'ತಾಖತ್ತಿದ್ರೆ ರಾಜಕುಮಾರ್ ವಿರುದ್ಧ ಬರೀರೋ ಬಾಸ್ಟರ್ಡ್ಸ್' - ನಿರ್ದೇಶಕ ರವೀ ಯಾಕೆ ಈ ಥರಾ ಬೈದರೋ ಇನ್ನೂ ಕಾರಣ ಗೊತ್ತಾಗಿಲ್ಲ! ◆
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು
ಬೆಂಗಳೂರಿನ ಆನಂದರಾವ್ ಸರ್ಕಲ್'ನ ಎಡ ಮೂಲೆಗಿದೆ ಗಣೇಶ ದೇವಸ್ಥಾನ. ಈ ಘಟನೆ ನಡೆದದ್ದು ಇದೇ ದೇವಸ್ಥಾನದ ಮುಂದೆ. ಗಣೇಶನ ಸಾಕ್ಷಿಯಲ್ಲಿ. ಅಂದು ಮಂಗಳವಾರ. ರಾತ್ರಿ 11ರ ಸಮಯ. ಹೆಸರಿಗೊಂದು ಉದ್ಯೋಗವಿತ್ತು. 'ಚಿತ್ರದೀಪ' ಸಿನಿಮಾ ಪತ್ರಿಕೆಯಲ್ಲಿ ಸಬ್ ಎಡಿಟರ್. ಯಾವುದೋ ಪ್ರೆಸ್ ಮೀಟ್ ಮುಗಿಸಿ ಹಿಂದಿರುಗುತ್ತಿದ್ದ ಸಮಯ. ಬಸ್ಸು ಹಿಡಿಯುವ ಧಾವಂತದಲ್ಲಿ ಎದುರಾ ಬದುರಾ ಸಿಕ್ಕವರೇ ನಿರ್ದೇಶಕ ರವೀ ಉರುಫ್ ರಾಧಾರವೀ ಉರುಫ್ ಕೆ.ಎಸ್.ಎಲ್.ಸ್ವಾಮಿ. ರವೀಯವರನ್ನು ಕಾಣುತ್ತಲೇ ನಾನು ಮತ್ತು ಸುಬ್ರಹ್ಮಣ್ಯ ನಮಸ್ಕರಿಸಿ ನಿಂತೆವು. ಅವರು ಎಂದಿನಂತಿರಲಿಲ್ಲ. ಏನೋ ಹೇಳಬೇಕೆಂದು ಕೊಂಡರು. ಮಾತು ತಡವರಿಸುತ್ತಿತ್ತು. ಏಕಾಏಕಿ ವ್ಯಗ್ರರಾದರು. ನಮ್ಮನ್ನು ಕೆಕ್ಕರಗಣ್ಣಿನಿಂದ ನೋಡುತ್ತಾ ಅಬ್ಬರಿಸತೊಡಗಿದರು : 'ಯೂ ಬಾಸ್ಟರ್ಡ್ಸ್, ನೀವು ಪತ್ರಕರ್ತರು ಬೀದಿಗೆ ಹುಟ್ಟಿದವರು. ನಿಮ್ಗೆ ಮಾನ ಮರ್ಯಾದೆ ಎಂಬುದಿದೆಯಾ? ಈಗ ತಾನೇ ಕಣ್ಣು ಬಿಡುತ್ತಿರುವವರ ವಿರುದ್ಧ ಬರೀತೀರಿ. ನಿಮ್ಗೆ, ನಿಮ್ಮ ಪೆನ್ನಿಗೆ ತಾಖತ್ತಿದ್ರೆ ರಾಜಕುಮಾರ್ ವಿರುದ್ಧ ಬರೀರೋ ಬಾಸ್ಟರ್ಡ್ಸ್...' - ಬೈಗುಳ ಸುರಿಮಳೆ!
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು .
ನಾವು ದಿಗ್ಬ್ರಾಂತರಾಗಿದ್ದೆವು. ಹೇಗೆ ರಿಯಾಕ್ಟ್ ಮಾಡಬೇಕೆಂದು ತೋಚದೇ ಫ್ರೀಜ್ ಆಗಿ ನಿಂತು ಬಿಟ್ಟಿದ್ದೆವು. ಅವರು ತಮಗೆ ಗೊತ್ತಿರುವ ಎಲ್ಲಾ ಕೊಳಕು ಭಾಷೆಯಲ್ಲಿ ಬೈಯ್ಯುತ್ತಲೇ ಇದ್ದರು. ಇಷ್ಟಕ್ಕೂ ನಾವು ಮಾಡಿರುವ ತಪ್ಪಾದ್ರೂ ಏನು?
