ಪ್ರಕೃತಿ, ಪ್ರಾಣಿಗಳ ನಾಶದ ಶಾಪವೇ ಕೊರೊನ.
ವಿಶ್ವವನ್ನೆ ನಡುಗಿಸಿ ಬಲಿತೆಗೆದುಕೊಂಡ, ಕಣ್ಣಿಗೆ ಕಾಣಿಸದ ರಾಕ್ಷಸ ಕೊರೊನ. ಹಾಳು ಮೂಳು ತಲೆ ಕೆಡಿಸಿಕೊಂಡಿರುವ ನಾವೆಲ್ಲ ಒಂದು ಮಾತು ತಿಳಿದುಕೊಳ್ಳಬೇಕು ಅಷ್ಟೇ. ಒಂಬತ್ತು ಗ್ರಹಗಳಲ್ಲೊಂದಾದ ಭೂಮಿಯಲ್ಲಿ ನಾವು ಜನಿಸಿದ್ದು. ದೇವರು ಮನುಷ್ಯನಿಗೆ ಬೇಕಾದ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದಾನೆ. ಹಾಗೆಯೇ ಪ್ರಕೃತಿ ಮತ್ತು ಪ್ರಾಣಿಗಳನ್ನು ನಮ್ಮೊಡನೆ ಸೃಷ್ಟಿ ಮಾಡಿದ್ದಾನೆ. ನಾವೇನೊ ಚಂದ್ರನ ಮೇಲೆ ಕಾಲಿಟ್ಟು ಬಂದಿದ್ದೇವೆ ಎಂದು ಮುಂದುವರೆದ ಭರಾಟೆಯಲ್ಲಿ ಹಿಂದಿನಿಂದ ಕಾಪಾಡಿಕೊಂಡು ಬಂದಂಥ ಪ್ರಕೃತಿ, ಪ್ರಾಣಿಗಳನ್ನು ಮನಬಂದಂತೆ ಹಿಂಸೆ ಮಾಡಿ ಭೂಮಿಯನ್ನು ಬರಿದು ಮಾಡೋದು ತಪ್ಪು. ಪ್ರಕೃತಿ ಮಡಿಲಿನಲ್ಲಿ ಕೋಟ್ಯಂತರ ಜೀವರಾಶಿಗಳಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ನಾವು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯ. ಅದೇ ರೀತಿ ಪ್ರಾಣಿ, ಪಕ್ಷಿಗಳನ್ನು ರಕ್ಷಿಸುವ ಕಾರ್ಯ ನಮ್ಮದು. ಈ ಹಿಂದೆ ಎಷ್ಟೋ ಪ್ರಾಣಿಗಳು ಹೇಳ ಹೆಸರಿಗಿಲ್ಲದೇ ಸಂತತಿಯನ್ನು ಕಳೆದುಕೊಂಡಿವೆ. ಇವೆಲ್ಲದಕ್ಕೂ ಕಾರಣ ಕಾಂಕ್ರೀಟ್ ನಗರೀಕರಣ. 
      ನಮಗೆ ಗೊತ್ತಿದ್ದೂ ಕೆಲವೊಂದು ತಪ್ಪುಗಳನ್ನು ಮಾಡುತ್ತಾ ಬಂದಿದ್ದೇವೆ. ಅವುಗಳೆಂದರೆ ವಾಯು ಮಾಲಿನ್ಯ, ಭೂ ಮಾಲಿನ್ಯ, ಜಲ ಮಾಲಿನ್ಯ ಇವುಗಳ ಮಾಲಿನ್ಯಕ್ಕೆ ಒಂದೇ ಕಾರಣ ಪ್ಲಾಸ್ಟಿಕ್. 
       ವಿವರ ಹೀಗಿದೆ ; ನಾವು ಬಳಸಿದ ಪ್ಲಾಸ್ಟಿಕ್ ಭೂಮಿಯಲ್ಲಿ ನೀರಿನಲ್ಲಿ ಹಲವು ವರ್ಷ ಕೊಳೆಯುವುದಿಲ್ಲ. ಕೊರೊನ ತಂತ್ರಜ್ಞರು ಈ ವಿಷಯ ಗೊತ್ತಿದ್ದರೂ ಸುಮ್ಮನಾಗಿದ್ದಾರೆ. ಕೊರೊನ ರೋಗಕ್ಕೂ ಪ್ಲಾಸ್ಟಿಕಗೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಉದ್ಭವವಾದರೂ ಸಂಶಯವಿಲ್ಲ. 
