● ಮನೆ ಮನೆ ಕಥೆ : 10 ●
ಬಂಟ್ವಾಳದ ವರದರಾಜ ಪೈ ಎಂಬ ಹೆಸರಿನ ಉದ್ಯಮಿಯೊಬ್ಬರು ಬೆಳ್ತಂಗಡಿಯ ಹತ್ತಿರದ ಮಾವಿನಕಟ್ಟೆಯಲ್ಲಿ ಪುಟ್ಟದೊಂದು ಉಪ್ಪಿನಕಾಯಿ ಫ್ಯಾಕ್ಟರಿಯನ್ನಾರಂಭಿಸಿ ತಮ್ಮ ಪ್ರಾಡಕ್ಟ್'ಗೆ 'ನಂ1' ಎಂಬ ಹೆಸರನ್ನಿಟ್ಟರು. ವ್ಯಾಪಾರ ಕುದುರಲಿಲ್ಲ. ನಂತರ ವಿಷ್ಣುವರ್ಧನ್ ಅಭಿನಯದ 'ಯಜಮಾನ' ಚಿತ್ರದ ಸ್ಫೂರ್ತಿಯಿಂದ ತಮ್ಮ ಅದೇ ಪ್ರಾಡಕ್ಟ್'ಗೆ 'ಯಜಮಾನ ಉಪ್ಪಿನಕಾಯಿ' ಎಂಬ ಹೆಸರನ್ನಿಟ್ಟುಕೊಂಡರು. ಅಂದಿನಿಂದ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು! 'ಹೆಸರಲ್ಲೇನಿದೆ ಬದನೆಕಾಯಿ?' ಎಂದು ಹೀಯಾಳಿಸುವವರಿಗೆ ವರದರಾಜ ಪೈ ಉತ್ತರಿಸುವುದಿಲ್ಲ, ಬದಲಿಗೆ 'ಯಜಮಾನ ಉಪ್ಪಿನಕಾಯಿ' ಕಳಿಸಿ ಕೊಡುತ್ತಾರೆ!
ಚಿತ್ರನಟರೊಬ್ಬರ ಅಪ್ಪಟ ಅಭಿಮಾನಿ ಮನಸ್ಸು ಮಾಡಿದರೆ ಎಷ್ಟು ಎತ್ತರಕ್ಕೆ ಬೆಳೆಯಬಹುದು ಎನ್ನುವುದಕ್ಕೆ ಜೀವಂತ ಸಾಕ್ಷಿಯಾಗಿ ನಮ್ಮ ಮುಂದಿದ್ದಾರೆ ವರದರಾಜ ಪೈ. ಶ್ರಮ, ಶ್ರದ್ಧೆ, ಮತ್ತು ಕಠಿಣ ದುಡಿಮೆಯಿಂದ ಈ ಬದುಕನ್ನು ನಮಗೆ ಬೇಕಾದಂತೆ ರೂಪಿಸಬಹುದು ಎನ್ನುವುದಕ್ಕೆ ಈ ವಿಷ್ಣು ಅಭಿಮಾನಿಯೇ ಪ್ರತ್ಯಕ್ಷ ಸಾಕ್ಷಿ. ಇಲ್ಲಿ ನಾನು ನಿರೂಪಕ ಅಷ್ಟೇ. ತಮ್ಮ ಬದುಕಿನ ವರ್ಣರಂಜಿತ ವಿವರಗಳನ್ನು ಒಂದು ಅದ್ಭುತ ಸಿನಿಮಾದ ರೀತಿಯಲ್ಲಿ ನಮ್ಮ ಕಣ್ಮುಂದೆ ತಂದು ನಿಲ್ಲಿಸುವವರು ಸಾಕ್ಷಾತ್ ವರದರಾಜ ಪೈಗಳೇ :
'ನಾನು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ವಿಷ್ಣು ಸಾರ್ ಅವರ ಯಾವುದೇ ಫಿಲಂ ಬೆಳ್ತಂಗಡಿಯಲ್ಲಿ ರಿಲೀಸ್ ಆದರೂ ಸಾಕು, ಮೊದಲ ದಿನ, ಮೊದಲ ಶೋ ನೋಡಿ ಬಿಡುತ್ತಿದ್ದೆ. ನನ್ನ ಮನೆಯ ಗೋಡೆ ತುಂಬಾ ವಿಷ್ಣು ಸಾರ್ ಫೋಟೋಗಳೇ. ಒಂದು ರೀತಿಯಲ್ಲಿ ನಾನು ಅವರ 'ಹುಚ್ಚು' ಅಭಿಮಾನಿಯಾಗಿದ್ದೆ. ಆದರೆ ಈ ಅಭಿಮಾನ ಅನ್ನೋದು ಹೊಟ್ಟೆ ತುಂಬಿಸುವುದಿಲ್ಲವಲ್ಲಾ? ಹೀಗಾಗಿ ಪಿತ್ರಾರ್ಜಿತವಾಗಿ ಬಂದ ಉಪ್ಪಿನಕಾಯಿ ವ್ಯಾಪಾರವನ್ನು ಕೈಗೆತ್ತಿಕೊಂಡೆ. ಈ ಉಪ್ಪಿನಕಾಯಿಗೆ ಮೊದಲು 'ನಂ1' ಎಂಬ ಹೆಸರಿಟ್ಟೆ. ಬರ್ಖತ್ತಾಗಲಿಲ್ಲ! ಏನು ಮಾಡುವುದೆಂದು ಗೊತ್ತಾಗದೇ ತಲೆ ಮೇಲೆ ಕೈಹೊತ್ತು ಕೂತಿದ್ದಾಗ ಒಂದು ಪವಾಡವೇ ನಡೆದು ಹೋಯಿತು. ಅದು ವಿಷ್ಣು ಸಾರ್ ಅವರ 'ಯಜಮಾನ' ಚಿತ್ರದ ಮೂಲಕ!