ರವೀ ನಿರ್ದೇಶಿಸುತ್ತಿರುವ 'ಜಿಮ್ಮಿಗಲ್ಲು' ಚಿತ್ರದ ಪುಟ್ಟ ಸುದ್ದಿಯೊಂದನ್ನು ಹಿಂದಿನ ವಾರವಷ್ಟೇ 'ಚಿತ್ರದೀಪ' ಪತ್ರಿಕೆಯಲ್ಲಿ ಪ್ರಕಟಿಸಿದ್ದೆವು. ವೇಣುಗೋಪಾಲ ಕಾಸರಗೋಡು ಅವರ ಕಾದಂಬರಿ ಆಧಾರಿತ ಚಿತ್ರ 'ಜಿಮ್ಮಿಗಲ್ಲು' ಎಂದು ಅವರು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಆದರೆ ನಮಗೆ ತಿಳಿದಿರುವಂತೆ ವೇಣುಗೋಪಾಲ್ ಅವರು ಕಾದಂಬರಿ ಬರೆದಿರಲಿಲ್ಲ. ಸಿನಿಮಾಕ್ಕಾಗಿ ಕಥೆ ಬರೆದಿದ್ದರು ಅಷ್ಟೇ. ಅದನ್ನು ಮುಂದೊಮ್ಮೆ ಕಾದಂಬರಿಯನ್ನಾಗಿ ಪ್ರಕಟಿಸುವ ಯೋಚನೆಯಿತ್ತು ಅವರಿಗೆ. ಇದನ್ನು ಸ್ವತಃ ವೇಣುಗೋಪಾಲ್ ಅವರೇ ನಮ್ಮ ಬಳಿ ಹೇಳಿಕೊಂಡಿದ್ದರು. ಇದನ್ನೇ ಒಂದು ಸುದ್ದಿಯನ್ನಾಗಿ ಪ್ರಕಟಿಸಿದ್ದು ತಪ್ಪಾ?
ಆ ಕಾಲದಲ್ಲಿ ಪತ್ರಿಕಾರಂಗಕ್ಕೆ ಹೊಸಬರಾಗಿದ್ದ ನಾವು ದಿಕ್ಕೇ ತೋಚದಂತೆ ನಿಂತೇ ಇದ್ದೆವು. ಆ ಖ್ಯಾತ ನಿರ್ದೇಶಕನ ವಿರುದ್ಧ ಎದುರಾಡುವ ಧೈರ್ಯವಿಲ್ಲದ ಬಚ್ಚಾಗಳು ನಾವು. ಇಷ್ಟಕ್ಕೂ ನಮ್ಮನ್ನು ಕಾಡಿದ ಪ್ರಶ್ನೆಯೆಂದರೆ : 'ರವೀಯವರು ಇಲ್ಲೇಕೆ ರಾಜಕುಮಾರ್ ಹೆಸರು ತಂದರು? ಈ ಸುದ್ದಿಗೂ ರಾಜ್ ಅವರಿಗೂ ಏನು ಸಂಬಂಧ? ಎತ್ತಿ ಕಟ್ಟುವ ಹುನ್ನಾರವೋ?'- ಒಂದೂ ಗೊತ್ತಾಗದೇ ಕಂಗೆಟ್ಟು ಹೋದೆವು. ತೃಪ್ತಿಯಾಗುವವರೆಗೆ ಬೈದು ಸುಸ್ತಾದ ರವೀ ಬುಸುಗುಟ್ಟುತ್ತಾ ಹೋದ ಮೇಲೆ ನಾವು ನೇರವಾಗಿ ಹೊರಟಿದ್ದು ಸಂಪಾದಕರಾದ ಆರ್.