ಇನ್ನೂ ಚೇತರಿಕೆಗೊಳ್ಳದ ಜವಳಿ ಕ್ಷೇತ್ರ: ಅನ್ಯ ರಾಜ್ಯಕ್ಕೆ ಇನ್ನೂ ರಫ್ತಾಗದ ಸೀರೆಗಳು
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಅ31: ಹಿಂದೊಂದು ದಿನವಿತ್ತು ಇಡೀ ರಬಕವಿ-ಬನಹಟ್ಟಿ ದೇಶವಷ್ಟೇ ಅಲ್ಲದೆ ವಿದೇಶದಲ್ಲೂ ತನ್ನದೇ ಮ್ಯಾಜಿಕ್ ಮಾಡುವ ಮೂಲಕ ಸೀರೆ ಉತ್ಪಾದನೆಗಳಲ್ಲಿ ಸೈ ಎನ್ನಿಸಿಕೊಂಡ ಬಣ್ಣದ ನಗರಿ ಇದೀಗ ತನ್ನ ನೈಜ ಬಣ್ಣ ಕಳೆಗುಂದುವಲ್ಲಿ ಕಾರಣವಾಗುತ್ತಿದೆ. ಕೊರೊನಾ ಮಹಾಮಾರಿಗೆ ಸಂಪೂರ್ಣ ತತ್ತರಿಸಿ ಹೋಗಿದ್ದ ಜವಳಿ ಕ್ಷೇತ್ರ ಇದೀಗ ಸ್ವಲ್ಪಮಟ್ಟಿಗೆ ಚೇತರಿಕೆಯಾಗುತ್ತಿದ್ದರೂ ಬಕಾಸುರನ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತಾಗಿದೆ.
15 ರಿಂದ 20 ಸಾವಿರ ಮಗ್ಗಗಳಿಂದ ಸದಾ ಮಗ್ಗಗಳ ಶಬ್ದದಿಂದಲೇ ಗುಜುಗುಡುತ್ತಿದ್ದ ಇಡೀ ರಬಕವಿ-ಬನಹಟ್ಟಿ ನಗರ ಇದೀಗ ಸಂಪೂರ್ಣ ಮೌನ ತಾಳಿದೆ. ಅಲ್ಲೋ ಇಲ್ಲೋ ಅಲ್ಪಸ್ವಲ್ಪ ಮಗ್ಗಗಳ ಸಪ್ಪಳ ಕೇಳಿ ಬರುತ್ತಿದ್ದರೆ ಭರಪೂರ ಉದ್ದಿಮೆ ಪ್ರಾರಂಭವಾಗಿಲ್ಲ. ಇದೀಗ ಏಳೆಂಟು ಸಾವಿರಕ್ಕೆ ಮಾತ್ರ ಕುಸಿದಿದ್ದು ಅದರಲ್ಲೂ ಅರ್ಧದಷ್ಟು ಮಗ್ಗಗಳು ಬಂದ್ ಆಗಿವೆ. ಇದರಿಂದ ನೇಕಾರರ ಸ್ಥಿತಿ ಸಂಪೂರ್ಣ ಅಯೋಮಯವಾಗಿದೆ.
ಸೀರೆಗಳು ರಫ್ತಾಗುತ್ತಿಲ್ಲ: ಕಳೆದ ಆರೇಳು ತಿಂಗಳಿಂದ ನೇಯ್ದ ಸೀರೆಗಳು ಕೇವಲ ರಾಜ್ಯದಲ್ಲಿ ಮಾತ್ರ ರಫ್ತಾಗುತ್ತಿವೆ. ಇಲ್ಲಿನ ಸೀರೆಗಳ ಕೇಂದ್ರ ಬಿಂದುವಾಗಿರುವ ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಹಾಗು ತಮಿಳುನಾಡುಗಳದ್ದೇ ಸಿಂಹ ಪಾಲು. ಇದೀಗ ಯಾವದೇ ರೀತಿ ವ್ಯಾಪಾರ-ವಹಿವಾಟು ನಡೆಯದ ಕಾರಣ ಬೇಡಿಕೆ ದೊರಕುತ್ತಿಲ್ಲ. ವಿಧ-ವಿಧವಾದ ಗುಣಮಟ್ಟ ಹಾಗು ನಮೂನೆಗಳಲ್ಲಿ ಸೀರೆಗಳು ಉತ್ಪಾದನೆಯಾಗುತ್ತಿದ್ದರೂ ಬೇಡಿಕೆ ಬರುತ್ತಿರುವದು ಮಾತ್ರ ಎಲೆಕ್ಟ್ರಾನಿಕ್ ಜಕಾರ್ಡ್, ಜಕಾರ್ಡ್, ಕಾಟನ್ ಹಾಗು ಎಂಬ್ರಾಯಿಡರ್‍ಗಳಿಗೆ ಮಾತ್ರ ಅವಕಾಶ ದೊರಕುತ್ತಿದೆ. 