'ಅದು ನಡೆದದ್ದು ಹೀಗೆ : 'ಯಜಮಾನ' ಸಿನಿಮಾ ತೆರೆ ಕಂಡ ದಿನವೇ ಬೆಳ್ತಂಗಡಿಗೆ ಹೋಗಿ ನೋಡಿದೆ. ತುಂಬಾ ಹಿಡಿಸಿತು. ಮತ್ತೆ ಮತ್ತೆ ನೋಡಿದೆ. ಸಿನಿಮಾ ಮತ್ತೆ ಮತ್ತೆ ನೋಡುತ್ತಿರುವಂತೆಯೇ ನನ್ನ ಬದುಕಿನ ದಾರಿ ಸ್ಪಷ್ಟವಾಗಿ ಗೋಚರವಾಯಿತು. ಹಿಂದೆ ಗುರು, ಮುಂದೆ ಗುರಿ : ಸಂಭ್ರಮದಿಂದ ಕುಣಿದಾಡಿ ಬಿಟ್ಟೆ! ನಡೆದ್ದದ್ದು ಏನಪ್ಪಾ ಅಂದ್ರೆ...'ಯಜಮಾನ' ಚಿತ್ರದಲ್ಲಿ ವಿಷ್ಣು ಸಾರ್ ಉಪ್ಪಿನಕಾಯಿ ವ್ಯಾಪಾರ ಮಾಡುತ್ತಾ ಬದುಕನ್ನು ಕಟ್ಟಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ನಾನು ಕೂಡಾ ಅವರ ರೀತಿಯಲ್ಲೇ ಬೆಳೆಯ ಬೇಕೆಂದುಕೊಂಡೆ. ನಮ್ಮ ಬ್ರಾಂಡ್'ನ ಉಪ್ಪಿನಕಾಯಿಗೆ 'ಯಜಮಾನ' ಎಂಬ ಹೆಸರನ್ನಿಟ್ಟರೆ ಹೇಗೆ ಎಂಬ ಯೋಚನೆ ಬಂದದ್ದೇ ತಡ, ಬೆಂಗಳೂರಿನ ಬಸ್ ಹತ್ತಿ ಜಯನಗರದ ವಿಷ್ಣು ಸಾರ್ ಮನೆಗೆ ಹೋದೆ. ನಾನು ಬಂದ ಉದ್ದೇಶವನ್ನು ತಿಳಿಸಿ 'ಯಜಮಾನ' ಟೈಟಲನ್ನು ಉಪಯೋಗಿಸಲು ಅನುಮತಿ ನೀಡಬೇಕೆಂದು ವಿನಂತಿಸಿಕೊಂಡೆ. ಜತೆಗೆ ಉಪ್ಪಿನಕಾಯಿ ಬಾಟಲಿ ಮೇಲೆ ವಿಷ್ಣು ಸಾರ್ ಫೋಟೋ ಪ್ರಕಟಿಸಲೂ ಅನುಮತಿ ಬೇಡಿದೆ. ದೊಡ್ಡ ಮನುಷ್ಯ 'ಬೇಡ' ಅನ್ನಲಿಲ್ಲ...
'ನಾನು ಸಂತೃಪ್ತನಾಗಿ ಬಂಟ್ವಾಳಕ್ಕೆ ಹಿಂದಿರುಗಿ ಹೊಸದಾಗಿ ವ್ಯಾಪಾರವನ್ನು ಶುರು ಮಾಡಿದೆ ನೋಡಿ, ನನ್ನ ನೀರಿಕ್ಷೆಗೂ ಮೀರಿ ಬ್ಯುಸಿನೆಸ್ ಸಕ್ಸಸ್ ಆಯಿತು. ಜತೆಗೆ ಗೇರುಬೀಜ ಸಂಸ್ಕರಣ ಘಟಕವನ್ನೂ ಆರಂಭಿಸಿದೆ. ವ್ಯಾಪಾರ ವೃದ್ಧಿಸುತ್ತಾ ಹೋಯಿತು. ಬೇಡಿಕೆ ಹೆಚ್ಚಿದಂತೆಲ್ಲಾ ಜಾಗದ ಕೊರತೆ ಕಾಡಿತು. ಖಾಲಿಯಿದ್ದ ಜಮೀನನ್ನು ಕೊಂಡುಕೊಂಡೆ. ಅಲ್ಲಿ ದೊಡ್ಡ ಮಟ್ಟದ ಫ್ಯಾಕ್ಟರಿ ಕಟ್ಟಿಕೊಂಡೆ. ನೂರಾರು ಆಳುಕಾಳುಗಳನ್ನು ನೇಮಿಸಿಕೊಂಡೆ. ಹೊಸ ಹೊಸ ಮೆಷಿನರಿಗಳನ್ನು ತರಿಸಿಕೊಂಡೆ. ಎಲ್ಲವೂ ಒಂದು ಹಂತಕ್ಕೆ ಬಂದಾಗ ವಿಷ್ಣುಸಾರ್ ಅವರನ್ನು ಕರೆಸಿ ಅಧಿಕೃತವಾಗಿ 'ಶ್ರೀ ಲಕ್ಷ್ಮೀ ವೆಂಕಟರಮಣ ಯಜಮಾನ ಇಂಡಸ್ಟ್ರಿ'ಯನ್ನು ಉದ್ಘಾಟಿಸಿದೆ!
