ರಬಕವಿ-ಬನಹಟ್ಟಿ,:ಕಳೆದೆರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಕ್ಷಣಾರ್ಧದಲ್ಲಿಯೇ ರಾಜ್ಯದ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಘೋಷಣೆ ಮಾಡಿದ್ದರು.
ರಬಕವಿ-ಬನಹಟ್ಟಿ,:ಕಳೆದೆರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಕ್ಷಣಾರ್ಧದಲ್ಲಿಯೇ ರಾಜ್ಯದ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಘೋಷಣೆ ಮಾಡಿದ್ದರು.
ಇದಕ್ಕೆ ಅನುಗುಣವಾಗಿ 2019-20 ನೇ ಸಾಲಿನಲ್ಲಿ ಸರ್ಕಾರದ ಆದೇಶದಲ್ಲಿ ನೇಕಾರಿಕೆ ಉದ್ದೇಶಕ್ಕಾಗಿ ನೇಕಾರರು ವಿವಿಧ ಸಹಕಾರಿ ಸಂಘಗಳಿಂದ ಮತ್ತು ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲ 31.03.2019 ಕ್ಕೆ ಹೊಂದಿದ ಹೊರಬಾಕಿಯಲ್ಲಿ ರೂ. 1 ಲಕ್ಷಗಳವರೆಗಿನ ನೇಕಾರರಿಗೆ ಸಾಲಮನ್ನಾ ಆದೇಶವನ್ನು ಕಳೆದ ದಿ.28/07/2020 ರಂದು ಜವಳಿ ಅಭಿವೃದ್ಧಿ ಆಯುಕ್ತರು ಅಧಿಕೃತ ಕಛೇರಿ ಆದೇಶ ಹೊರಡಿಸಿದ್ದರೂ ಇಲ್ಲಿಯವರೆಗೂ ಯಾವ ಸಹಕಾರಿ ಬ್ಯಾಂಕ್ ಹಾಗು ಸಹಕಾರಿ ಸಂಘಗಳಿಗೂ ಜಮೆಯಾಗಿಲ್ಲ.
ಬಾಗಲಕೋಟೆ ಹಾಗು ಬೆಳಗಾವಿ ಜಿಲ್ಲೆಗಳ 48 ಸಹಕಾರಿ ಸಂಘಗಳ ಪೈಕಿ 3250 ಫಲಾನುಭವಿಗಳಿಗೆ ಒಟ್ಟು 11.31 ಕೋಟಿ ರೂ.ಗಳಷ್ಟು ಸಾಲ ಮನ್ನಾ ಅಧಿಕೃತ ಕಚೇರಿ ಆದೇಶ ಹೊರಡಿಸಿ ಒಂದು ತಿಂಗಳಾದರೂ ಆಯಾ ಸಂಘಗಳಿಗೆ ತಲುಪಿಲ್ಲ. ಸರ್ಕಾರಿ ಆದೇಶದನ್ವಯ ಮೂರ್ನಾಲ್ಕು ದಿನಗಳಲ್ಲಿಯೇ ತಲುಪಬೇಕಾಗಿರುವದು ವಿಳಂಬಕ್ಕೆ ಕಾರಣ ತಿಳಿಯದಾಗಿದೆ.
ಘೋಷಣೆ ಮಾಡಿದಾಗಿನಿಂದಲೂ ಕಳೆದ ಎರಡು ವರ್ಷಗಳಿಂದ ಸಹಕಾರಿ ಸಂಘಗಳಿಗೆ ಅಸಲು ಇಲ್ಲ ಬಡ್ಡಿಯೂ ಇಲ್ಲದೆ ಸಂಘಗಳ ನಿರ್ವಹಣೆ ದುಬಾರಿಯಾಗಿದೆ. ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ನೇಕಾರರು ಹೊಸ ಸಾಲ ಪಡೆಯಲಾಗದೆ ಅತಂತ್ರ ಬದುಕು ನಿರ್ಮಾಣವಾಗಿದೆ.
