ರಬಕವಿ-ಬನಹಟ್ಟಿ ತಾಲೂಕಾ ಪಂಚಾಯ್ತಿಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು.
ಬಯಲು ಶೌಚ ಹಾಗು ವಿದ್ಯುತ್‍ಗೆ ಸಂಪೂರ್ಣ ಕಡಿವಾಣವಾಗಲಿ
*ಗ್ರಾಪಂಗಳಲ್ಲಿ ನೀರಿನ ಅಭಾವವಿಲ್ಲ
ರಬಕವಿ-ಬನಹಟ್ಟಿ,ಅ3: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳು ಒಬ್ಬರ ಹಿತಾಸಕ್ತಿಗಾಗಿ ಬೇಡ ಬದಲಾಗಿ ಗ್ರಾಮದ ಅಭಿವೃದ್ಧಿಯ ಸ್ವಾರ್ಥ ತುಂಬಿರಲಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಸೋಮವಾರ ರಬಕವಿ-ಬನಹಟ್ಟಿ ತಾಲೂಕು ಪಂಚಾಯ್ತಿಯಲ್ಲಿ ಪ್ರಥಮ ಬಾರಿಗೆ ತಾಲೂಕಿನ ಎಲ್ಲ 18 ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಇನ್ನೂ ಕೆಲ ಗ್ರಾಮಗಳಲ್ಲಿ ಬಯಲು ಶೌಚ ಕಾಣಸಿಗುತ್ತಿದೆ. ಅಂಥವರಿಗೆ ವಯಕ್ತಿಕ ಶೌಚ ಹಾಗು ಸಾಮೂಹಿಕ ಶೌಚಕ್ಕೆ ತೆರಳುವಂತೆ ಆದ್ಯತೆ ನೀಡಬೇಕು. ಸ್ಪಂದಿಸದಿದ್ದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಶಾಸಕರು ಖಡಕ್ ಸಂದೇಶ ರವಾನಿಸಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಗ್ರಾಮಗಳಲ್ಲಿ ಯಶಸ್ವಿ ಕಾಮಗಾರಿಗಳು ನಡೆಯುತ್ತಿವೆ. ವಿಳಂಬವಾದಲ್ಲಿ ತಿಳಿಹೇಳುವ ಮೂಲಕ ಬೇಗನೆ ಕಾಮಗಾರಿಗಳು ಮುಕ್ತಾಯಗೊಳಿಸಬೇಕು. 14ನೇ ಹಣಕಾಸು ಯೋಜನೆಯಡಿಯ ತಾಲೂಕಿನ ಎಲ್ಲ 18 ಗ್ರಾಮ ಪಂಚಾಯ್ತಿ ವ್ಯಾಪ್ತಿ ಸುಮಾರು 10 ಕೋಟಿ ರೂ.ಗಳ ಅನುದಾನ ಕಾರ್ಯಗಳಲ್ಲಿ ಅರ್ಧದಷ್ಟು ಕಾಮಗಾರಿಗಳು ಮುಕ್ತಾಯ ಕಂಡಿವೆ. ಇನ್ನುಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
15ನೇ ಹಣಕಾಸು ಯೋಜನೆಯಡಿ ಇದೀಗ 10 ಕೋಟಿ ರೂ.ಗಳು ಎಲ್ಲ ಪಂಚಾಯ್ತಿ ವ್ಯಾಪ್ತಿ ಸೇರಿ ಬರಲಿದೆ. ಅಂಗನವಾಡಿ, ಶಾಲೆ ಕಂಪೌಂಡ್, ಶೌಚಾಲಯ, ಸ್ಮಶಾನ ಅಭಿವೃದ್ಧಿ ಮಹತ್ವದ್ದಾಗಿ ರಸ್ತೆಗಳ ಅಭಿವೃದ್ಧಿ ಬಳಕೆ ಮಾಡಲು ಶಾಸಕರು ತಿಳಿಹೇಳಿದರು.
6 ತಿಂಗಳಲ್ಲಿ ಬಯಲು ಶೌಚ ಮುಕ್ತ: ಎಲ್ಲ ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳಿಗೆ ಶೌಚಾಲಯ ಬಗ್ಗೆ ತಿಳಿಹೇಳುವ ಮೂಲಕ ಈಗಾಗಲೇ ಮದರಖಂಡಿ, ಆಸಂಗಿ ಸೇರಿದಂತೆ ಕೆಲ ಗ್ರಾಮಗಳು ಯಶಸ್ವಿ ಕಂಡಿವೆ. ಬರುವ 6 ತಿಂಗಳೊಳಗಾಗಿ ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿಸಬೇಕೆಂದರು.
ವಿದ್ಯುತ್‍ಗೆ ಕಡಿವಾಣ ಹಾಕಿ: ವಾರ್ಷಿಕ 10 ಲಕ್ಷ ರೂ.ಗಳು ಮೀರದಂತೆ ವಿದ್ಯುತ್ ಬಳಕೆಯನ್ನು ಪ್ರತಿ ಗ್ರಾಮ ಪಂಚಾಯ್ತಿ ನಿರ್ವಹಣೆ ಮಾಡಬೇಕು. ಕೆಲ ಗ್ರಾಮಗಳಲ್ಲಿ ವಿನಾಕಾರಣ 20 ರಿಂದ 30 ಲಕ್ಷ ರೂ.ಗಳಷ್ಟು ಬಿಲ್ ಬರುತ್ತಿವೆ. ಇದರ ಬಗ್ಗೆ ಜಾಗರೂಕತೆವಹಿಸಬೇಕೆಂದರು.
ಪ್ರತಿ ಗ್ರಾಮಗಳಲ್ಲಿಯೂ ಘನತ್ಯಾಜ್ಯ ವಸ್ತು ವಿಲೇವಾರಿಗಾಗಿ ತಾಲೂಕಿನ ಎಲ್ಲ 18 ಗ್ರಾಮ ಪಂಚಾಯ್ತಿಗಳಲ್ಲಿ ಟಿಪ್ಪರ್ ವ್ಯವಸ್ಥೆಗೆ ಅವಕಾಶ ಕಲ್ಪಿಸುವಲ್ಲಿ ಸಭೆ ಮಹತ್ವದ ನಿರ್ಧಾರ ಪಡೆಯಿತು.
ಇದೇ ಸಂದರ್ಭ ತಾಲೂಕಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ  ಹಿಪ್ಪರಗಿ ಮಾತನಾಡಿ, ಎಲ್ಲ ಅಧಿಕಾರಿಗಳ ವಿಶ್ವಾಸದಿಂದ ಶೌಚಾಲಯಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಮೂಲಭೂತ ಸೌಕರ್ಯಗಳಿಗೆ ಹಾಗು ಗ್ರಾಮಸ್ಥರ ಬೇಡಿಕೆಗನುಗುಣವಾಗಿ ಕಾಮಗಾರಿ ನಡೆಸುವದಾಗಿ ಭರವಸೆ ನೀಡಿದರು.