ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು- ಶಿಕ್ಷಣಾಧಿಕಾರಿ ನ್ಯಾಮಗೌಡ

ತೇರದಾಳ ಮತಕ್ಷೇತ್ರ

(ವರದಿ ಕೆ.ಎಸ್. ರಂಗಸ್ವಾಮಿ)

ತೇರದಾಳ: ತೇರದಾಳ ಪಟ್ಟಣದ ಅಂಬೇಡ್ಕರ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ    ಸಿ. ಎಮ್. ನ್ಯಾಮಗೌಡ ಅವರು ಇಂದು ಭೇಟಿ ನೀಡಿದರು. ಈ ಶಾಲೆಗೆ ಮಕ್ಕಳು ಹೋಗಲು ಅಧಿಕೃತವಾಗಿ ರಸ್ತೆಯಿಲ್ಲದಿರುವ ಹಾಗೂ ನೀರಿನ ಕೊರತೆಗೆ ಸಂಬಂಧಪಟ್ಟಂತೆ  ಶಾಲೆಗೆ ಖುದ್ದು ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಪಿ. ಎಸ್ .ಮಾಸ್ತಿ, ದಯಾನಂದ ಕಾಳೆ, ಸದಾಶಿವ ದೊಡ್ಡಮನಿಯವರನ್ನು ಕರೆಯಿಸಿ ಈ ಸಮಸ್ಯೆಗಳ ಕುರಿತು ಸುದೀರ್ಘವಾಗಿ  ಚರ್ಚಿಸಿ ಸೂಕ್ತ ಸಲಹೆ ಪಡೆದರಲ್ಲದೆ, ಈ ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮ ಸಹಾಯ ಸಹಕಾರ ನೀಡಬೇಕೆಂದು ಹೇಳಿದರು. 
      ಈ ಬಗ್ಗೆ  ಮಾಧ್ಯಮದವರೊಂದಿಗೆ ಮಾತನಾಡಿದ ಶಿಕ್ಷಣಾಧಿಕಾರಿಯವರು ಈ ಶಾಲೆಗೆ ಸಂಬಂಧಪಟ್ಟಂತೆ ಶಾಲೆಯ ಸುತ್ತ-ಮುತ್ತ ಅಂದರೆ ಎಲ್ಲಾ ದಿಕ್ಕುಗಳಲ್ಲಿ ಖಾಸಗಿಯವರ ಆಸ್ತಿ ಇರುವುದರಿಂದ ಈ ಶಾಲೆಗೆ ಮಕ್ಕಳು ಬರಲು ತುಂಬಾ ತೊಂದರೆ ಆಗುತ್ತಲಿದೆ, ಶಾಲೆಗೆ ಸಂಬಂಧಪಟ್ಟ ದಾಖಲೆಯ ಪ್ರಕಾರ ಈ ಶಾಲೆಗೆ ದಕ್ಷಿಣ ದಿಕ್ಕಿಗೆ ರಸ್ತೆಯಿದೆ. ಈ ರಸ್ತೆಯನ್ನು ಬಳಸಿ ಮಕ್ಕಳು ಶಾಲೆಗೆ ಬರಬೇಕಾದರೆ ರಾಜ್ಯ ಹೆದ್ದಾರಿಯನ್ನು ಬಳಸಿಕೊಂಡು ಬರಬೇಕಾಗುತ್ತದೆ.ಆದರೆ ಈ ರಸ್ತೆಯು ರಾಜ್ಯ ಹೆದ್ದಾರಿ  ಆಗಿರುವುದರಿಂದ  ವಾಹನಗಳ ಓಡಾಟ  ಹೆಚ್ಚಾಗಿರುತ್ತದೆ  ಹೀಗಾಗಿ ಮಕ್ಕಳ  ಹಿತದೃಷ್ಟಿಯಿಂದ ಈ ಮಾರ್ಗವು ಮಕ್ಕಳಿಗೆ ಸೂಕ್ತವಲ್ಲ ಎಂದು ನನ್ನ ಅನಿಸಿಕೆ ಇದೆ. ಕಾರಣ ಶಾಲೆಯ ದಕ್ಷಿಣ ಭಾಗದಲ್ಲಿರುವ ರಸ್ತೆಗೆ ಹೊಂದಿಕೊಂಡಂತೆ ಇರುವ ಖಾಸಗಿ ಆಸ್ತಿಗೆ ಸಂಬಂಧಿಸಿದ ಹಿರಿಯರನ್ನು ಕರೆಯಿಸಿ ಅವರಿಗೆ ಮಕ್ಕಳು ಶಿಕ್ಷಣ ಕಲಿಯಲು ಒಂದಿಷ್ಟು ಜಾಗ ಬಿಟ್ಟು ಸಹಾಯ ಮಾಡಲು ವಿನಂತಿಸಿಕೊಳ್ಳಲಾಗುವುದು.