ಮರಣ ಶಾಸನವೇ ?
ರೈತರ ಸ್ವಾತಂತ್ರ್ಯವೇ ?
ಯಾವುದು ಸರಿ.....
" ಈ ಮಸೂದೆಗಳು ರೈತರಿಗೆ ಮುಕ್ತ ಸ್ವಾತಂತ್ರ್ಯ ಕೊಡಲಿವೆ ಮತ್ತು ಅವರ ರಕ್ಷಾ ಕವಚದಂತೆ ಕೆಲಸ ಮಾಡಲಿವೆ. 21 ನೇ ಶತಮಾನದ ಸ್ವಾವಲಂಬನೆಯ ಭಾರತಕ್ಕೆ ಈ ಕಾಯ್ದೆ ಅತ್ಯಂತ ಅವಶ್ಯ. ಅದನ್ನು ವಿರೋಧಿಸುವವರು ಮಧ್ಯವರ್ತಿಗಳ ಪರವಾಗಿ ಇರುವವರು, ಭ್ರಷ್ಟರು, ಪಟ್ಟಭದ್ರ ಹಿತಾಸಕ್ತರು ಮತ್ತು ಅಭಿವೃದ್ಧಿ ವಿರೋಧಿಗಳು "
ನರೇಂದ್ರ ಮೋದಿ....
---------------------------------------------
" ದೇಶದ ಸಂಪತ್ತನ್ನೇ ಮಾರುತ್ತಿರುವ, ರೈತರನ್ನು ದಿವಾಳಿತನದತ್ತ, ಆತ್ಮಹತ್ಯೆಯತ್ತ ಕೊಂಡೊಯ್ಯುತ್ತಿರುವ ಮೋದಿಯವರನ್ನು
" ದೇಶಕ್ಕಾಗಿ ಮೋದಿ " ಎಂದು ಮುಗ್ದ ಜನರು ಬೆಂಬಲಿಸುತ್ತಿರುವುದು ಯಾತನಾಮಯ. ಮೋದಿ ರೈತರ ವಿರೋಧಿ "
ದೇವನೂರು ಮಹಾದೇವ.
-------------------------------------------------
ನರೇಂದ್ರ ಮೋದಿ ಬೃಹತ್ ಪ್ರಜಾಪ್ರಭುತ್ವ ಭಾರತದ ಈ ಕ್ಷಣದ ಅತ್ಯಂತ ಜನಪ್ರಿಯ ಪ್ರಧಾನಿ ಮತ್ತು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಮಹತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿ. ಎರಡನೇ ಬಾರಿ ಅತಿಹೆಚ್ಚು ಬಹುಮತದಿಂದ ಆಯ್ಕೆಯಾದವರು.
ದೇವನೂರು ಮಹಾದೇವ ಮೋದಿಯವರಷ್ಟು ಜನಪ್ರಿಯ ವ್ಯಕ್ತಿಯಲ್ಲ ಆದರೆ ಈ ದೇಶದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಮೋದಿಯವರಿಗಿಂತ ಹತ್ತುಪಟ್ಟು ಹೆಚ್ಚು ಆಳವಾಗಿ ಯೋಚಿಸುವ ಬುದ್ದಿಶಕ್ತಿ ಇರುವವರು. ರೈತರ ಬಗ್ಗೆ ಅತ್ಯಂತ ಕಾಳಜಿ ಇರುವವರು. ದೇಶದ ಬಗ್ಗೆ ಸಮಗ್ರವಾಗಿ ಚಿಂತಿಸುವವರು.
ಮೋದಿಯವರಿಗಾಗಲಿ, ದೇವನೂರು ಅವರಿಗಾಗಲಿ ದೇಶ ಹಾಳಾಗಲಿ, ರೈತರು ಹಾಳಾಗಲಿ ಎಂಬ ಉದ್ದೇಶ ಇರುವುದಿಲ್ಲ.
