ಹಾಡುಗಳ ಗಂಧರ್ವನಿಗೆ ವಿದಾಯ ಹೇಳಲಾರೆ....
ಘಂಟಸಾಲಾ ನಂತರ ಚಿತ್ರರಂಗದ ಸಂಗೀತ ಸಾರಥಿ ಯಾರು ಎಂದು ಅಭಿಮಾನಿಗಳು ಕೇಳಿದಾಗ ಬಾಲು ಎದ್ದು ನಿಂತಿದ್ದರು....50 ವರ್ಷಗಳ ಕಾಲ ಅನಭಿಷಿಕ್ತ ಸಾಮ್ರಾಟನಾಗಿಯೇ ಮೆರೆದರು..
ಹಾಡು ಅನೇಕರು ಹಾಡುತ್ತಾರೆ. ಎಸ್ ಪಿ ವಿಶೇಷವೇ ಬೇರೆ. ಅವರು ವಿಷ್ಣುಗೆ ಹಾಡಿದರೆ ವಿಷ್ಣುವೇ!...ಅನಂತ್ನಾಗ್ ಗೆ ಧ್ವನಿಯಾದರೇ ಖುದ್ದು ಅನಂತ್ ಎದ್ದು ಬಂದಂತೆ...ಶಂಕರ್ ಗೆ ಹಾಡಿದರೇ ಶಂಕರನೇ ಆಗಿಬಿಡುತ್ತಿದ್ದರು. ಶಂಕರ್‌ನನ್ನ ತಮ್ಮನೆಂದೇ ಕರೆದವರು ಬಾಲು...
ರಜಿನಿ, ಜೆಮಿನಿ, ಕಮಲ್ ...ಇನ್ನೂ ಅನೇಕರ ಶರೀರಕ್ಕೆ ನೀವು ಶಾರೀರವಾದವರು..ರಾಜ್ ಕಪೂರ್ ಗೆ ಮುಖೇಶರಂತೆ....
ಸಂಗೀತ ಕಲಿತು ಪ್ರಸಿದ್ಧರಾದವರು ಅನೇಕರು...ಹಾಡಿ ಹಾಡಿ ಪ್ರಸಿದ್ಧರಾದ ಮೇಲೆ ಶಾಸ್ರ್ತೀಯ ಸಂಗೀತ ಕಲಿತವರು ಎಸ್ ಪಿ ಬಿ..ಶಾಸ್ತ್ರೀಯ ಸಂಗೀತ ಲೋಕ ಅವರಿಲ್ಲದೆ ಬಡವಾಗಿತ್ತಾ? ಗೊತ್ತಿಲ್ಲ.
ಅವರ ಹಾಡು ಕೇಳುತ್ತಿದ್ದರೆ ಕಳೆಯುವ ಸಮಯ ತುಂಬ ಐಷಾರಾಮಿ ಎನಿಸಿಬಿಡುತ್ತದೆ..
ಅನಂತ್ ನಾಗ್ - ಲಕ್ಷ್ಮಿ ಜೋಡಿಯ ಹಾಡುಗಳನ್ನೊಮ್ಮೆ ಕೇಳಿದರೆ ನಾವು ಭಾವುಕರಾಗದಿದ್ದರೆ ಆ ಹಾಡಿನ ಮೇಲಾಣೆ. ಅಂತ ತುಂಬು ಕಂಠ..ಅನುಭವಿಸಿ, ಅನುಭಾವಿಸಿ ಹಾಡಬೇಕೆಂದರೆ ಎಸ್ ಪಿ ಅಗೋಚರ ಗುರು.
ಮೂರು ತಲೆಮಾರುಗಳ ಗಾಯಕ . ಅಷ್ಟೇ ಅಲ್ಲ ಹಾಡು ಕೇಳಿದರೆ ಹಾಗೇ ಆವರಿಸಿಕೊಂಡುಬಿಡುವ ಗಂಧರ್ವಲೋಕ.
6 ರಾಷ್ಟ್ರ ಪ್ರಶಸ್ರಿಗಳಿಗೆ ಎಸ್ ಪಿ ಬಿ ಭೂಷಣ....ಒಂದೇ ದಿನಕ್ಕೆ ಕನ್ನಡದಲ್ಲಿ 21 ಹಾಡುಗಳನ್ನ ಲೀಲಾಜಾಲವಾಗಿ ರೆಕಾರ್ಡ್ ಮಾಡಿದ ಇನ್ನೊಬ್ಬ ಗಾಯಕರ ಬಗ್ಗೆ ನಾನು ಕೇಳಿಲ್ಲ...ಹಾಡುವುದಷ್ಟೇ ಅಲ್ಲ...ಅವರ ಹಾಡು ಶುರುವಾದರೆ ಯಾರೂ ದಾಟಿಕೊಂಡು ಹೋಗಲು ಸಾಧ್ಯವೇ ಇಲ್ಲ.
ಅತ್ಯಂತ ಕಡಿಮೆ ಇನ್ಸ್ಟ್ರುಮೆಂಟ್ಸ್ ಬಳಸುತ್ತಿದ್ದ ಸಂಗೀತ ಲೋಕದಿಂದ ಹಿಡಿದು ಇಂದಿನ ವರೆಗೂ ಎಸ್ ಪಿ ಬಿ ಬದಲಿಸಲಾಗದ ಗಾಯಕ.
