ಉದ್ಯೋಗ ಭದ್ರತೆ, ಪ್ರೋತ್ಸಾಹ ಹಾಗು ವೇತನ ಹೆಚ್ಚಳ ಮೊದಲ ಗುರಿ-ಸವದಿ
ರಬಕವಿ-ಬನಹಟ್ಟಿ,30: ರಾಜ್ಯದಲ್ಲಿ ನೇಕಾರರ ಹಿತ ಕಾಪಾಡುವಲ್ಲಿ ಮೂರ್ನಾಲ್ಕು ದಶಕಗಳ ಹಿಂದೆ ದಿ. ಪಿ.ಎಂ. ಬಾಂಗಿಯವರೊಂದಿಗೆ ಹಲವಾರು ಶ್ರಮಿಕ ನೇಕಾರರೊಂದಿಗೆ ಕೆಎಚ್‍ಡಿಸಿ ನಿಗಮವನ್ನು ಹುಟ್ಟು ಹಾಕುವ ಮೂಲಕ ನೇಕಾರರ ಸ್ಥಿತಿ-ಗತಿಯನ್ನು ಮೇಲ್ದರ್ಜೆಗೇರಿಸಬೇಕೆಂಬ ಹೆಬ್ಬಯಕೆಯಾಗಿತ್ತು. ಇದೀಗ ತೀವ್ರ ಸಂಕಷ್ಟದಲ್ಲಿರುವದನ್ನು ಕಂಡರೆ ಬೇಸರವೆನಿಸುತ್ತಿದೆ. ಮೊದಲಿಗೆ ನೇಕಾರರಿಗೆ ಉದ್ಯೋಗ ಭದ್ರತೆ, ಪ್ರೋತ್ಸಾಹ ಹಾಗು ವೇತನ ಹೆಚ್ಚಳ ನೀಡುವ ಮೂಲಕ ಒಂದು ವರ್ಷದೊಳಗಾಗಿ ನಿಗಮವನ್ನು ಸರಿದಾರಿಗೆ ತರುವ ವ್ಯವಸ್ಥೆ ಮಾಡುವೆ ಇದಕ್ಕೆ ಸರ್ಕಾರವೂ ಪೂರಕವಾಗಿ ಸ್ಪಂದಿಸಲಿದೆ. ಒಂದು ವೇಳೆ ಸ್ಪಂದಿಸದಿದ್ದಲ್ಲಿ ನಿಗಮದಿಂದ ಹೊರಬರುತ್ತೇನೆಂದು ಶಾಸಕ, ನಿಗಮದ ಅಧ್ಯಕ್ಷ ಸಿದ್ದು ಸವದಿ ಖಡಕ್ ಸಂದೇಶ ರವಾನಿಸಿದರು.
ರವಿವಾರ ಸಂಜೆ ನಗರದ ಕೆಎಚ್‍ಡಿಸಿ ಪ್ರಧಾನ ಕಚೇರಿಯಲ್ಲಿ ಕೈಮಗ್ಗ ನೇಕಾರರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಾಭವಿರುವ ನಿಗಮಗಳನ್ನು ಲಾಭದಲ್ಲಿ ಮುಂದುವರೆಸುವದು ದೊಡ್ಡದಲ್ಲ. ಇಂತಹ ನಿಗಮಗಳು ಸಂಪೂರ್ಣ ನೆಲಕಚ್ಚಿವೆ. ಇವುಗಳ ಹಾನಿ ತುಂಬುವ ಮೂಲಕ ಲಾಭದಾಯಕ ಮಾಡುವದು ಸವಾಲಾಗಿದೆ. ಒಂದು ವರ್ಷದೊಳಗಾಗಿ ಎಲ್ಲವನ್ನೂ ಸರಿಪಡಿಸುತ್ತೇನೆಂದು ಸವದಿ ನೇಕಾರರಿಗೆ ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರವು ಶಾಲಾ ಮಕ್ಕಳಿಗೆ ಒದಗಿಸುವ ಬಟ್ಟೆಯನ್ನು ಕಾರ್ಖಾನೆಗಳ ಮೂಲಕ ಖರೀದಿಸುತ್ತಿದೆ. ಎಲ್ಲ ಸರ್ಕಾರಿ ಇಲಾಖೆಗಳಲ್ಲಿಯೂ ನಿಗಮದಿಂದಲೇ ಬಟ್ಟೆ ಖರೀದಿಸುವ ವ್ಯವಸ್ಥೆ ಮಾಡಬೇಕಿದೆ. ನೇಕಾರರ ಡಚ್ ಮನೆಗಳಿಗೆ ಅತಿ ಶೀಘ್ರವೇ ಸಿಟಿಎಸ್ ಉತಾರೆಯನ್ನು ಸರ್ಕಾರದಿಂದ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಲ್ಲದೆ ನಿಗಮಕ್ಕೆ ಹಾನಿಯಾಗದೆ ಇದರ ಸಬಲೀಕರಣಕ್ಕೆ ಶ್ರಮಿಸುವದಾಗಿ ಸವದಿ ತಿಳಿಸಿದರು.