ಹಾಗಾದರೆ ಮೋದಿಯವರ ಸುಧಾರಣೆ ತಪ್ಪೇ ಅಥವಾ ದೇವನೂರರ ಚಿಂತನೆ ತಪ್ಪೇ....
ಈಗ ಯೋಚಿಸುವ ಸರದಿ ನಮ್ಮಂತವರದು......!!!!!!
ಪ್ರಜಾಪ್ರಭುತ್ವ, ಎಡಪಂಥ ಮತ್ತು ಬಲಪಂಥಗಳ ಸಿದ್ದಾಂತ, ಸಂಘರ್ಷ ಮತ್ತು ಅರ್ಥೈಸುವಿಕೆಯಲ್ಲಿ ಈ ವಿಷಯ ಅಡಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಂಡಿಸಿರುವ ಕೃಷಿ ಸಂಬಂಧಿಸಿದ ತಿದ್ದುಪಡಿ ಮಸೂದೆಗಳು ಬಲಪಂಥ ಮತ್ತು ಎಡಪಂಥ ಸಂಘರ್ಷದ ಇನ್ನೊಂದು ಮುಖ......
* ಪ್ರತಿಭೆ, ಸಾಮರ್ಥ್ಯ, ಸ್ಪರ್ಧೆ ಮುಖಾಂತರ ಎಲ್ಲಾ ಕ್ಷೇತ್ರಗಳಲ್ಲು ಅಭಿವೃದ್ಧಿ ಸಾಧ್ಯ ಎಂಬ ನಿಲುವು ಬಲಪಂಥೀಯ ಚಿಂತಕರದು. ಖಾಸಗೀಕರಣ ಇದಕ್ಕೆ ಪೂರಕವಾಗಿರುತ್ತದೆ. ಸ್ಪರ್ಧೆ ದುರ್ಬಲರನ್ನು ಅನಿವಾರ್ಯವಾಗಿ ಪ್ರಬಲರನ್ನಾಗಿ ಮಾಡುತ್ತದೆ ಎಂಬ ವಾದ ಅವರದು. ಜಾಗತೀಕರಣದ ಈ ಸಂದರ್ಭದಲ್ಲಿ ನಾವು ಜನರನ್ನು ಸ್ಪರ್ಧಾತ್ಮಕತೆಗೆ ಸಿದ್ದಗೊಳಿಸುವುದು ಅನಿವಾರ್ಯ ಎಂದು ಸಮರ್ಥಿಕೊಳ್ಳುತ್ತಾರೆ "
":ಸ್ಪರ್ಧೆ ಸಮತೂಕದ ಜನರ ನಡುವೆ ನಡೆದರೆ ಅದಕ್ಕೆ ಒಂದು ಅರ್ಥವಿರುತ್ತದೆ. ಭಾರತೀಯ ಸಮಾಜದಲ್ಲಿ ಅಸಮಾನತೆ ಸೃಷ್ಟಿಸಿ ಕೆಲವು ಸಮುದಾಯಗಳನ್ನೇ ದುರ್ಬಲಗೊಳಿಸಿ, ಶಿಕ್ಷಣ, ಜಾತಿ, ನಗರ ಮತ್ತು ಗ್ರಾಮ ವ್ಯತ್ಯಾಸ ಸೇರಿ ಮೂಲಭೂತ ಸೌಕರ್ಯಗಳಿಂದಲೇ ವಂಚಿಸಿ ಈಗ ಪ್ರಬಲ ವರ್ಗಗಳು ದುರ್ಬಲ ವರ್ಗಗಳ ಮೇಲೆ ಸ್ಪರ್ಧೆ ನಡೆಸಿದರೆ ಹೇಗೆ ? ಇಲ್ಲಿ ಸಹಜವಾಗಿ ಪ್ರಬಲರೇ ಇದರ ಲಾಭ ಪಡೆದು ಮುಗ್ದರು ಶೋಷಿಸಲ್ಪಡುವರು ಎಂಬುದು ಎಡಪಂಥೀಯ ಚಿಂತಕರ ಅಭಿಪ್ರಾಯ "
ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಇನ್ನೂ ಸೂಕ್ಷ್ಮತೆ ಅಡಗಿದೆ. ನಿಮಗೆ ಒಂದು ಊಹಾತ್ಮಕ ಉದಾಹರಣೆ ಕೊಡುತ್ತೇನೆ.
