ರಬಕವಿ-ಬನಹಟ್ಟಿ ನಗರಸಭೆಯ ಮಹತ್ವದ ಯೋಜನೆಯಾಗಿರುವ ಒಳಚರಂಡಿ ಕಾಮಗಾರಿ ನೆನೆಗುದಿಗೆ ಬಿದ್ದಿರುವದು.
ಕಳೆದೊಂದು ವರ್ಷದಿಂದ ನಡೆಯದ ಮಹತ್ವದ ಕಾಮಗಾರಿ
*ತೀವ್ರ ನಿರ್ಲಕ್ಷ್ಯಕ್ಕೊಳಗಾದ 42.63 ಕೋಟಿ ರೂ. ವೆಚ್ಚದ `ಒಳಚರಂಡಿ ಯೋಜನೆ’
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಸೆ16: 2015 ರಲ್ಲಿ ರಬಕವಿ-ಬನಹಟ್ಟಿ ನಗರಸಭೆಗೆ ಅಂತರಾಷ್ಟ್ರೀಯಮಟ್ಟದ ಏಸಿಯನ್ ಡೆವಲೆಪ್‍ಮೆಂಟ್ ಬ್ಯಾಂಕ್(ಎಡಿಬಿ) ಯೋಜನೆಯಡಿ ಬರೋಬ್ಬರಿ 42.63 ಕೋಟಿ ರೂ.ಗಳ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಕೊನೆಯ ಹಂತದಲ್ಲಿ ತೀವ್ರಗತಿಯಲ್ಲಿ ಕುಂಠಿತಗೊಳಗಾಗುತ್ತಿರುವದು ಬೇಸರ ತರವಂಥದ್ದು.
ರಬಕವಿ-ಬನಹಟ್ಟಿ-ಹೊಸೂರ-ರಾಮಪೂರ ಪಟ್ಟಣಗಳನ್ನೊಳಗೊಂಡ `ಒಳಚರಂಡಿ ಯೋಜನೆ’ಗೆ ಒಟ್ಟು 120 ಕಿ.ಮೀ.ನಷ್ಟು ಪೈಪ್‍ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ಮೊದಲನೆ ಕಂತಾಗಿ 40 ಕಿ.ಮೀ.ಗೆ ಟೆಂಡರ್ ಕರೆಯುವದರ ಮೂಲಕ ಇದಕ್ಕನುಗುಣವಾಗಿ (ಒಳಚರಂಡಿ ನೀರು ಸಂಗ್ರಹಣಾ ಘಟಕ)ಎಸ್‍ಟಿಪಿ ಪ್ಲಾಂಟ್‍ನ್ನೂ ತಯಾರಿಸಬೇಕಿತ್ತು. ಇದೀಗ ಎಲ್ಲ ಕಾಮಗಾರಿ ಮುಕ್ತಾಯಗೊಂಡಿದೆ.
ರಬಕವಿಯ ಕೃಷ್ಣಾ ನದಿಗೆ ತೆರಳುವ ಮದಲಮಟ್ಟಿ ಮಾರ್ಗಕ್ಕೆ ಅಂಟಿಕೊಂಡಿರುವ ಬಸವರಾಜ ತೆಗ್ಗಿಯವರ ತೋಟದ ಹತ್ತಿರ 8.18 ಎಕರೆ ಪ್ರದೇಶದಲ್ಲಿ 9.12 ಮಿಲಿಯನ್ ಲೀಟರ್(ಎಂಎಲ್‍ಡಿ)ಯಷ್ಟು ಚರಂಡಿ ನೀರು ಶೇಖರಣಾ ಘಟಕದ ಕಾರ್ಯವೂ ಸಂಪೂರ್ಣಗೊಂಡಿದೆ.
ಇದೀಗ ಆಯಾ ಮನೆಗಳ ಚರಂಡಿ ನೀರು ಸಂಪರ್ಕಕ್ಕೆ ಯಾವದೇ ಕಾರ್ಯ ನಡೆಯದಿರುವದು ಈ ಯೋಜನೆಗೆ ಮತ್ತಷ್ಟು ವಿಳಂಬವಾಗಲು ಕಾರಣವಾಗುತ್ತಿದೆ.
