ಕೋವಿಡ್ ಕಲಿಸಿದ ಪಾಠ.....
ಹೆದರಿಕೆಯಾದಾಗ ತುಂಬಾ ಹೆದರುವ ಅವಶ್ಯಕತೆ ಇಲ್ಲ. ಸ್ವಲ್ಪ ಎಚ್ಚರಿಕೆಯಿಂದ ದಿನಗಳು ಅಥವಾ ಸಮಯವನ್ನು ಕೊಲ್ಲಬೇಕು. ಸಮಯ ಸರಿದಂತೆ ಪರಿಸ್ಥಿತಿಯ ಅರಿವಾಗತೊಡಗುತ್ತದೆ. ಮೊದಲು ಆತುರದಲ್ಲಿ ನಾವು ಕೈಗೊಂಡ ನಿರ್ಧಾರಗಳನ್ನು ಮರುಪರಿಶೀಲಿಸಿ ಕಾರ್ಯೋನ್ಮುಖರಾಗಲು ಅವಕಾಶ ಸಿಗುತ್ತದೆ. 
ಎಂತಹ ಪಂಡಿತ ಪಾಮರರು, ವೈದ್ಯರು ಕೂಡ ಬೃಹತ್ ಸಮಸ್ಯೆ ಎದುರಾದಾಗ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದಾಗ ಅವರ ನಿರ್ಧಾರಗಳು ಸಹ ತಪ್ಪು ಆಗಬಹುದು. ಹಾಗೆಂದು ಅವರ ಮಾತು ನಿರ್ಲಕ್ಷಿಸಬಾರದು. ಅದರ ಜೊತೆಗೆ ನಮ್ಮ ವಿವೇಚನೆಯನ್ನು ಬಳಸಬೇಕು.
ಯಾವುದೇ ಸಮಸ್ಯೆಗಳು ಒಂದೇ ರೀತಿಯಲ್ಲಿ ನಮ್ಮನ್ನು ನಿರಂತರವಾಗಿ ಕಾಡಲು ಸಾಧ್ಯವಿಲ್ಲ. ಸಮಯ ಸರಿದಂತೆ ಅದನ್ನು ನಮ್ಮ ಮನಸ್ಸು ಸ್ವೀಕರಿಸ ತೊಡಗುತ್ತದೆ. ಆದರೆ ಅದೇ ಸಮಸ್ಯೆ ಬೇರೆ ರೂಪವೂ ಪಡೆಯಬಹುದು.
ದುರ್ಬಲ ದೇಹದ ಮೇಲೆ ರೋಗಗಳು ಬೇಗ ದಾಳಿ ಮಾಡಿ ಹೆಚ್ಚು ಹಾನಿ ಮಾಡುತ್ತವೆ. ಆದ್ದರಿಂದ ದೇಹ ಮತ್ತು ಮನಸ್ಸುಗಳನ್ನು ಆದಷ್ಟು ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳಬೇಕು.
ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಯೋಚಿಸಿದರೆ ಅದರ ನಿವಾರಣೆಗೆ ಪರ್ಯಾಯ ಮಾರ್ಗಗಳು ಸಹ ಸೃಷ್ಟಿಯಾಗುತ್ತದೆ. ಕನಿಷ್ಠ ನಮ್ಮ ಮುಂದೆ ಕೆಲವು ಆಯ್ಕೆಗಳಾದರು ತೆಗೆದುಕೊಳ್ಳುತ್ತದೆ.
ಕೆಲವು ದೂರದೃಷ್ಟಿಯ ಬುದ್ದಿವಂತರು ಈ ಸಮಸ್ಯೆಗಳನ್ನೇ ನ್ಯಾಯವಾದ ರೀತಿಯಲ್ಲಿ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಅವಕಾಶವನ್ನು ನಿರ್ಮಿಸಿ ಕೊಳ್ಳುತ್ತಾರೆ.
ವೈದ್ಯಕೀಯ ಲೋಕ ಎಷ್ಟೇ ಮುಂದುವರಿದಿದ್ದರೂ ಅದಕ್ಕೂ ಪ್ರಕೃತಿಯ ಮುಂದೆ ಸಾಕಷ್ಟು ಮಿತಿಗಳಿವೆ. ವೈದ್ಯರ ತ್ಯಾಗದ ಜೊತೆಗೆ ಅವರ ವಿಕ್ ನೆಸ್ ಮತ್ತು  ದುರಾಸೆಗಳನ್ನು ಸಹ ಬಯಲು ಮಾಡಿದ ಕೊರೋನಾ ವೈರಸ್.
ವಿಶ್ವ ಆರೋಗ್ಯ ಸಂಸ್ಥೆ ಎಂಬ ಅತ್ಯಾಧುನಿಕ ಮತ್ತು ಅತ್ಯಂತ ಜವಾಬ್ದಾರಿ ಕಚೇರಿ ಕೂಡ ಗೊಂದಲಕ್ಕೆ ಒಳಗಾಗಿ ಸಾಮಾನ್ಯ ಜನರಂತೆ ಪರಿಸ್ಥಿತಿ ನೋಡಿಕೊಂಡು ತನ್ನ ಹೇಳಿಕೆಗಳನ್ನು ಬಿಡುಗಡೆ ಮಾಡುವ ಅಸಹಾಯಕ ಪರಿಸ್ಥಿತಿ ತಲುಪಿತು.
