ಸೆ. 19 ರಂದು ಮೇಘಾ ಇ- ಬೃಹತ್ ಲೋಕ ಅದಾಲತ್ 

ರಬಕವಿ-ಬನಹಟ್ಟಿ,ಅ31: ಸೆ.19 ರಂದು ಬನಹಟ್ಟಿಯ ನ್ಯಾಯಾಲಯದಲ್ಲಿ ನ್ಯಾಯಾಲಯದ ವ್ಯಾಪ್ತಿಗೆ ಸಂಬಂಧಪಟ್ಟ ಪ್ರಕರಣಗಳ ಮೇಘಾ ಇ- ಲೋಕ ಅದಲಾತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಕ್ಷಿದಾರರು ಈ ಲೋಕ ಅದಾಲತ್ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ರೇಶ್ಮಾ ಗೋಣಿ ತಿಳಿಸಿದರು.

ಅವರು ಸೋಮವಾರ ಸ್ಥಳೀಯ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಪ್ರಕರಣಕ್ಕೆ ಸಂಬಂಧಪಟ್ಟ ಕಕ್ಷಿದಾರರು ಮನೆಯಲ್ಲಿ ಕುಳಿತುಕೊಂಡು ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಆಸ್ತಿ ಪರಭಾರೆ ದಾವೆಗಳು, ಹಣ ವಸೂಲಾತಿ, ನಿರ್ಧಿಷ್ಠ ಕರಾರುಗಳಿಗೆ ಸಂಬಂಧಪಟ್ಟ ದಾವೆಗಳು, ಚೆಕ್ ಬೌನ್ಸ್ ಪ್ರಕರಣಗಳು, ಕ್ರಿಮಿನಲ್ ಪ್ರಕರಣಗಳಲ್ಲಿ ರಾಜಿಯಾಗಬಲ್ಲ ಪ್ರಕರಣಗಳು, ಬ್ಯಾಂಕ್ಗಳ ಹಣ ವಸೂಲಾತಿ ಪ್ರಕರಣಗಳು, ಜೀವನಾಂಶ, ವಿವಾಹ ವಿಚ್ಛೇದನಕ್ಕೆ ಸಂಬಂಧಪಟ್ಟ  ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ನ್ಯಾಯಾಧೀಶೆ ರೇಶ್ಮಾ ಗೋಣಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ ಮಾತನಾಡಿ, ಪ್ರಕರಣಗಳಿಗೆ ಸಂಬಂಧಪಟ್ಟ ಕಕ್ಷಿದಾರರು ತಮ್ಮ ವಕೀಲರನ್ನು ಸಂಪರ್ಕಿಸಿ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ವಕೀಲರು, ಪೆÇಲೀಸ್ ಅಧಿಕಾರಿಗಳು ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಯತ್ನಿಸಬೇಕು. ಕೋವಿಡ್-19 ನಿಮಿತ್ತವಾಗಿ ಮೇಘಾ ಇ- ಲೋಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಸಿ.ಮಸಳಿ, ಬನಹಟ್ಟಿ ಪಿಎಸ್ಐ ರವಿಕುಮಾರ ಧರ್ಮಟ್ಟಿ, ತೇರದಾಳ ಪಿಎಸ್‍ಐ ವಿಜಯ ಕಾಂಬಳೆ, ಅಬಕಾರಿ ಇಲಾಖೆಯ ಅಧಿಕಾರಿ ಸಂಗಮೇಶ ಮುರನಾಳ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ ಇದ್ದರು.