ಈ ದೇಶದಲ್ಲಿ ಈಗ ಸುಮಾರು ಶೇಕಡಾ 60/65 % ರೈತರು ಮತ್ತು ಇನ್ನೂ ಬಹಳಷ್ಟು ಅವರು ಅನ್ನದಾತರು ಎಂಬ ಸಹಾನುಭೂತಿ ಹೊಂದಿರುವ ಮತದಾರರ ಇದ್ದಾರಲ್ಲವೇ ?
ಈ ಕೃಷಿ ಮಸೂದೆಗಳ ಬಗ್ಗೆಯೇ ಇಡೀ ದೇಶದಲ್ಲಿ ನರೇಂದ್ರ ಮೋದಿ ವರ್ಸಸ್ ಅದನ್ನು ವಿರೋಧಿಸುವ ಯೋಗೇಂದ್ರ ಯಾದವ್ ಅಥವಾ ದೇವನೂರು ಮಹಾದೇವ ಅಥವಾ ಇನ್ಯಾರಾದರೂ ಅತ್ಯಂತ ಪ್ರಭಾವಿ ರೈತನಾಯಕರನ್ನು ಚುನಾವಣಗೆ ನಿಲ್ಲಿಸಿ. ಯಾರು ಗೆಲ್ಲಬಹುದು ಯೋಚಿಸಿ ನೋಡಿ. ನಿಷ್ಪಕ್ಷಪಾತವಾಗಿ ಊಹಿಸಿ.
ಕಾರಣ ಏನೇ ಇರಲಿ ಫಲಿತಾಂಶ ಮಾತ್ರ ಅನುಮಾನವಿಲ್ಲದೆ ಅದು ನರೇಂದ್ರ ಮೋದಿಯವರಿಗೆ ಬಹುಮತ ಲಭಿಸುತ್ತದೆ.
ಇಲ್ಲಿ ನರೇಂದ್ರ ಮೋದಿ ಬುದ್ದಿವಂತರೇ, ದೇವನೂರು ಅಥವಾ ರೈತ ನಾಯಕರು ಬುದ್ದಿವಂತರೇ ಅಥವಾ ಮತದಾರರು ಬುದ್ದಿವಂತರೇ.....
ರೈತ ವಿರೋಧಿ ಮಸೂದೆ ಮಂಡಿಸುವ ಮನೋಭಾವದ ಮೋದಿಯವರನ್ನು ಜನರು ಮತ್ತೆ ಚುನಾಯಿಸುವುದು ಏಕೆ ?
ಭಾರತೀಯ ಆತ್ಮವಂಚಕ ಮನಸ್ಸುಗಳ ಮುಖವಾಡಗಳು ಕಳಚಿ ಬೀಳುವುದೇ ಇಲ್ಲಿ......
ಬಲಪಂಥೀಯರಲ್ಲಿ,
ಅನ್ನಕ್ಕಿಂತ ಧರ್ಮ ಮತ್ತು ಪಕ್ಷ ಮುಖ್ಯವಾಗುತ್ತದೆ, ದುರ್ಬಲರನ್ನು ತುಳಿಯುವ ಸಾಧನವನ್ನು ಬಿಟ್ಟುಕೊಡದ ಸ್ವಾರ್ಥ ಮುಖ್ಯವಾಗುತ್ತದೆ, ಕಾರ್ಪೊರೇಟ್ ಸಂಸ್ಥೆಗಳು ಫೋಷಿಸಿ ಜನರನ್ನು ಅವರ ಕೂಲಿಯಾಳುಗಳಾಗಿ ಮಾಡಿ ತಾವು ಇನ್ನಷ್ಟು ಶತಮಾನಗಳು ಸುಖವಾಗಿರುವಂತ ಹುನ್ನಾರ ಮುಖ್ಯವಾಗುತ್ತದೆ. ಹೇಳುವುದು ನಾವೆಲ್ಲಾ ಒಂದು. ಮಾಡುವುದು ಶ್ರೀಮಂತಿಕೆಯ ಪಕ್ಷಪಾತ.