ಸಂಪರ್ಕಕ್ಕೆ ದುಬಾರಿ ಶುಲ್ಕ: ಮೊದಲೇ ನೇಕಾರಿಕೆಯನ್ನು ಅವಲಂಬಿಸಿರುವ ರಬಕವಿ-ಬನಹಟ್ಟಿ ನಗರದ ಬಹುತೇಕ ಜನತೆ ಅಂದಿನ ದುಡಿಮೆಗೆ ಅಂದೇ ಖರ್ಚಾಗುವಷ್ಟು ದುಡಿಯುವ ಕಾಯಕ ಇವರದಾಗಿದೆ. ಹೀಗಿದ್ದಾಗ ಒಳಚರಂಡಿಗೆ ಮನೆಗಳ ಸಂಪರ್ಕಕ್ಕೆ ತಲಾ ಕುಟುಂಬ 1500 ರೂ.ಗಳನ್ನು ನಗರಸಭೆಗೆ ಭರಿಸಬೇಕಿದೆ. ಅಲ್ಲದೆ ಮಾಸಿಕ 30 ರೂ. ಶುಲ್ಕವನ್ನೂ ವಿಧಿಸಲಾಗಿದೆ. ಇವೆಲ್ಲವೂ ನೇಕಾರ ಸಮುದಾಯಕ್ಕೆ ದುಬಾರಿಯಾಗಿ ಪರಿಣಮಿಸಿದ್ದು, ನಗರಸಭೆಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈಗಾಗಲೇ ಸರ್ಕಾರೇತರ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ಸದ್ಯ 40 ಕಿ.ಮೀ.ನಲ್ಲಿರುವ 9 ಸಾವಿರ ಕುಟುಂಬಗಳಿಂದ ಹಣ ಪಾವತಿಸುವ ಕಾರ್ಯವೂ ನಡೆಯಲಿದೆ. ಅಲ್ಲದೆ 2017-18, 2018-19 ಹಾಗು 2019-20 ರಲ್ಲಿ ನಗರಸಭೆಯ ಅನುದಾನಗಳಲ್ಲಿ ಉಳಿದಿರುವ ಸುಮಾರು 30 ಲಕ್ಷ ರೂ.ಗಳನ್ನು ಪರಿಶಿಷ್ಠ ಜಾತಿ, ಪಂಗಡ ಹಾಗು ಹಿಂದುಳಿದ ವರ್ಗಗಳ ಕುಟುಂಬಗಳಿಂದ ಸಬ್ಸಿಡಿಯಾಗಿ ಹಣ ಭರಣಾ ಮಾಡಲು ಸದ್ಬಳಕೆ ಮಾಡಿಕೊಳ್ಳುವ ವಿಚಾರವೂ ನಗರಸಭೆಯದ್ದಾಗಿದೆ. ಆದರೂ ಖಾಸಗಿ ಕುಟುಂಬಗಳಿಗೆ ಒಳಚರಂಡಿಗೆ ಸಂಪರ್ಕ ಮಾಡುವ ಫೀ ಒಂದು ಸವಾಲಾಗಿದ್ದಂತು ಸತ್ಯ.
`ಒಳಚರಂಡಿ ಯೋಜನೆಯಡಿ ಪ್ರತಿ ಮನೆಗೆ ಸಂಪರ್ಕಕ್ಕೆ ಕಾರ್ಯ ಶೀಘ್ರವೇ ನಡೆಯಲಿದೆ. ನಗರಸಭೆ ಅನುದಾನವನ್ನು ಬಳಕೆ ಮಾಡಿಕೊಂಡು ಇದರಲ್ಲಿ ಪಜಾ, ಪಪಂ, ಹಿಂದುಳಿದ ವರ್ಗ ಹಾಗು ಸಾರ್ವಜನಿಕ ಸ್ಥಳಗಳ ಸಂಪರ್ಕ ಲೈನ್‍ಗಳಿಗೆ ಬಳಸಲಾಗುವದು. ಸಾರ್ವಜನಿಕರು ಸಹಕರಿಸಿ, ನಗರ ಸ್ವಚ್ಛತೆಗೆ ಅವಕಾಶ ಕಲ್ಪಿಸಬೇಕು.’----ಶ್ರೀನಿವಾಸ ಜಾಧವ, ಪೌರಾಯುಕ್ತ, ರಬಕವಿ-ಬನಹಟ್ಟಿ.
`ಮೊದಲ ಹಂತವಾಗಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ನಗರಸಭೆಯಿಂದ ಮನೆಗಳ ಸಂಪರ್ಕ ಮಾತ್ರ ಬಾಕಿ ಉಳಿದಿದೆ. ಮುಂದಿನ ಹಂತವಾಗಿ ಮತ್ತೇ ಕಾಮಗಾರಿ ನಡೆಯಲಿದ್ದು, ಶೀಘ್ರವೇ ಈ ಯೋಜನೆ ಮುಕ್ತಾಯಗೊಳ್ಳುವ ಮೂಲಕ ಯಶಸ್ವಿ ಕಾಣಲಿದೆ.’------ಎಸ್.ಎಸ್. ಹತ್ತಿ, ಕಾರ್ಯನಿರ್ವಾಹಕ ಅಭಿಯಂತರ, ಒಳಚರಂಡಿ ಯೋಜನೆ.
Social Plugin