ಅವತ್ತಿನ ಉಪೇಂದ್ರ ಕುಮಾರ್, ಜಿಕೆ ವೆಂಕಟೇಶ್ , ಇಳಯರಾಜಾ, ವಿಜಯಭಾಸ್ಕರ್ ರಿಂದ ಹಿಡಿದು ಹಂಸಲೇಖ, ಎ.ಆರ್ ರೆಹಮಾನ್ ವರೆಗೂ ಎಸ್ ಪಿ ಆಕಾಶದೀಪ..
15 ಭಾಷೆಯ ಚಿತ್ರರಂಗಕ್ಕೆ ಅವರು ಹಾಡಿದ್ದಾರೆಂದರೆ, ಅದಷ್ಟೇ ಅವರ ಹಿರಿಮೆ..
ವಿಷ್ಣುವಿಗೆ ಹಾವಿನ ದ್ವೇಷ ಹನ್ನೆರಡು ವರುಷ ಎಂದವರು ಅಮೇಲೆ ಆಪ್ತರಕ್ಷಕದಲ್ಲಿ ಗರನೆ ಗರಗರನೇ ಎಂದು ಹಾಡಿದರು....ಅವರೇ ಆದಿ ಅವರೇ ಅಂತ್ಯ...
ಮುಗಿಯದಿರಲಿ ಬಂಧನ ಎಂದರೆ, ಅಭಿನಯಿಸಿದವರು ವಿಷ್ಣುವೋ ಎಸ್ ಪಿ ಯೋ ಎಂದು ಗೊಂದಲ ಮೂಡಿಸಿದಂತ ಕಲೆ.
ಸಂಗೀತ ಲೋಕದಲ್ಲಿ ಅರಳುವ ಹೂವುಗಳಿಗೆ ಎದೆ ತುಂಬಿ ಪಾಠ ಹೇಳಿಕೊಟ್ಟ ಗುರು. ಅನೇಕ ಏಕಲವ್ಯರ ಪಾಲಿಗೆ ಎಸ್ ಪಿ ದ್ರೋಣ.
ಒಬ್ಬ ಹುಡುಗ ತುಂಬ ಚೆನ್ನಾಗಿ ಹಾಡಿದರೆ ಅವ, ನನ್ನ ಮಾನಸ ಪುತ್ರ ಎಂದು ಮಗನ ಎದುರಿಗೆ ಹೇಳಿದ ತುಂಬು ಹೃದಯಿ...
ವಿನಯವಂತಿಕೆ ಜೀವನದ ಉದ್ದಕ್ಕೂ ಕರಗದಂತೆ ಬದುಕಿದ್ದವರು ಎಸ್ ಪಿ ಬಿ..
ಕನ್ನಡದ ಮಣ್ಣಿಗೆ ಸ್ನೇಹದ ಕಡಲೇ ಆಗಿಬಿಟ್ಟವರು ಎಸ್ ಪಿ ಬಿ..
ಕರುನಾಡ ತಾಯಿ ಸದಾ ಚಿನ್ಮಯಿ ಎಂದವರೂ ನೀವೇ..ಇದೇ ನಾಡು, ಇದೇ ಭಾಷೆ ಎಂದು ತನು ಮನದ ತುಂಬ ಕನ್ನಡವನ್ನೇ ತುಂಬಿಕೊಂಡಿದ್ದ ಕನ್ನಡದ ಕಂದರೂ ನೀವೆ.
ಮುಂದಿನ ಜನ್ಮ ಕರ್ನಾಟಕದಲ್ಲೇ ಎಂದು ಎಲ್ಲ ಭಾಷೆಗಳ ನೆಲದಲ್ಲೂ ಹೇಳಿದ ಅಪ್ಪಟ ತೆಲುಗು ನೆಲದ ಪ್ರತಿಭಾವಂತ ಭಾವ ಜೀವಿ....ಅವಕಾಶವಿದ್ದರೆ ಇನ್ನೊಮ್ಮೆ ನಿಮ್ಮ ಹುಟ್ಟು ಪುಣ್ಯಭೂಮಿಯಲ್ಲಾಗಲಿ..
40000 ಹಾಡುಗಳನ್ನ ಹಾಡಿದ ಕಲಾ ತಪಸ್ವಿ ನೀವು...ಹಾಡುಗಳಲ್ಲಿ ನೀವು ಜೀವಂತ...ವಿದಾಯ ಹೇಳಲಾರೆ. ನಿಮ್ಮ ಕೊರಳ ಮಾಧುರ್ಯವನ್ನ ಅಕ್ಷರಗಳಲ್ಲಿ ಹಿಡಿದಿಡುವಷ್ಟು ಶಕ್ತಿ ನನಗಿಲ್ಲ. ಮತ್ತೆ ಮತ್ತೆ ನಿಮ್ಮಹಾಡುಗಳನ್ನ ಕೇಳುತ್ತೇನೆ...ಬದುಕು ತುಂಬುತ್ತದೆ...

Social Plugin