ನಿಂತ ವಹಿವಾಟು: ದಿನಂಪ್ರತಿ ಲಕ್ಷಾಂತರ ರೂ.ಗಳ ವಹಿವಾಟು ನಡೆಯುತ್ತಿದ್ದ ರಬಕವಿ-ಬನಹಟ್ಟಿಯಲ್ಲಿ ಸಾವಿರಕ್ಕೆ ತಲುಪುವಲ್ಲಿ ಅಚ್ಚರಿಗೊಂಡಿದೆ. ಇತ್ತ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದರೆ, ಸೀರೆಗಳ ಮಾರಾಟವಿಲ್ಲದ ಕಾರಣ ಉತ್ಪಾದನೆಗೆ ಕಡಿವಾಣ ಹಾಕುವಲ್ಲಿ ಕಾರಣವಾಗಿದ್ದು, ಕಚ್ಚಾ ವಸ್ತುಗಳ ಖರೀದಿ ನಡೆಯುತ್ತಿಲ್ಲ. ಮಹತ್ವದ್ದಾಗಿ ಏಳೆಂಟು ತಿಂಗಳ ಹಿಂದೆ ಮಾರಾಟ ಮಾಡಿರುವ ಸೀರೆಗಳ ಬಿಲ್ ಹಣವೇ ವ್ಯಾಪಾರಸ್ಥರ ಕೈ ಸೇರದ ಕಾರಣ ಮಾಲಿಕರ ಸ್ಥಿತಿ ಚಿಂತಾಜನಕವಾಗಿದೆ.
ಅನ್ಯ ಉದ್ಯೋಗದತ್ತ ನೇಕಾರ: ಲಾಕ್‍ಡೌನ್ ನಂತರದ ದಿನಗಳಲ್ಲಿ ನೇಕಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಪ್ರತಿ ವಾರಕ್ಕೆ 25 ಸೀರೆಗಳನ್ನು ನೇಯ್ದೆ ಮಾಡುತ್ತಿದ್ದ ನೇಕಾರ ಇದೀಗ 8 ರಿಂದ 10 ಸೀರೆಗಳನ್ನು ಮಾತ್ರ ನೇಯ್ಗೆ ಮಾಡಿ ಎಂಬ ಸಂದೇಶ ಮಾಲಿಕರದ್ದಾಗಿದೆ. ಅರ್ಧದಷ್ಟು ನೇಕಾರರು ಈ ಉದ್ಯಮವನ್ನೇ ಬಿಟ್ಟು ಇಟ್ಟಂಗಿ ಭಟ್ಟಿ, ಮನೆ ಕಟ್ಟುವ ಕೆಲಸ, ಹೊಟೇಲ್ ಸೇರಿದಂತೆ ಇತರೆ ಉದ್ಯೋಗದತ್ತ ಅರಸಿ ಹೋಗುತ್ತಿದ್ದಾರೆ. 
ಕೈಕೊಟ್ಟ ಸರ್ಕಾರ: ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕನಿಷ್ಠ 10 ಲಕ್ಷ ಸೀರೆಗಳನ್ನಾದರೂ ರಾಜ್ಯದ ವಿವಿಧ ನೇಕಾರಿಕೆ ಪ್ರದೇಶದಿಂದ ಪಡೆಯಬೇಕೆಂದು ಸ್ಥಳೀಯ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಸಚಿವ ಶ್ರೀಮಂತ ಪಾಟೀಲ ಹಾಗು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಇದೀಗ ಮನವಿಗೆ ಸ್ಪಂದಿಸದೆ ಮೌನ ತಾಳಿರುವ ಸರ್ಕಾರದ ಉತ್ತರ ನೇಕಾರರಿಗೆ ನಿರಾಶೆ ಮೂಡುವಲ್ಲಿ ಕಾರಣವಾಗಿದೆ.
ಆವರ್ತ ನಿಧಿ ಸ್ಥಾಪಿಸಲಿ: ಸರ್ಕಾರ ಎಲ್ಲ ರಂಗಗಳಲ್ಲಿಯೂ ಆವರ್ತ ನಿಧಿಯನ್ನು ನೀಡುತ್ತಿದೆ. ಜವಳಿ ಕ್ಷೇತ್ರದಲ್ಲಿ ಕನಿಷ್ಠ 50 ಕೋಟಿ ರೂ.ಗಳಷ್ಟಾದರೂ ಆವರ್ತ ನಿಧಿ ಸ್ಥಾಪನೆ ಮಾಡಿದ್ದಲ್ಲಿ ರಾಜ್ಯದ ನೇಕಾರರ ಸ್ಥಿತಿ ಚೇತರಿಕೆಯಾಗುವದರ ಜೊತೆಗೆ ಜವಳಿ ಕ್ಷೇತ್ರ ಸುಧಾರಣೆಯಾಗುವಲ್ಲಿ ಕಾರಣವಾಗಲಿದೆ ಎಂಬುದು ಇಲ್ಲಿನ ನೇಕಾರ ಮುಖಂಡರ ಒತ್ತಾಯವಾಗಿದೆ.
`ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಸೀರೆ ಒದಗಿಸುವಲ್ಲಿ ನೇಕಾರರಿಂದ 10 ಲಕ್ಷ ಸೀರೆಗಳನ್ನು ಖರೀದಿಸುವ ವಿಶ್ವಾಸವಿತ್ತು. ಸರ್ಕಾರದ ಮೌನದಿಂದ ನಿರಾಸೆಯಾಗಿದೆ. ಇದರ ಕಾರ್ಯವಾಗಲಿ’.----ಮಲ್ಲಿಕಾರ್ಜುನ ಬಾಣಕಾರ, ಜವಳಿ ಉದ್ಯಮಿ.
`ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ತಮಿಳನಾಡು, ಮಹಾರಾಷ್ಟ್ರ ಸೀರೆ ಮಾರಾಟದ ಕೇಂದ್ರ ಬಿಂದು. ಕೊರೊನಾ ನಂತರ ಸೀರೆಗಳ ಬೇಡಿಕೆಯಿಲ್ಲದೆ ಭಯದಲ್ಲಿ ಸೀರೆಗಳನ್ನು ಉತ್ಪಾದಿಸುವ ಸ್ಥಿತಿ ಬಂದೊದಗಿದೆ.’----ಕಿರಣ ಭದ್ರನ್ನವರ, ಯುವ ಉದ್ಯಮಿ.
`ಸರ್ಕಾರದ ಆವರ್ತ ನಿಧಿ ಜವಳಿ ಕ್ಷೇತ್ರಕ್ಕೆ ಅವಶ್ಯವಿದೆ. ಕಳೆದೆರಡು ದಶಕಗಳ ಬೇಡಿಕೆಯಾಗಿರುವದನ್ನು ಶೀಘ್ರವೇ ಮಂಜೂರು ಮಾಡಿದ್ದಲ್ಲಿ ರಾಜ್ಯದಲ್ಲಿ ಜವಳಿ ಕ್ಷೇತ್ರ ಉಳಿಯುವದು. ಇಲ್ಲವಾದಲ್ಲಿ ಬದುಕು ಮೂರಾಬಟ್ಟೆ ನಿಶ್ಚಿತ’.-----ದುಂಡಪ್ಪ ಮಾಚಕನೂರ.
`ನೇಕಾರರನ್ನು ಸಂತೈಸುವಷ್ಟೂ ನೆಮ್ಮದಿ ಮಾಲಿಕರಲ್ಲಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಸೀರೆ ಉತ್ಪಾದಕರ ಸ್ಥಿತಿ ಹದಗೆಟ್ಟಿದೆ. ನೇಕಾರರ ಅನ್ಯ ಉದ್ಯೋಗದತ್ತ ವಾಲುತ್ತಿದ್ದರೂ ಸುಮ್ಮನೆ ಕುಳಿತುಕೊಳ್ಳಬೇಕಾದ ದುರಂತ ನಮ್ಮದಾಗಿದೆ.’----ಸತೀಷ ಹಜಾರೆ, ಪದ್ಮಶ್ರೀ ಸಾರೀಜ್, ರಬಕವಿ.
`ಉತ್ಪಾದನೆಗೆ ಕಚ್ಚಾ ವಸ್ತು ಗಗನಕ್ಕೇರಿದರೆ ಮತ್ತೊಂದೆಡೆ ಈಗಾಗಲೇ ನೀಡಿದ ಸೀರೆಗಳ ಹಣವೂ ಕೂಡ ಕೈ ಸೇರುತ್ತಿಲ್ಲ. ಒಟ್ಟಾರೆ ಉದ್ಯೋಗ ಚಟುವಟಿಕೆ ಸ್ತಬ್ಧಗೊಂಡಿದೆ. ಏನೂ ಮಾಡದ ಸ್ಥಿತಿ ನಮ್ಮದಾಗಿದೆ’.----ಶಂಕರ ಜಾಲಿಗಿಡದ, ಅಧ್ಯಕ್ಷರು, ಪಾವರ್‍ಲೂಮ್ ಅಶೋಷಿಯೇಶನ್, ಬನಹಟ್ಟಿ.
` ಸರ್ಕಾರ ಸ್ವಲ್ಪಮಟ್ಟಿಗಾದರೂ ಜವಳಿ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಸ್ವಲ್ಪ ಚೇತರಿಕೆ ಕಾಣಬಹುದು. ಸರ್ಕಾರದ ಅಭಯಹಸ್ತದ ನಿರೀಕ್ಷೆಯಲ್ಲಿದ್ದೇವೆ.’---ಶಂಕರ ಜುಂಜಪ್ಪನವರ, ಅಧ್ಯಕ್ಷರು, ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್.