ಇನ್ನೂ ಶಾಲೆಗೆ ತೆರಳದ 4ರ ಪೋರಿಯ ಮಾಹಿತಿ ಕಣಜ
*ಈ ಪೋರಿಗೆ ಮಿಸ್ ಇಂಡಿಯಾ ಆಗುವಾಸೆ
ರಬಕವಿ-ಬನಹಟ್ಟಿ
ನಾಲ್ಕು ವರ್ಷದ ಈ ಪೋರಿ, ರಾಜ್ಯ, ದೇಶದ ಗಣ್ಯರ ಹಾಗು ಸ್ವಾತಂತ್ರ್ಯ ಹೋರಾಟಗಾರರ ಪರಿಚಯ, ಸ್ತೋತ್ರ, ಶ್ಲೋಕ, ತತ್ವ ಪದ ಸೇರಿದಂತೆ ಇಂಗ್ಲೀಷ್ ಹಾಗು ಕನ್ನಡ ಭಾಷೆಯ ಮೂಲಾಕ್ಷರ ಅದಕ್ಕೆ ಪದಗಳ ಉದಾಹರಣೆ, ಅಂಕೆ ಮಗ್ಗೆ, ಹೀಗೆ ಹಲವು ಕ್ಷೇತ್ರದ ವ್ಯಕ್ತಿಗಳ ಪರಿಚಯವನ್ನು ಲೀಲಾಜಾಲವಾಗಿ ಹೇಳುತ್ತಾಳೆ.
ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಮುತ್ತೂರ ಗಲ್ಲಿನ ನಿವಾಸಿಯಾದ ಉಮೇಶ ಕಿತ್ತೂರ ಹಾಗು ಅಶ್ವಿನಿ ಕಿತ್ತೂರ ಅವರ ಪುತ್ರಿ ಆರಾಧ್ಯಾಳ ಚಟುವಟಿಕೆಗಳನ್ನು ನೋಡಿದರೆ ಎಂತಹವರಾದರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಇಲ್ಲಿನ ಸರ್ಕಾರಿ ಡಿಪ್ಲೋಮಾ ಕಾಲೇಜಿನಲ್ಲಿ ಅಟೆಂಡರ್ ಆಗಿರುವ ತಂದೆ ಉಮೇಶ, ಮನೆಗೆಲಸದಲ್ಲಿರುವ ತಾಯಿ ಅಶ್ವಿನಿ ಅವರೇ ಗುರುಗಳಾಗಿದ್ದು, ಮನೆಯೇ ಮೊದಲ ಪಾಠ ಶಾಲೆಯಾಗಿದೆ.
ವಿಶೇಷ ಸಾಮಥ್ರ್ಯ: ಶಾಲೆಗೆ ತೆರಳದ ವಯಸ್ಸಿನಲ್ಲಿ ಕನ್ನಡ ಹಾಗು ಇಂಗ್ಲೀಷ್ ಭಾಷೆಯ ಪದಗಳನ್ನು ಮೂಲಾಕ್ಷರ ಸಮೇತ ಬರೆಯುವದು ಓದುವದಲ್ಲದೆ ಅಂಕೆ ಮಗ್ಗೆಗಳನ್ನೂ ಸಹಿತ ನಿರರ್ಗಳವಾಗಿ ಹೇಳಬಲ್ಲ ಚಾಕಚಕ್ಯತೆ ಇವಳದಾಗಿದೆ. ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿಗಳು, ರಾಜ್ಯಪಾಲ, ಮುಖ್ಯಮಂತ್ರಿ, ವಿವಿಧ ಸಚಿವರುಗಳ ಹೆಸರು ದೇಶಗಳಲ್ಲಿರುವ ಎಲ್ಲ ರಾಜ್ಯಗಳ ಹೆಸರು ಹಾಗು ಅವುಗಳ ರಾಜಧಾನಿ ಹೆಸರು ಸೇರಿದಂತೆ ಅನೇಕ ಸಾಧನೆಗಳನ್ನು ಲೀಲಾಜಾಲವಾಗಿ ಹೇಳುವ ಆರಾಧ್ಯಾ ಒಮ್ಮೆ ತಿಳಿಹೇಳಿದ್ದನ್ನು ತೀಕ್ಷ್ಣವಾಗಿ ತಿಳಿದುಕೊಳ್ಳುವ ಶಕ್ತಿ ಹೊಂದಿದ್ದಲ್ಲದೆ ಮತ್ತಷ್ಟು ಕಲಿಯಬೇಕೆಂಬ ಸ್ವಯಂ ಹೆಬ್ಬಯಕೆ ಎಲ್ಲರನ್ನೂ ಅಚ್ಚರಿ ಮೂಡಿಸಿದೆ.