ಎಡಪಂಥೀಯರಲ್ಲಿ,
ತ್ಯಾಗಕ್ಕಿಂತ ತಮ್ಮ ನಾಯಕತ್ವದ ಹಪಾಹಪಿ ಮುಖ್ಯವಾಗುತ್ತದೆ, ಸಮಸ್ಯೆಗಳ ಪರಿಹಾರಕ್ಕಿಂತ ಹೋರಾಟ ಪ್ರತಿಭಟನೆಗಳಿಂದಲೇ ತಮ್ಮ ಬದುಕು ಕಟ್ಟಿಕೊಳ್ಳುವ ಸ್ವಾರ್ಥ ಮುಖ್ಯವಾಗುತ್ತದೆ, ಜನರ ಮನಸ್ಸುಗಳನ್ನು ಗೆಲ್ಲುವ ವಿಷಯಕ್ಕಿಂತ ತಮ್ಮ ಸಿದ್ದಾಂತಗಳ ಅಸ್ತಿತ್ವ ಉಳಿಸಿಕೊಳ್ಳುವುದೇ ಮುಖ್ಯವಾಗುತ್ತದೆ. ಪ್ರಜಾಪ್ರಭುತ್ವದ ಎಂಬ ಆಡಳಿತ ವ್ಯವಸ್ಥೆಯನ್ನೇ ಮರೆಯುತ್ತಾರೆ.
ಇದರ ಮಧ್ಯೆ ನಾವು ನೀವು ಬಲಿಪಶುಗಳು......
ಮೋದಿ ಬಲಪಂಥ,
ದೇವನೂರು ಎಡಪಂಥ,
ಸಮಸ್ಯೆ ನಡುಪಂಥ,
ಜನ ತ್ರಿಶಂಕು,
ಸರ್ಕಾರ ಮಂಕು.....
ಇವನೊಬ್ಬ ಎಡಬಿಡಂಗಿ, ಅವಕಾಶವಾದಿ, ತೆವಲು ಬರಹಗಾರ ಎಂಬ ಕೆಲವರ ಆರೋಪಗಳನ್ನು ಸ್ವೀಕರಿಸುತ್ತಾ.....
ಸಾಮಾನ್ಯ ಜನರೇ,...
ಸಮಗ್ರವಾಗಿ ಯೋಚಿಸುವ ಶಕ್ತಿ ನಿಮಗೂ ಇದೆ. ಇಡೀ ಭಾರತದ ಸದ್ಯದ ಪರಿಸ್ಥಿತಿ ಅವಲೋಕಿಸಿ. ಇಲ್ಲಿನ ಅಸಮಾನತೆ ಗಮನಿಸಿ. ಮುಕ್ತ ವ್ಯವಸ್ಥೆಗೆ ನಮ್ಮ ಅಕ್ಕ ತಂಗಿ ಅಣ್ಣ ತಮ್ಮಂದಿರು ಅಪ್ಪ ಮಕ್ಕಳು ಸಿದ್ದವೇ ಯೋಚಿಸಿ. ಅದಾನಿ ಅಂಬಾನಿ ಟಾಟಾ ಬಿರ್ಲಾಗಳು ಮತ್ತು ಎಂಬಿಎ ಪದವೀಧರರ ಮಾರುಕಟ್ಟೆ ಸಾಮರ್ಥ್ಯವನ್ನು ನಮ್ಮ ರೈತರು ಮೀರಬಹುದೇ ಯೋಚಿಸಿ. ಈ ಮಸೂದೆಗಳು ರೈತರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡುವ ಸಾಧ್ಯತೆಯೇ ಹೆಚ್ಚು ಎಂಬುದು ಮರೆಯದಿರಿ.
