್ಲದೆ ಸದ್ಯ ವೈದ್ಯರ ಹಾಗು ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ. ಆಸ್ಪತ್ರೆಯಲ್ಲಿ ಐವರು ವೈದ್ಯರಿದ್ದು, ಚಿಕ್ಕಮಕ್ಕಳ ತಜ್ಞ, ದಂತ ವೈದ್ಯೆ, ಅನಸ್ಥೇಸಿಯಾ, ಡೈನಾಕ್ಲಾಜಿಸ್ಟ್ ಹೊರತುಪಡಿಸಿ ಇನ್ಯಾವದೇ ಚಿಕಿತ್ಸೆ ಸೇವೆ ಒದಗಬೇಕಾದರೆ ವೈದ್ಯರೇ ಇಲ್ಲ. ಅಲ್ಲದೆ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ಸಾಮಗ್ರಿಗಳೂ ಇಲ್ಲ.

 ಕೆಟ್ಟು ನಿಂತ ಅಂಬ್ಯುಲೆನ್ಸ್ ವಾಹನ.

ಮೇಲ್ದರ್ಜೆ ಅನಿವಾರ್ಯ: ಕಳೆದ ಮೂರ್ನಾಲ್ಕು ದಶಕಗಳಿಂದ ಯಾವದೇ ಅಭಿವೃದ್ಧಿ ಕಾರಣ ಆಸ್ಪತ್ರೆ ಹಳೆಯ ಶೈಲಿಯಲ್ಲಿಯೇ ಮುನ್ನಡೆಯುತ್ತಿದೆ. 30 ಸಾವಿರ ಜನಸಂಖ್ಯೆ ಹೊಂದಿದ್ದ ರಬಕವಿ-ಬನಹಟ್ಟಿ ಇದೀಗ ಲಕ್ಷದ ಗಡಿ ಸಮೀಪಿಸುತ್ತಿದೆ. ಆದರೆ ಆಸ್ಪತ್ರೆಗಳಲ್ಲಿ ಬೆಡ್‍ಗಳ ಸಂಖ್ಯೆ ಇನ್ನೂ 30 ಕ್ಕೆ ಸೀಮಿತಗೊಂಡಿದೆ. ಸರ್ಕಾರ ಶೀಘ್ರವೇ ತಾಲೂಕಿಗೆ ದೊರಕಬೇಕಾದ ಎಲ್ಲ ಅರ್ಹತೆಗಳನ್ನು ಈ ಆಸ್ಪತ್ರೆಗೆ ಒದಗಿಸಬೇಕಾಗಿರುವದು ಮಹತ್ವದ್ದಾಗಿದೆ.
ಪ್ರಮುಖವಾಗಿ ಎಲುಬು ತಜ್ಞ, ಶಸ್ತ್ರಕ್ರಿಯೆ ಹಾಗು ಫಿಜೀಶಿಯನ್ ವೈದ್ಯರ ಅವಶ್ಯಕತೆಯಿದ್ದು, ಶೀಘ್ರವೇ ವಾರದ ಮೂರು ದಿನಗಳಲ್ಲಾದರೂ ತಾಲೂಕಿನಲ್ಲಿ ಸೇವೆ ಒದಗಬೇಕಿದೆ. 
ಅಂಬ್ಯುಲೆನ್ಸ್ ಇಲ್ಲ: ಕಳೆದ ಏಳು ವರ್ಷಗಳಿಂದ ಇಲ್ಲಿನ ಸಮುದಾಯ ಆಸ್ಪತ್ರೆಗೆ ಅಂಬ್ಯುಲೆನ್ಸ್ ವಾಹನವಿಲ್ಲದ ಕಾರಣ ರೋಗಿಗಳು ತೀವ್ರ ಪರದಾಡುವಂತಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಅಥವಾ ಸೌಲಭ್ಯಗಳಿರುವ ಆಸ್ಪತ್ರೆಗೆ ತುರ್ತು ಸಾಗಿಸುವ ಸಂದರ್ಭ `108’ ಸಮರ್ಪಕವಾಗಿ ಸಹಾಯ ಒದಗಿಸುವಲ್ಲಿ ರೋಗಿಯ ಚಿಕಿತ್ಸೆ, ಕಾರಣ, ವೈದ್ಯರೊಂದಿಗೆ ಸಮಾಲೋಚನೆ ಹೀಗೆ ವಿಳಂಬನೀತಿಯಿಂದಾಗಿ ರೋಗಿಗಳಿಗೆ ಪೂರಕ ಚಿಕಿತ್ಸೆ ದೊರಕುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ಸಮಯಕ್ಕನುಸಾರ ಚಿಕಿತ್ಸೆ ದೊರಕದೆ ಸಾವುಗಳಾಗಿರುವ ಉದಾಹರಣೆಗಳೂ ಇವೆ.
