ರಬಕವಿ-ಬನಹಟ್ಟಿ ತಾಲೂಕಾ ಕಚೇರಿಗಳಿಗೆ ಆಗ್ರಹಿಸಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿಯವರಿಗೆ ಮನವಿ ಅರ್ಪಿಸಲಾಯಿತು.

ಡಿ.31 ರೊಳಗಾಗಿ ತಾಲೂಕಾ ಕಚೇರಿಗಳ ಬರದಿದ್ದರೆ ಉಗ್ರ ಹೋರಾಟ

*ಸರ್ಕಾರಿ ಕಚೇರಿಗಳಿಗೆ ಖಾಸಗಿ ಜಾಗೆ ನೀಡಲು ಬದ್ಧ

*ಶೀಘ್ರವೇ ಉಪನೋಂದಣಿ ಪ್ರಾರಂಭಿಸಿ

ರಬಕವಿ-ಬನಹಟ್ಟಿ,ಸೆ21: ರಬಕವಿ-ಬನಹಟ್ಟಿ ತಾಲೂಕಾಗಿ ಎರಡುವರೆ ವರ್ಷಗಳೇ ಗತಿಸಿದರೂ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸದ ಕಾರಣ ತಾಲೂಕಿನ ಎಲ್ಲ ಗ್ರಾಮ ಹಾಗು ಪಟ್ಟಣಗಳ ಪ್ರಮುಖರಿಂದ ಪೊಲೀಸ್ ಠಾಣೆಯಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಜರುಗಿತು.

ತಹಶೀಲ್ದಾರ ಕಚೇರಿ ಆವರಣ ಮುಂಭಾಗದಲ್ಲಿ ಭಾರಿ ಜನಸ್ತೋಮ ಮಧ್ಯ ಮಾತನಾಡಿದ ಬ್ರಿಜ್‍ಮೋಹನ ಡಾಗಾ, ಬರುವ ಡಿ.31ರೊಳಗಾಗಿ ಬೇಡಿಕೆಗಳಲ್ಲಿರುವ ಕನಿಷ್ಠ 20 ಕಚೇರಿಗಳು ಪ್ರಾರಂಭಗೊಳ್ಳುವಂತೆ ಸರ್ಕಾರ ಹಾಗು ಅಧಿಕಾರಿಗಳು ಕಾಳಜಿವಹಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವದೆಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್ ಮಾತನಾಡಿ, ಈಗಾಗಲೇ ಕಾರ್ಯಾಲಯಗಳು ಪ್ರಾರಂಭಗೊಳ್ಳಲು ಭಾರಿ ವಿಳಂಬವಾಗಿವೆ. ಉಪನೋಂದಣಿ ಇಲಾಖೆಯನ್ನು ಶೀಘ್ರವೇ ಒದಗಿಸುವಲ್ಲಿ ಸರ್ಕಾರ ಮುತುವರ್ಜಿ ವಹಿಸಬೇಕಿದೆ. ಪ್ರತಿ ಕೆಲಸಕ್ಕೆಂದು ದೂರದ ಜಮಖಂಡಿ ಹಾಗು ತೇರದಾಳ ಪಟ್ಟಣಗಳಿಗೆ ತೆರಳಬೇಕಾದ ಅನಿವಾರ್ಯತೆಯಿದ್ದು, ಮೊದಲೇ ನೇಕಾರರು ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದು, ಒಂದು ದಿನ ಉದ್ಯೋಗ ಬಿಟ್ಟು ಇದೇ ಕೆಲಸಗಳಲ್ಲಿ ತೊಡಗಬೇಕಾಗುತ್ತಿದೆ. ತಾಲೂಕಾ ಕೇಂದ್ರವಾಗಿದ್ದರೂ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ತಾಲೂಕಾಗಿ ಯಾವ ಪ್ರಯೋಜನ?ವೆಂದು ಕಿಡಿಕಾರಿದರು.

ಖಾಸಗಿ ಜಾಗೆ ನೀಡುವೆವು: ರಬಕವಿ-ಬನಹಟ್ಟಿ ತಾಲೂಕಿಗೆ ಸಂಬಂಧಿಸಿದ ಕಚೇರಿಗಳನ್ನು ಗುರ್ತಿಸಲು ಸರ್ಕಾರ ಸ್ಥಳದ ಅಭಾವ ಅಥವಾ ವಿಳಂಬ ನೀತಿಗೆ ಇನ್ಯಾವದೋ ಕಾರಣ ಹೇಳಬಾರದು. ಒಂದು ವೇಳೆ ಪ್ರಸಂಗ ಒದಗಿದ್ದಲ್ಲಿ ಸರ್ಕಾರದ ಕಚೇರಿಗಳ ನಿರ್ವಹಣೆಗೆ ಖಾಸಗಿ ಕಟ್ಟಡಗಳನ್ನು ತಾತ್ಕಾಲಿಕವಾಗಿ ಸಂಪೂರ್ಣ ಉಚಿತವಾಗಿ ನೀಡುವೆವು ಎಂದು ಹೋರಾಟಗಾರ ಧರೆಪ್ಪ ಉಳ್ಳಾಗಡ್ಡಿ ಹೇಳಿದರು.

ಇದೇ ಸಂದರ್ಭ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಹಾಗು ತಹಶೀಲ್ದಾರ ಪ್ರಶಾಂತ ಚನಗೊಂಡರಿಗೆ ಮನವಿ ಪತ್ರ ಅರ್ಪಿಸಲಾಯಿತು.

ಇದೇ ಸಂದರ್ಭ ರಾಜು ಅಂಬಲಿ, ನಂದು ಗಾಯಕವಾಡ, ಬಸವರಾಜ ತೆಗ್ಗಿ, ಪ್ರಾಧಿಕಾರ ಅಧ್ಯಕ್ಷ ಈಶ್ವರ ನಾಗರಾಳ, ತಾಪಂ ಸದಸ್ಯ ಹಣಮಂತ ತೇಲಿ, ಸಿದ್ಧನಗೌಡ ಪಾಟೀಲ, ಸಂಜಯ ತೆಗ್ಗಿ, ಜಿಪಂ ಸದಸ್ಯ ಪರಶುರಾಮ ಬಸವ್ವಗೋಳ, ಪುಂಡಲೀಕ ಪಾಲಭಾಂವಿ, ಕುಮಾರ ಕದಂ, ಶ್ರೀಶೈಲ ಬೀಳಗಿ, ಸವಿತಾ ಹೊಸೂರ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ಸುವರ್ಣ ಕೊಪ್ಪದ, ಶಾಂತಾ ಸೊರಗಾಂವಿ, ಜಯಶ್ರೀ ಬಾಗೇವಾಡಿ, ದುರ್ಗವ್ವ ಹರಿಜನ, ಪವಿತ್ರಾ ತುಕ್ಕಣ್ಣವರ ಸೇರಿದಂತೆ ಅನೇಕರಿದ್ದರು.