'ಮುಂದಿನ ನನ್ನ ಬದುಕು ಹೂವಿನ ಹಾಸಿಗೆಯಾಯಿತು. ಇವೆಲ್ಲಾ ವಿಷ್ಣುಸಾರ್ ಆಶೀರ್ವಾದದ ಫಲ. ಅವರು ನನ್ನ ಪಾಲಿಗೆ ದೇವರಿದ್ದಂತೆ. ಹೀಗಾಗಿಯೇ ಅವರು ಬದುಕಿರುವಾಗಲೇ ಅವರ ಫೋಟೋವನ್ನು ದೇವರಕೋಣೆಯಲ್ಲಿಟ್ಟು ಪೂಜಿಸಲು ಹೊರಟೆ! ಬದುಕು ಕೊಟ್ಟ ದೇವರು ಅವರು. ಅಂಥಾ ದೇವರು ಇನ್ನಿಲ್ಲ ಅಂದಾಗ ಈ ಬದುಕೇ ಬೇಡವೆಂದೆನಿಸಿತ್ತು...'
- ಎಂದು ಹೇಳುತ್ತಾ ಹೇಳುತ್ತಾ ವರದರಾಜ ಪೈಯವರು ಭಾವಪರವಶರಾದರು.
ಈಗಲೂ ನೀವು ಬಂಟ್ವಾಳ ಹತ್ತಿರದ ವರದರಾಜ ಪೈಗಳ ಉಪ್ಪಿನಕಾಯಿ ಮತ್ತು ಗೇರುಬೀಜ ಫ್ಯಾಕ್ಟ್ರಿಗೆ ಹೋದರೆ ಎಂಟ್ರಾನ್ಸ್'ನಲ್ಲೇ ಆಳೆತ್ತರದ ಬೃಹತ್ ವಿಷ್ಣುವರ್ಧನ್ ಫೋಟೋವನ್ನು ಕಾಣಬಹುದು. ದೈನಂದಿನ ಕೆಲಸವನ್ನು ಆರಂಭಿಸುವ ಮೊದಲು ತಮ್ಮ ಆರಾಧ್ಯ ದೈವಕ್ಕೆ ಪೂಜೆ ಸಲ್ಲಿಸಿಯೇ ಮುಂದುವರಿಯುವುದು ರೂಢಿಯಾಗಿ ಬಿಟ್ಟಿದೆ ವರದರಾಜ ಪೈಯವರಿಗೆ...!
◆ ಹಾಂ, ಅಂದಹಾಗೆ 'ಯಜಮಾನ' ಚಿತ್ರದ ವಿಷ್ಣುವರ್ಧನ್ ಅವರ ಮನೆಯಂಥಾ ಬಂಗಲೆಯನ್ನು ಫ್ಯಾಕ್ಟರಿ ಮುಂಭಾಗದಲ್ಲೇ ಕಟ್ಟಿಸಿಕೊಂಡಿದ್ದಾರೆ ವರದರಾಜ ಪೈ. ಫಕ್ಕನೆ ಸಿನಿಮಾ ಚಿತ್ರೀಕರಣಕ್ಕಾಗಿ ಕಟ್ಟಿಸಿದ ಸೆಟ್'ನಂತೆ ಭಾಸವಾಗುವ ಈ ಮನೆ ಪೈಗಳ ಕನಸಿನರಮನೆ. ಮನೆಗೆ 'ಯಜಮಾನ' ಎಂಬ ಹೆಸರಿಡದಿದ್ದರೇನಂತೆ ತಮ್ಮದೇ ಆದ ಉಪ್ಪಿನಕಾಯಿ ಮತ್ತು ಗೇರುಬೀಜ ಫ್ಯಾಕ್ಟರಿಗೆ 'ಯಜಮಾನ ಇಂಡಸ್ಟ್ರೀಸ್' ಎಂಬ ಹೆಸರಿಟ್ಟು ಕೃತಾರ್ಥರಾಗಿದ್ದಾರೆ ಈ ವಿಷ್ಣು ಅಭಿಮಾನಿ...

Social Plugin