ಇದಕ್ಕೆ ಹಿರಿಯರು ಸ್ಪಂದನೆ ನೀಡಿದರೆ ಶಾಶ್ವತವಾಗಿ ಈ ಶಾಲೆಗೆ ತೊಂದರೆ ಇಲ್ಲದಂತಾಗುತ್ತದೆ.ಕಾರಣ ಕೆಲವೇ ದಿನಗಳಲ್ಲಿ ಸಂಬಂಧಪಟ್ಟ ಆಸ್ತಿಯ ಹಿರಿಯರನ್ನು ಕರೆಯಿಸಿ ಅವರಿಗೆ ಮನವೊಲಿಸಲು ಪ್ರಾಮಾಣಿಕ  ಪ್ರಯತ್ನ ಮಾಡುತ್ತೇನೆ ಎಂದರು. ಯಾವುದೇ ಮಗು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ನನ್ನ ಉದ್ದೇಶ. ಪ್ರತಿಯೊಂದು ಮಗು ಶಿಕ್ಷಣ ಪಡೆಯಲೇಬೇಕು. ಇದಕ್ಕೆ ಇಲಾಖೆ ಗಿಂತ ಪಾಲಕರ ಸಹಾಯ-ಸಹಕಾರ ಬಹಳ ಮುಖ್ಯವಿದೆ ಎಂದರು.ಶಾಲೆಯ ಈ ಸಮಸ್ಯೆಯ ಪರಿಹಾರಕ್ಕಾಗಿ ಸಹಾಯ ಸಹಕಾರ ನೀಡುತ್ತಿರುವ ಹಿರಿಯರಾದ ಪಿ. ಎಸ್ .ಮಾಸ್ತಿ , ದಯಾನಂದ ಕಾಳೆ, ಗೌತಮ ರೋಡಕರ, ಆನಂದ ನಡುವಿನಕೆರಿ ಸೇರಿದಂತೆ ಇನ್ನುಳಿದ ಹಿರಿಯರನ್ನು ಅಭಿನಂದಿಸಿದರು. ಈ ಶಾಲೆ ಇರುವುದು ಈ ಭಾಗದಲ್ಲಿರುವ ತಮ್ಮೆಲ್ಲರ  ಮಕ್ಕಳ ಭವಿಷ್ಯ ನಿರ್ಮಿಸಲು. ಕಾರಣ ತಮ್ಮ  ಸಹಾಯ ಸಹಕಾರವಿಲ್ಲದೆ ಶಾಲೆಯ ಹಾಗೂ ಮಕ್ಕಳ ಅಭಿವೃದ್ಧಿ ಆಗದು.ಕಾರಣ ಶಿಕ್ಷಣದ ವಿಷಯಕ್ಕೆ ಸಂಬಂಧಪಟ್ಟಂತೆ ತಾವು ಯಾವಾಗಲೂ ನಮ್ಮ ಬೆನ್ನೆಲುಬಾಗಿ ಇರಬೇಕೆಂದು ಈ ಮೂಲಕ ಹಿರಿಯರಲ್ಲಿ ವಿನಂತಿಸಿಕೊಂಡರು.

                  ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣಾಧಿಕಾರಿ ಭೇಟಿ ನೀಡಿರುವುದು.

     ಈ ಸಂದರ್ಭದಲ್ಲಿ ಪೂರ್ವ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ  ಎಸ್.ಬಿ. ಹಡಪದ ಹಾಗೂ ಪಶ್ಚಿಮ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಆರ್. ಎ. ನ್ಯಾಮಗೌಡ,  ಶಾಲೆಯ ಮುಖ್ಯ ಗುರುಮಾತೆ ಭಾಗೀರತಿ ಕಾಂಬಳೆ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಶ ಹಟ್ಟೆನವರ, ಶಿಕ್ಷಕರಾದ ಅಪ್ಪಾಸಾಬ ಹಟ್ಟೆನವರ ಮತ್ತು ರಾಜು ಮಾಸ್ತಿ ಹಾಜರಿದ್ದರು.

ಶಿಕ್ಷಣಾಧಿಕಾರಿ ನ್ಯಾಮಗೌಡ ರವರು ಶಾಲೆಗೆ ಸಂಬಂಧಿಸಿದ ಮಾರ್ಗವನ್ನು ಸ್ವತಹ ಪರಿಶೀಲನೆ ಮಾಡಿದರು.