ಇನ್ನು ದೇವರು ನೀಡಿದ ಪ್ರಕೃತಿಯಲ್ಲಿ ಸಿಗುವ ಎಲ್ಲ ಆಹಾರೋತ್ಪನ್ನಗಳು ಅಂದರೆ ಹಣ್ಣು, ತರಕಾರಿಗಳು, ಧಾನ್ಯಗಳು ಸಾವಯವ ರೀತಿಯ ಬೆಳೆಗಳಾಗಿವೆ. ಅದನ್ನು ನಾವು ಅದರ ಸಮಯಕ್ಕೆ ಬೆಳೆ ಬೆಳೆಯಲು ಬಿಡದೇ ರಾಸಾಯನಿಕ ಬಳಸಿ ಅಧಿಕ ಲಾಭಕ್ಕಾಗಿ ಬೆಳೆಗಳನ್ನು ಬೆಳೆದು, ಮಾನವನ ದೇಹಕ್ಕೆ ಬೇಕಾಗುವ ಪೌಷ್ಠಿಕಾಂಶಗಳನ್ನು ಹಾಳು ಮಾಡುತ್ತಿದ್ದೇವೆ. ಇದರಿಂದಾಗಿ ಮನುಷ್ಯನಿಗೆ ಬೇಗನೆ ಸಕ್ಕರೆ ಖಾಯಿಲೆ, ರಕ್ತದೊತ್ತಡದಂತಹ ಹಲವಾರು ರೊಗಗಳಿಗೆ ಕಾರಣವಾಗುತ್ತಿವೆ. ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರೆದರೂ ಹೊಸ ಖಾಯಿಲೆಗಳು ಹರಡುತ್ತಿವೆಯೆಂಬ ಮಾತು ಕಟುಸತ್ಯ.
ಪ್ರಮುಖವಾಗಿ ಮನುಷ್ಯನ ಆರೋಗ್ಯವನ್ನು ದೇಹಕ್ಕೆ ಸೇರುವ ಗಾಳಿ, ನೀರು, ಆಹಾರ ನಿರ್ಧರಿಸುತ್ತದೆ. ಭೂಮಿಯಲ್ಲಿ ಒಳ್ಳೆ ಗಾಳಿ, ನೀರು ಮಾರುವ ದಿನಗಳು ಪ್ರಾರಂಭವಾದ ಸಮಯದಿಂದಲೇ ವಿಶ್ವ ತನ್ನ ಅಸ್ಥಿತ್ವ ಕಳೆದುಕೊಳ್ಳಲು ಆರಂಭಿಸಿದೆ ಎನ್ನುವುದು ಪರಿಸರವಾದಿಗಳಿಗೆ ಮಾತ್ರ ಗೊತ್ತಿದೆ. ಇನ್ನು ಆಹಾರದ ವಿಷಯಕ್ಕೆ ಬಂದರೆ ಸಮಯಕ್ಕೆ ಸರಿಯಾಗಿ ಊಟ ಮಾಡದೇ ಬಾಯಿ ರುಚಿಗೆ ಬರೀ ಕುರುಕಲು , ಫಾಸ್ಟ್ ಫುಡ್, ಜಂಕ್ ಫುಡ್ ಗಳಿಗೆ ಮೊರೆಹೋಗಿ ಅಂತಹ ಆಹಾರಕ್ಕೆ ದಾಸರಾಗಿರುವುದು ನಮ್ಮ ದುರ್ದೈವ. ಇಂಥ ಆಹಾರ ಅಂದರೆ ಅಕ್ಕಿಯನ್ನು ಅನ್ನಕ್ಕೆ ಮಾತ್ರ ಬಳಸದೇ ದಿನದ ಮೂರು ಹೊತ್ತು ಅಕ್ಕಿಯಿಂದ ಮಾಡಿದ ಪದಾರ್ಥಗಳು ಮತ್ತು ವಿಷಾಹಾರ ಎಂದೇ ಖ್ಯಾತಿ ಪಡೆದ ಮೈದಾ ಹಿಟ್ಟಿನಿಂದ ತಯಾರಾದ ತಿಂಡಿ ತಿನಿಸುಗಳು.
