►► ದೇಶ ಕಂಡ ಅಪ್ರತಿಮ ರಾಜಕಾರಣಿ ರಾಮಕೃಷ್ಣ ಹೆಗಡೆಯವರ ಜನ್ಮ ದಿನ : 



ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದಲ್ಲಿ ೧೯೨೬, ಅಗಸ್ಟ್ ೨೯ ರಂದು ಜನಿಸಿದರು . ಕೃಷಿಕ ಕುಟುಂಬದಿಂದ ಬಂದ ಇವರು ಮುಂದೆ ಕಾಶಿ ವಿದ್ಯಾಪೀಠ, ಬನಾರಸ್ ಹಾಗು ಲಕ್ನೋ ಯುನಿವರ್ಸಿಟಿ ಗಳಲ್ಲಿ ಓದಿ ನ್ಯಾಯ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸ್ವಾತಂತ್ರ್ಯ ಚಳುವಳಿಯಲ್ಲೂ ಭಾಗವಹಿಸಿದ್ದ ಇವರು ೧೯೪೨ ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನೊ ಅನುಭವಿಸಿದ್ದರು. ತನ್ನ ೨೦ನೇ ವಯಸಲ್ಲೇ ರೈತ ಚಳುವಳಿಯನ್ನು ರಾಜ್ಯದಲ್ಲಿ ರೂಪಿಸಿದರು. 

ತಮ್ಮ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ರಾಮಕೃಷ್ಣ ಹೆಗಡೆಯವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇ೦ದ್ರ ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಹೆಗಡೆ ಕರ್ನಾಟಕ ರಾಜ್ಯದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ 13ಬಾರಿ ರಾಜ್ಯ ಆಯವ್ಯಯವನ್ನು ಮ೦ಡಿಸಿದ ಏಕೈಕ ಅರ್ಥ ಸಚಿವ ರಾಮಕೃಷ್ಣ ಹೆಗಡೆಯವರು. 1983ರಲ್ಲಿ ಪ್ರಥಮ ಕಾ೦ಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಗಡೆಯವರು ಅಧಿಕಾರ ವಿಕೇಂದ್ರೀಕರಣದ ಪ್ರಬಲ ಪ್ರತಿಪಾದಕರಾಗಿದ್ದರು. ಕಾ೦ಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಂಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅಂತರದಿಂದ ಬಿದ್ದು ಹೋದಾಗ, ಮಂತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎಂಬುದನ್ನು ನಿರೂಪಿಸಿದರು. ಸಾಹಿತ್ಯ ಸಂಸ್ಕ್ರತಿ ಕಲೆಗಳಲ್ಲಿ ಅವರು ಅಪಾರ ಆಸಕ್ತಿ ಹೊಂದಿದ್ದವರಾಗಿದ್ದು ಅಂತಹ ಕಾರ್ಯಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಪಾರವಾದ ಪ್ರೋತ್ಸಾಹ ನೀಡಿದವರಾಗಿದ್ದರು.
ರಾಮಕೃಷ್ಣ ಹೆಗಡೆಯವರು ಜಾರಿಗೆ ತ೦ದ “ಪ೦ಚಾಯತ್ ರಾಜ್ “ ಯೋಜನೆ ದೇಶಕ್ಕೇ ಪ್ರಥಮ! ಅಧಿಕಾರವನ್ನು ಜನರಿದ್ದಲ್ಲಿಗೇ ಕೊ೦ಡೊಯ್ಯಬೇಕೆ೦ಬ ತಮ್ಮ ಮನದಿ೦ಗಿತವನ್ನು ಚಾಚೂತಪ್ಪದೆ ನಜೀರ ಸಾಬರ ಮೂಲಕ ಅನುಷ್ಟಾನಕ್ಕಿಳಿಸಿದರು ಹೆಗಡೆ! ಮುಂದೆ ಭಾರತದಲ್ಲಿಯೇ ಪ೦ಚಾಯತ್ ರಾಜ್ ಕಾನೂನಿಗೆ ತಿದ್ದುಪಡಿ ತರಲು ಪ್ರಧಾನಿ ರಾಜೀವ್ ಗಾಂಧಿ ಪ್ರೇರಣೆಗೊ೦ಡಿದ್ದು ಹೆಗಡೆಯವರ ಕಾಲದಲ್ಲಿನ ಕರ್ನಾಟಕದಲ್ಲಿ ಪ್ರಬಲವಾಗಿ ಅನುಷ್ಟಾನಗೊ೦ಡ ಪ೦ಚಾಯತ್ ಕಾನೂನಿನಿ೦ದ!