ಹಾಗೆಯೇ ಒಂದಲ್ಲಾ ಒಂದು ದಿನ ಭವಿಷ್ಯದಲ್ಲಿ ನಾವು ಮುಕ್ತ ವ್ಯವಸ್ಥೆಗೆ ಸಿದ್ದರಾಗಲೇ ಬೇಕಿದೆ ಅದೂ ಗಮನಲ್ಲಿರಲಿ. ರೈತರು ಸ್ಪರ್ಧಾತ್ಮಕ ಜಗತ್ತಿಗೆ ಇಳಿಯಲೇಬೇಕಾದ ಅನಿವಾರ್ಯತೆ ಇದೆ.
ಇಷ್ಟು ದ್ವಂದ್ವ ಏಕೆಂದರೆ, ಇದು ಕಳ್ಳರ ಸಂತೆ, ನೀವು ಏನೇ ಕಾನೂನು ತಂದರೂ ಅದೇ ಕಳ್ಳರು ಅದೇ ರೈತರು. ಮೋಸದ ವಿಧಾನ ಮಾತ್ರ ಬೇರೆ. ಇದೇ ಮೂಲಭೂತ ಸಮಸ್ಯೆ. ಸಮಗ್ರ ಚಿಂತನೆ ಮಾಡುವ ಬುದ್ದಿ ಶಕ್ತಿಯನ್ನು ಜನರಲ್ಲಿ ಜಾಗೃತಗೊಳಿಸದೆ, ಅವರನ್ನು ಒಳ್ಳೆಯವರಾಗಿ, ಪ್ರಾಮಾಣಿಕರಾಗಿ ಮಾಡದೆ ಸಮಸ್ಯೆ ಬಗೆಹರಿಯುವುದು ಕಷ್ಟ. ಮೇಲೊಂದು ಒಳಗೊಂದು ಮುಖವಾಡ ಇರುವ ಜನಗಳ ಮಧ್ಯೆ ಸುಧಾರಣೆ ಎಲ್ಲಿಂದ ಪ್ರಾರಂಭಿಸಬೇಕು.......!!!!!
So, ರೈತರ ಹಿತ ರಕ್ಷಿಸುವುದು ಎಂದರೆ ಕೇವಲ ಅವರ ಪರವಾಗಿ ಪ್ರತಿಭಟನೆ ಮಾಡುವುದು ಮಾತ್ರವಲ್ಲದೆ, ಜೊತೆಗೆ ರೈತರನ್ನು ಬಲಾಡ್ಯರನ್ನಾಗಿ ಮಾಡುವ ಜವಾಬ್ದಾರಿ ಸಹ ನಾಯಕತ್ವಕ್ಕೆ ಇರಬೇಕು. ಎಷ್ಟು ಬಲಾಡ್ಯರಾಗಬೇಕೆಂದರೆ ದಲ್ಲಾಳಿಗಳು ಬೆನ್ನು ತೋರಿಸಿ ಓಡಬೇಕು. ಏಕೆಂದರೆ ಆಳುವ ವರ್ಗ ಬಹುತೇಕ ಕೃತಜ್ಞತೆ ಇಲ್ಲದ ರೈತ ವಿರೋಧಿ ನೀತಿಗಳನ್ನೇ ಜಾರಿಗೆ ತರುತ್ತದೆ. ರೈತರೇ ಶಕ್ತಿಶಾಲಿಗಳು, ಸರ್ಕಾರವನ್ನು ನಿಯಂತ್ರಿಸುವ ಶಕ್ತಿ ಹೊಂದಿದರೆ ಇವರ ಆಟ ನಡೆಯುವುದಿಲ್ಲ.
ಹಾಗಾಗಲಿ ಎಂದು ಆಶಿಸುತ್ತಾ.......
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ಲೇಖನ : ವಿವೇಕಾನಂದ. ಹೆಚ್.ಕೆ.

Social Plugin