ಅಪಾರ ಧೈವಭಕ್ತಿ: ಆರಾಧ್ಯಾ ನಿತ್ಯ ಪೂಜೆ ಪುನಸ್ಕಾರ ಹಾಗು ಆಧ್ಯಾತ್ಮಕ್ಕೆ ಸಮಯ ಮೀಸಲು, ಲಿಂಗಪೂಜೆ, ಧ್ಯಾನದಲ್ಲಿ ತೊಡಗುತ್ತಾಳೆ. ಶ್ಲೋಕ ಹಾಗು ಭಕ್ತಿ ಗೀತೆಗಳನ್ನು ಹೇಳುತ್ತಾಳೆ.
ಮಿಸ್ ಇಂಡಿಯಾ ಕನಸು: ನಿತ್ಯ ಯೋಗಾಭ್ಯಾಸ, ವಿಭಿನ್ನ ರೀತಿಯ ಉಡುಪು, ಶೃಂಗಾರ, ಮಾತಿನ ಶೈಲಿ, ಫ್ಯಾಷನ್, ವಾಕಿಂಗ್ ಸ್ಟೈಲ್, ಕ್ಯಾಮೆರಾಗೆ ಫೋಜು ಹೀಗೆ ಎಲ್ಲದರಲ್ಲೂ ವಿಶೇಷತೆ ನೀಡುತ್ತ ಈ ತುಂಟ ಪೋರಿ ಜ್ಞಾನದೊಂದಿಗೆ ಮಿಸ್ ಇಂಡಿಯಾ ಆಗುತ್ತೇನೆಂದು ಭಯ ಹಾಗು ನಾಚಿಕೆಯಿಂದ ಹೇಳುತ್ತಾಳೆ.
`ಯಾವದೇ ಗಿನ್ನೀಸ್ ದಾಖಲೆ ಮಾಡುವ ಉದ್ದೇಶ ಹೊಂದುವದಕ್ಕಾಗಿ ಕಲಿಸುತ್ತಿಲ್ಲ ಅಥವಾ ಯಾವದೇ ಸಾಧನೆ ಮಾಡಬೇಕೆನ್ನುವದು ಕಿಂಚಿತ್ತು ಇಲ್ಲ. ಅವಳಲ್ಲಿರುವ ನೆನಪಿನ ಶಕ್ತಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿದೆ. ಆಟಿಕೆ ಸಾಮಗ್ರಿಗಳ ಬದಲು ಪುಸ್ತಕ ಹಾಗು ದೈವಿಕ ಸಾಮಗ್ರಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾಳೆ’.---ಉಮೇಶ ಕಿತ್ತೂರ, ಆರಾಧ್ಯಾ ತಂದೆ.
`ನಾವು ಹೇಳಿದ ವಿಷಯವನ್ನು ತೀಕ್ಷ್ಣವಾಗಿ ನೆನಪಿನಲ್ಲಿಟ್ಟಕೊಂಡು ಯಾವಾಗ ಕೇಳಿದರೂ ಅದನ್ನು ಸಂಪೂರ್ಣವಾಗಿ ಹೇಳುತ್ತಾಳೆ. ಮಕ್ಕಳ ಆಸಕ್ತಿ ಗುರ್ತಿಸಿ ಪ್ರೋತ್ಸಾಹ ನೀಡಬೇಕೆನ್ನುವದನ್ನು ನಾವು ರೂಢಿಸಿಕೊಂಡು ಮನೆಯಲ್ಲಿ ಹೇಳಿಕೊಡುತ್ತಿದ್ದೇವೆ.’----ಅಶ್ವಿನಿ ಕಿತ್ತೂರ, ಆರಾಧ್ಯಾ ತಾಯಿ.

Social Plugin