ವೈರಸ್ ವಿರುದ್ಧದ ಲಸಿಕೆಯ ಬಗ್ಗೆ ಬಹುತೇಕ ಎಲ್ಲಾ ದೇಶಗಳು ಸಹ ಇಲ್ಲಿಯವರೆಗೆ ಖಚಿತ ಸಂಶೋಧನೆ ಫಲ ಸಿಗದಿದ್ದರೂ ನಾವೇ ಮೊದಲು ಎಂಬ ಮಕ್ಕಳ ರೀತಿಯ ಬಾಲಿಶ ವರ್ತನೆ ತೋರಿಸುತ್ತಿರುವುದು ಸಹ ಕೊರೋನಾ ಸಮಯ ಬಯಲು ಮಾಡಿದೆ.
ಸೋಂಕಿತರ ಸಂಖ್ಯೆ ಕೇವಲ ನೂರರ ಆಸುಪಾಸಿನಲ್ಲಿ ಇರುವಾಗ ಇತರ ದೇಶಗಳ ಭಯಂಕರ ಪರಿಸ್ಥಿತಿ ನೋಡಿ ಲಾಕ್ ಡೌನ್ ಆದ ನಾವುಗಳು, 33.4 ಲಕ್ಷ ಸೋಂಕಿತರು, 63.5 ಸಾವಿರ ಸಾವುಗಳು, ದಿನಕ್ಕೆ 70 ಸಾವಿರ ಹೊಸ ಪ್ರಕರಣಗಳು, ಸಾವಿರ ಸಾವುಗಳು ನಮ್ಮಲ್ಲೇ ಆಗುತ್ತಿರುವಾಗ, ಇನ್ನೂ ಯಾವುದೇ ಲಸಿಕೆ ಸಿದ್ದವಾಗದೆ ಇರುವಾಗ ಹೊರಗೆ ಬಂದು ಸಹಜ ಜೀವನ ಶೈಲಿಗೆ ಮರಳುತ್ತಿರುವ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿರುವುದು ಒಂದು ಅಧ್ಯಯನ ಯೋಗ್ಯ ವಿಷಯವಾಗಿದೆ.
ನಮ್ಮೊಳಗಿನ ಮತ್ತು ಸಮಾಜದ, ಮಾನವೀಯ ಮತ್ತು ಕರಾಳ ಮುಖಗಳ ಪರಿಚಯ ಮಾಡಿಕೊಟ್ಟ ಕೊರೋನಾ ವೈರಸ್. ಸಾವಿನ ಭಯದಿಂದ ರಕ್ತ ಸಂಬಂಧಿಗಳ ಶವ ಸಂಸ್ಕಾರಕ್ಕೇ ಹೆದರಿದ ನಾಗರಿಕ ಸಮಾಜ.
ಸಮೂಹ ಸಂವಹನ ತಂತ್ರಜ್ಞಾನವನ್ನು ವೇಗವಾಗಿ ಮತ್ತು ವ್ಯಾಪಕವಾಗಿ ಅನೇಕ ಕ್ಷೇತ್ರಗಳಲ್ಲಿ ಬಳಸಲು ಅನಿವಾರ್ಯತೆ ಸೃಷ್ಟಿಸಿದ ಕೋವಿಡ್ 19 ವೈರಸ್. ಅದರ ಲಾಭ ನಷ್ಟಗಳ ಪರಿಣಾಮ ಮುಂದೆ ತಿಳಿಯುತ್ತದೆ.
ವೈಯಕ್ತಿಕ ಬದುಕಿನ ಪಾಠಗಳನ್ನು ಮತ್ತು ಬದಲಾವಣೆಗಳನ್ನು ಅವರವರೇ ಗುರುತಿಸಿ ಅಳವಡಿಸಿಕೊಳ್ಳುವುದು ಇದ್ದೇ ಇರುತ್ತದೆ.
ಇದನ್ನು ಹೊರತುಪಡಿಸಿಯು ಕಣ್ಣಿಗೆ ಕಾಣದ ಒಂದು ವೈರಸ್ ಇಡೀ ವಿಶ್ವದ ಒಟ್ಟು ವ್ಯವಸ್ಥೆಯ ಮೇಲೆಯೇ ಬೀರಿದ ಪ್ರಭಾವ ಊಹೆಗೆ ನಿಲುಕದ್ದು. ಅದು ಇನ್ನೂ ಮುಗಿದ ಅಧ್ಯಾಯವಲ್ಲ. ಯುದ್ಧ ಭೂಮಿಯ ಮಧ್ಯೆ ನಾವು ಈಗಲೂ ಸಿಲುಕಿದ್ದೇವೆ. ಯಾವುದೇ ಬೇಜವಾಬ್ದಾರಿ ನಡೆಗಳು ನಮ್ಮನ್ನು ಮತ್ತಷ್ಟು ಅಪಾಯಕ್ಕೆ ತಳ್ಳಬಹುದು.
ಎಲ್ಲಾ ರೀತಿಯ ಎಚ್ಚರಿಕೆಯೊಂದಿಗೆ, ಹೊಸ ಉತ್ಸಾಹ, ಹೊಸ ಆಶಾ ಭಾವನೆಯೊಂದಿಗೆ, ಕಲಿತ ಪಾಠಗಳ ಅನುಭವದೊಂದಿಗೆ ಮುನ್ನಡೆಯೋಣ......
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ - ವಿವೇಕಾನಂದ. ಹೆಚ್.ಕೆ.