ನೇಕಾರರಿಗೆ ಹೊಸ ಸಾಲ ದೊರಕದಿರುವದು ಒಂದೆಡೆಯಾದರೆ ಮೊದಲೇ ಕೋವಿಡ್-19 ನಿಂದ ಜವಳಿ ಉದ್ಯಮ ನೆಲಕಚ್ಚಿ ಉದ್ಯೋಗವಿಲ್ಲದೆ ಪರದಾಡುತ್ತಿರುವಾಗ ಬಡ್ಡಿಯೂ ಸಹಿತ ವಿನಾಕಾರಣ ತುಂಬವಂತಾಗಿದೆ.
ಈ ಕುರಿತು ತೇರದಾಳ ಶಾಸಕ ಸಿದ್ದು ಸವದಿ ಸಾಕಷ್ಟು ಪ್ರಯತ್ನ ನಡೆಸಿ ಕೊನೆಗೂ ಹಣ ಬಿಡುಗಡೆಗೆ ಯಶಸ್ವಿ ಕಂಡಿದ್ದು ನಿಜ ಆದರೆ ತಕ್ಷಣವೇ ಆಯಾ ಸಂಘಗಳಿಗೆ ಬಿಡುಗಡೆಗೊಳಿಸಬೇಕೆಂಬುದು ನೇಕಾರರ ಹಾಗು ಸಹಕಾರಿ ಸಂಘಗಳ ಒಕ್ಕೊರಲಿನ ಒತ್ತಾಯವಾಗಿದೆ.
`ಈಗಾಗಲೇ ಜವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕಛೇರಿ ಆದೇಶ ಬಿಡುಗಡೆಗೊಂಡಿದೆ. ಇನ್ನೆರಡು ದಿನಗಳಲ್ಲಿ ಆಯಾ ಸಹಕಾರಿ ಬ್ಯಾಂಕ್ ಹಾಗು ಸಂಘಗಳಿಗೆ ಹಣ ಜಮೆಯಾಗಲಿದೆ. ಯಾರೂ ಭಯಪಡುವ ಕಾರಣವಿಲ್ಲ.’----ಸಿದ್ದು ಸವದಿ, ಶಾಸಕರು ತೇರದಾಳ ಕ್ಷೇತ್ರ.
`ಸಹಕಾರಿ ಸಂಘ ಹಾಗು ಬ್ಯಾಂಕ್‍ಗಳು ಹಳೆಯ ಸಾಲ ಋಣ ಮುಕ್ತವಾಗುವವರೆಗೂ ಹೊಸ ಸಾಲ ನೀಡುತ್ತಿಲ್ಲ. ಇದರಿಂದ ಸೀರೆ ಉತ್ಪಾದನೆ ಹಾಗು ಮಾರಾಟಕ್ಕೆ ತೀವ್ರ ಕುಂಠಿತವಾಗುತ್ತಿದೆ.’----ಶಂಕರ ಜಾಲಿಗಿಡದ, ಅಧ್ಯಕ್ಷರು, ಪಾವರ್‍ಲೂಮ್ ಅಶೋಶಿಯೇಷನ್, ಬನಹಟ್ಟಿ.
`ನೇಕಾರ ಸಮ್ಮಾನ ಯೋಜನೆಯಡಿ ಕೆಲವರಿಗೆ ಇನ್ನೂ ಪರಿಹಾರ ದೊರಕಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಗ ಸಾಲ ಮನ್ನಾಗೆ ಸಂಬಂಧಿಸಿದ ಯೋಜನೆ ಪರಿಪೂರ್ಣಗೊಳಿಸಿ ಹೊಸ ಸಾಲಕ್ಕೆ ಅನುವು ಮಾಡಬೇಕಿದೆ.’------ಮಲ್ಲಿಕಾರ್ಜುನ ಜುಮನಾಳ, ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಸಂಘಟನೆ, ಬನಹಟ್ಟಿ.
Social Plugin