ನರಸಿಂಹ ಅವರ ಮನೆಗೆ. ನಡುರಾತ್ರಿಯ ಸಮಯ. ನರಸಿಂಹ ಅವರ ಮನೆ ಕಲಾಸಿಪಾಳ್ಯದ ಜರ್ನಲಿಸ್ಟ್ ಕಾಲೊನಿಯಲ್ಲಿತ್ತು. ಆ ಹೊತ್ತಿನಲ್ಲಿ ನಮ್ಮನ್ನು ಕಂಡು ಗಾಬರಿಬಿದ್ದರು ನರಸಿಂಹ. ನಾವು ನಡೆದದ್ದನ್ನೆಲ್ಲಾ ಚಾಚೂ ತಪ್ಪದೇ ವಿವರಿಸಿ ಹೇಳಿದೆವು. ಎಲ್ಲವನ್ನೂ ಕೇಳಿಸಿಕೊಂಡ ನರಸಿಂಹ ಹೇಳಿದ್ದು ಒಂದೇ ಮಾತು : 'ನೀವು ಈಗ ನನ್ನ ಬಳಿ ಏನೇನೆಲ್ಲವನ್ನು ಹೇಳಿದ್ದೀರೋ ಅವೆಲ್ಲವನ್ನೂ ಚಾಚೂ ತಪ್ಪದೇ ಬರೆದು ಕೊಡಿ. ಗಾಬರಿ ಬೀಳುವ ಆವಶ್ಯಕತೆಯಿಲ್ಲ. ನಾನಿದ್ದೇನೆ. ಹೆದರಬೇಡಿ. ಅದೇನು ಮಾಡ್ತಾರೋ ನಾನು ನೋಡ್ಕೋತೀನಿ. ಈಗ ಮನೆಗೆ ಹೋಗಿ ನೆಮ್ಮದಿಯಾಗಿ ನಿದ್ದೆ ಮಾಡಿ...'
ನಾವು ಹಾಗೆಯೇ ಮಾಡಿದೆವು. ಮಾರನೇ ಬೆಳಿಗ್ಗೆ ಹಿಂದಿನ ರಾತ್ರಿ ನಡೆದ ಘಟನೆಯ ವರದಿ ಬರೆದು ಕೊಟ್ಟೆವು. ಮುಂದಿನ 'ಚಿತ್ರದೀಪ' ಪತ್ರಿಕೆಯಲ್ಲಿ ಅದನ್ನು ಹಾಗೆಯೇ ಪ್ರಕಟಿಸಿದರು ಸಂಪಾದಕರಾದ ನರಸಿಂಹ. ಸಂಚಿಕೆ ಮಾರುಕಟ್ಟೆಗೆ ಹೋಗುತ್ತಿರುವಂತೆಯೇ ನಿರ್ದೇಶಕ ರವೀ ಮತ್ತೊಮ್ಮೆ ಅಬ್ಬರಿಸಿದ ಸುದ್ದಿ ಬಂತು. ಅಷ್ಟರಲ್ಲೇ ಸದಾಶಿವನಗರದ ಕಡೆಯಿಂದ ಆವಾಜ್ ಹಾಕಿದ್ದರಿಂದ ರವೀ ಸ್ವಲ್ಪ ಮೆತ್ತಗಾದರು. ಆದರೆ ವಿವಾದ ಕಾವೇರತೊಡಗಿತು. ರವೀಯವರ ದಾಷ್ಟ್ಯದ ಮಾತುಗಳಿಂದ ಕೆರಳಿ ಕೆಂಡವಾದ ಸಮಾನಮನಸ್ಕ ಸಿನಿಮಾ ಪತ್ರಕರ್ತರು ಇದನ್ನೊಂದು ದೊಡ್ಡ ಇಶ್ಯೂ ಮಾಡಿಬಿಟ್ಟರು. ರವೀಯವರನ್ನು ಬ್ಯಾನ್ ಮಾಡುವಂತೆ ತೀರ್ಮಾನ ತೆಗೆದುಕೊಳ್ಳಲಾಯಿತು.