ಒಂದೇ ನಿಗಮವಾಗಲಿ: ರಾಜ್ಯದಲ್ಲಿ ಕಾವೇರಿ ಕೈಮಗ್ಗ ಅಭಿವೃದ್ಧಿ ನಿಗಮ, ಪಾವರ್‍ಲೂಮ್ ನಿಗಮ ಹಾಗು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹೀಗೆ ಹಲವಾರು ರೀತಿಯಲ್ಲಿ ಭಿನ್ನಗೊಂಡಿವೆ. ಇವೆಲ್ಲವನ್ನೂ ಒಂದೇ ಸೂರಿನಲ್ಲಿ ಬೃಹತ್ ನಿಗಮ ಸ್ಥಾಪಿಸುವ ಮೂಲಕ ಸರ್ಕಾರದ ಸಹಾಯ ಹಾಗು ನಿಗಮ ಅಭಿವೃದ್ಧಿ ಸಹಕಾರಿಯಾಗಲಿದೆ. ಮುಂಬರುವ ಅಧಿವೇಶನದಲ್ಲಿ ಧನಾತ್ಮಕ ಯೋಚನೆಗಳೊಂದಿಗೆ ಎಲ್ಲ ನಿಗಮ ಒಗ್ಗೂಡಿಸುವದಾಗಿ ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಯಾವ ಸಮುದಾಯವೂ ಇಷ್ಟೊಂದು ಅಗ್ಗದ ದರದಲ್ಲಿ ಕನಿಷ್ಠ ಕೂಲಿ ಮಾಡುತ್ತಿಲ್ಲ. ಆದರೂ ನೇಕಾರರು ಬದುಕು ನಿರ್ವಹಿಸುತ್ತಿದ್ದಾರೆ. ಸಂದಿಗ್ಧ ಪರಿಸ್ಥಿತಿಯನ್ನು ದೂರ ಮಾಡಲು ವೇತನ ಹೆಚ್ಚಳಗೊಳಿಸುವಂತೆ ಅಥವಾ ಕಾರ್ಮಿಕರೆಂದು ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವದಾಗಿ ಸವದಿ ತಿಳಿಸಿದರು.
ವೀರಭದ್ರ ಕುಂಚನೂರ, ಶಂಕರ ಕುರಂದವಾಡ, ನಾಗಯ್ಯ ಬಕ್ಕಯ್ಯಗೋಳ, ಸಿದ್ದಪ್ಪ ಗಂವಾರ, ಸುರೇಶ ಮಠದ, ಸಿದ್ದು ಕಡ್ಲಿಮಟ್ಟಿ, ದೇವೇಂದ್ರ ಶೀಲವಂತ, ಇಮಾಮಸಾಬ್ ಮುಲ್ಲಾ, ನಾಮದೇವ ಗೋಂದಕರ, ಕಾಡಪ್ಪ ಮಳಗಲಿ, ಬೀಳಗಿ, ಎಸ್.ಎ. ಗುಟ್ಲಿ, ರಾಜೇಂದ್ರ ಹಳ್ಯಾಳ ಸೇರಿದಂತೆ ನೂರಾರು ನೇಕಾರರು ಉಪಸ್ಥಿತರಿದ್ದರು.
`ಕೆಎಚ್‍ಡಿಸಿ ನಿಗಮದ ಅಧ್ಯಕ್ಷಕ್ಕೆ ನನ್ನ ಬದಲಿಗೆ ಬೇರೆಯವರಿಗೆ ಸ್ಥಾನ ನೀಡಿ ಎಂದಿರುವೆ, ನ್ಯಾಯ ನೀಡುವದಾದರೆ ನನ್ನನ್ನು ಮುಂದುವರೆಸಿ ಇಲ್ಲವಾದಲ್ಲಿ ರಾಜೀನಾಮೆ ಪಡೆಯಿರಿ ಎಂದು ಮುಖ್ಯಮಂತ್ರಿಗಳಿಗೆ ಕಡಾಖಂಡಿತವಾಗಿ ಹೇಳುವೆ.’----ಸಿದ್ದು ಸವದಿ, ಶಾಸಕರು.

Social Plugin