     ಮನುಷ್ಯ ಯಾವುದೇ ರೋಗ ಬಂದರೂ ಈ ರೋಗ ಹುಟ್ಟಿದ ಪ್ರಮುಖ ಕಾರಣ ತಿಳಿದುಕೊಳ್ಳದೇ ಬಚಾವಾಗಲು ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ. ಅಂದರೆ ಕೊರೊನ ರೋಗವು ಮುಖಗವುಸು (ಮಾಸ್ಕ್), ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡರೆ ಹರಡೋದಿಲ್ಲ ಎಂದು ನಂಬಿದ್ದಾನೆ. ಪ್ರಕೃತಿ ಮನಸ್ಸು ಮಾಡಿದರೆ ಬೆಂಕಿ ಮಳೆಯನ್ನು ಹೊಯ್ದು ನಮ್ಮನ್ನೆಲ್ಲ ನಾಶ ಮಾಡಬಹುದು. ರೋಗ ಬಂದ ಮೇಲೆ ಹಳಹಳಿಸುವ ಮುನ್ನ ಎಚ್ಚೆತ್ತುಕೊಳ್ಳುವುದು ಅಗತ್ಯ. 
     ಜಗತ್ತಿನ ಹಣೆಬರಹ ಇಷ್ಟೇ ಯಾವುದೋ ಒಂದು ಖಾಯಿಲೆಗೆ ಒಂದೇ ಔಷಧಿ ಇರುತ್ತದೆ. ನಮ್ಮ ಜಗತ್ತಿನಲ್ಲಿ ಒಂದು ಖಾಯಿಲೆಗೆ ಸಾವಿರ ಪರೀಕ್ಷೆ ಮಾಡಿಸಬೇಕು. 
ಕೊರೊನ ಮಹಾ ಮಾರಿಗೆ ಅದೆಷ್ಟೋ ಜನ ಬಲಿ ಆದ್ರೂ ಜನರಿಗೆ ಬುದ್ದಿ ಬಂದಿಲ್ಲ. ಇನ್ನೂ ಪ್ರಾಣಿಗಳನ್ನು ಹಿಂಸೆ ಮಾಡಿ ಕೊಲ್ಲುವುದು ಬಿಡುತ್ತಿಲ್ಲ. ನಮ್ಮ ದೇಶಕ್ಕೆ ಕೊರೊನ ಕಾಲಿಟ್ಟಿದ್ದೇ ಆಶ್ಚರ್ಯ ಏಕೆಂದರೆ ಮೂರು ಹೊತ್ತು ಪೂಜೆ ಜರುಗುವ ದೇಶ ನಮ್ಮದು. ದೇವರು ಈ ಕೋಪ ಮುಂದೊಂದಿನ ಈ ಮುಖಗವುಸು, ಸ್ಯಾನಿಟೈಸರ್, ಸಾಮಾಜಿಕ ಅಂತರ ಇವ್ಯಾವು ಕೆಲಸ ಮಾಡೋದಿಲ್ಲ. ಅದಕ್ಕಿಂತ ಮುಂಚಿತ ಪಾಪ ಕರ್ಮಗಳನ್ನು ನಿಲ್ಲಿಸಿ ದೇವರ ಮತ್ತು ನಮ್ಮ ಹಳ್ಳಿಯ ಸಂಸ್ಕೃತಿಗೆ ಶರಣಾಗುವುದು ಒಳಿತು.
ಲೇಖನ : ಮಂಜುನಾಥ. ಜೆ. ರೇಳೆಕರ. ಕಲಾವಿದ, "ಕನ್ನಡದ ಮಿಸ್ಟರ್ ಬೀನ್"
      ಮೂಡಲಗಿ – 591312
ತಾ || ಮೂಡಲಗಿ, ಜಿ || ಬೆಳಗಾವಿ. 8867372134, 7022095868.


👉ವಿಶೇಷ ಸಂದರ್ಶನ ಹಾಗೂ ಸುದ್ದಿಗಳಿಗಾಗಿ ಕೂಡಲೇ ಯೂಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ, ಫೇಸ್ಬುಕ್ ಪೇಜ್ ಫಾಲೋ ಮಾಡಿ