ರಬಕವಿಯ ದೇವರಾಜ ಅರಸು ವಸತಿ ನಿಲಯವನ್ನು ಕೋವಿಡ್ ಕೇಂದ್ರವನ್ನಾಗಿಸುವಲ್ಲಿ ತಾಲೂಕಾ ಕೊರೊನಾ ನೋಡಲ್ ಅಧಿಕಾರಿ ಶಶಿಧರ ಪೂಜಾರಿ ಪರಿಶೀಲನೆ ನಡೆಸಿದರು.
ಹೆಚ್ಚುತ್ತಿರುವ ಕೊರೊನಾ ಸಂಖ್ಯೆ: ಮತ್ತೊಂದು ಕೋವಿಡ್ ಕೇಂದ್ರ
ರಬಕವಿ-ಬನಹಟ್ಟಿ,ಅ1: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರೆಸಿದ್ದು, ಪ್ರತಿ ದಿನ 20 ರಿಂದ 30 ರ ಗಡಿ ತಲುಪುತ್ತಿದ್ದು, ಕೊರೊನಾ ವಾರಿಯರ್ಸ್‍ಗಳಿಗೆ ದಿಕ್ಕೇ ತೋಚದಂತಾಗಿದೆ.
ಕಳೆದೆರಡು ವಾರಗಳಿಂದ ರಬಕವಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ 60 ಹಾಸಿಗೆಗಳ ಕೋವಿಡ್ ಕೇಂದ್ರವನ್ನು ಪ್ರಾರಂಭಿಸಿತ್ತು. ಇದೀಗ ಕೊರೊನಾ ಪಾಜಿಟಿವ್‍ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಕಾರಣ ಸೋಮವಾರದಿಂದ ರಬಕವಿಯ ದೇವರಾಜ ಅರಸು ವಸತಿ ನಿಲಯದಲ್ಲಿ 150 ಹಾಸಿಗೆಗಳ ಕೋವಿಡ್ ಕೇಂದ್ರವನ್ನು ತೆರೆಯಲು ಯೋಚಿಸಿದಲ್ಲದೆ ಶನಿವಾರ ತಾಲೂಕಾ ಕೋವಿಡ್ ನೋಡಲ್ ಅಧಿಕಾರಿ ಶಶಿಧರ ಪೂಜಾರಿ ನೇತೃತ್ವದಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ ಹಾಗು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲಿಸಿದರು.
ಸದ್ಯ ಈ ಹಾಸ್ಟೇಲ್‍ನಲ್ಲಿ ಪ್ರಾಥಮಿಕ ಸಂಪರ್ಕಿತರನ್ನು ಇಡಲಾಗಿದೆ. ಇವರೆಲ್ಲರನ್ನೂ ಪಕ್ಕದ ಪಾಲಿಟೆಕ್ನಿಕ್ ಕಾಲೇಜು ಆವರಣದೊಳಗೆ ವರ್ಗಾಯಿಸುವ ಮೂಲಕ ಆಸ್ಪತ್ರೆಯ ಬಳಕೆಗೆ ಇರಿಸಲಾಗುವದೆಂದು ಪೂಜಾರಿ ಹೇಳಿದರು.
ಇದೇ ಸಂದರ್ಭ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಶರಣಪ್ಪನವರ, ಬಂದೇನವಾಜ ಡಾಂಗೆ ಸೇರಿದಂತೆ ಅನೇಕರಿದ್ದರು.

Social Plugin