ಸಿಬ್ಬಂದಿ ಕೊರತೆ: ಆಸ್ಪತ್ರೆ ಸುತ್ತಮುತ್ತ ಅನೈರ್ಮಲ್ಯ ವಾತಾವರಣ ಎದ್ದು ಕಾಣುತ್ತಿದ್ದು, ಸ್ವಚ್ಛತೆ ನೀಗಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಸಿಬ್ಬಂದಿ ಕೊರತೆ ಬಲವಾಗಿ ಕಾಡುತ್ತಿದ್ದು, ನಿವೃತ್ತ ನಂತರ ಹೊಸದಾಗಿ ಸಿಬ್ಬಂದಿಗಳ ನೇಮಕಾತಿಯಾಗುತ್ತಿಲ್ಲ.
ರಕ್ಷಾ ಸಮಿತಿಯಿಲ್ಲ: ಕಳೆದ ನಾಲ್ಕೈದು ವರ್ಷಗಳಿಂದ ಈ ಆಸ್ಪತ್ರೆಗೆ ರಕ್ಷಾ ಸಮಿತಿ ಸದಸ್ಯ ಆಯ್ಕೆ ನಡೆದಿಲ್ಲ. ಇದರಿಂದಾಗಿ ಆಸ್ಪತ್ರೆಯಲ್ಲಿ ಸಮಸ್ಯೆ ಕುರಿತು ಮಾಹಿತಿ ಒದಗಿಸುವದಕ್ಕಾಗಲಿ ಅಥವಾ ಸೌಲಭ್ಯ ಸೇರಿದಂತೆ ಯಾವುದನ್ನೂ ಪರಿಶೀಲನೆ ಮಾಡುವಲ್ಲಿ ಕಷ್ಟದಾಯಕವಾಗಿದೆ.
ಸಂಜೆ ನಂತರ ದೊರಕದ ಔಷಧಿ: ಬೆಳಿಗ್ಗೆ 9 ಗಂಟೆಯಿಂದ ಸಂಜೆ  ಗಂಟೆವರೆಗೆ ಮಾತ್ರ ಸರ್ಕಾರಿ ಆಸ್ಪತ್ರೆಯ ಔಷಧಿ ಕೇಂದ್ರದ ಸೌಲಭ್ಯ ದೊರಕುವದು. ನಂತರ ಮರು ದಿನವೇ ರೋಗಿಗಳಿಗೆ ಔಷಧಿ ದೊರಕುವದು. 2 ಹುದ್ದೆಗಳಲ್ಲಿರುವ ವಿಭಾಗಕ್ಕೆ ಓರ್ವ ವ್ಯಕ್ತಿ ಮಾತ್ರ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆ ಈ ಗೋಳಾಟ ರೋಗಿಗಳನ್ನು ಕಾಡುತ್ತಿದೆ. ತಕ್ಷಣವೇ ಮತ್ತೊಬ್ಬರ ನೇಮಕದೊಂದಿಗೆ 24 ಗಂಟೆಗಳ ಕಾಲ ಔಷಧಿ ದೊರಕಬೇಕೆಂಬುದು ಸಾರ್ವಜನಿಕರ ಒತ್ತಾಯ.
`ಸರ್ಕಾರಕ್ಕೆ ಈ ಸಮುದಾಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಲ್ಲಿ ಪ್ರಸ್ತಾವಣೆ ಸಲ್ಲಿಸಲಾಗಿದೆ. ಕೊರೊನಾದಿಂದ ವಿಳಂಬವಾಗಿದ್ದಲ್ಲದೆ, ಮತ್ತೊಮ್ಮೆ ಆಸ್ಪತ್ರೆ ಬಗ್ಗೆ ಪರಿಶೀಲಿಸಿ ಜನತೆಗೆ ಅನುಕೂಲವಾಗುವಂತೆ ಸೌಲಭ್ಯಕ್ಕೆ ಬದ್ಧ’.----- ಸಿದ್ದು ಸವದಿ, ಶಾಸಕರು, ತೇರದಾಳ.