ಈ ಹಂತದಲ್ಲಿ ರವೀಯವರ ಆವೇಶ ಜರ್ರನೇ ಇಳಿದು ಹೋಯಿತು. ಬೇರೆ ದಾರಿ ಕಾಣದೇ ಆಗಿನ 'ಚಲನಚಿತ್ರ ಪತ್ರಕರ್ತರ ಪರಿಷತ್'ನ ಅಧ್ಯಕ್ಷರಾಗಿದ್ದ 'ಕನ್ನಡಪ್ರಭ'ದ ಕೆ.ಎಸ್.ನಾರಾಯಣ ಸ್ವಾಮಿಯವರ ಮೊರೆ ಹೋದರು ರವೀ. ಜತೆಗೆ ಹಿರಿಯ ಪತ್ರಕರ್ತರಾದ ರಾಮಕೃಷ್ಣಯ್ಯ ಎದ್ದು ನಿಂತರು. ಸಂಧಾನದ ಮಾತುಕತೆಯಾಯಿತು. ನನ್ನ ನೆನಪು ಸರಿಯಾಗಿದ್ದರೆ ಈ ಮಾತುಕತೆ ನಡೆದದ್ದು ಅದೇ ಆನಂದರಾವ್ ಸರ್ಕಲ್ ಬಳಿಯಿರುವ 'ಸಂಗೀತಾ' ಹೋಟೆಲಿನ ರೂಮೊಂದರಲ್ಲಿ.
ನಾವು ಪಟ್ಟು ಬಿಡಲಿಲ್ಲ : 'ಸಂಧಾನಕ್ಕೆ ಸೈ, ಆದ್ರೆ ರವೀ ಕ್ಷಮೆ ಕೇಳಬೇಕು'. ಹುಸಿ ಸ್ವಾಭಿಮಾನಿ ರವೀ ಸುತರಾಂ ಒಪ್ಪಲಿಲ್ಲ. ನಾವು ಹೊರಟೆವು. ಕೊನೆಗೆ ಗತ್ಯಂತರವಿಲ್ಲದೇ ರವೀ ಕ್ಷಮೆ ಕೇಳಿದರು. ಮುಂದೆ ಇಂಥಾ ಘಟನೆ ಮರುಕಳಿಸದಂತೆ ಜಾಗ್ರತೆವಹಿಸುವುದಾಗಿ ಪ್ರಾಮಿಸ್ ಮಾಡಿದರು.
- ಅಲ್ಲಿಗೆ 'ಜಿಮ್ಮಿಗಲ್ಲು' ವಿವಾದ ಪ್ರಕರಣ ಕೊನೆಗೊಂಡಿತು. ಈಗ ಹಲವು ದಶಕಗಳ ನಂತರ ಈ ಘಟನೆ ನೆನಪಾಗಿ ತುಟಿಯಲ್ಲಿ ನಗು ಅರಳುತ್ತಿದೆ! ಆದರೆ ನೀವು ಏನೇ ಹೇಳಿ ಆರ್.ನರಸಿಂಹ ಎಂಬ ಸಮರ್ಥ ಸಂಪಾದಕರೊಬ್ಬರಿದ್ದರೆ ಮಾತ್ರ ಇಂಥಾದ್ದೆಲ್ಲಾ ನಡೆಯಲು ಸಾಧ್ಯ. ಅವರು ಗುರಾಣಿಯ ಹಾಗೆ ನಿಂತು ನಮ್ಮನ್ನು ರಕ್ಷಿಸದಿದ್ದರೆ ರವೀಯವರು ಹೇಳಿದಂತೆಯೇ ನಾವು ಬೀದಿ ಪಾಲಾಗಿರಬೇಕಾಗಿತ್ತು!
ಈಗ 'ಜಿಮ್ಮಿಗಲ್ಲು' ಚಿತ್ರದ ನಾಯಕನಟರಾಗಿ ನಟಿಸಿದ ವಿಷ್ಣುವರ್ಧನ್ ಇಲ್ಲ. ಆ ಚಿತ್ರದ ನಿರ್ಮಾಪಕರಾಗಿದ್ದ ಆರ್.ಲಕ್ಷ್ಮಣ್ ಅವರೂ ಇಲ್ಲ. ಕಥೆ ಬರೆದ ವೇಣುಗೋಪಾಲ ಕಾಸರಗೋಡು ಅವರೂ ಇಲ್ಲ. ಇಡಿಯ ಪ್ರಕರಣಕ್ಕೆ ಕಾರಣೀಭೂತರಾದ ರವೀಯವರೂ ಬದುಕಿ ಉಳಿದಿಲ್ಲ. ಆಗ ಕಿರಿಯ ಪತ್ರಕರ್ತರಾಗಿದ್ದ ನಾವು ಮಾತ್ರ ಈಗ ಹಿರಿಯ ಪತ್ರಕರ್ತರಾಗಿದ್ದೇವೆ!
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು





Social Plugin