48 ವರ್ಷಗಳ ನಂತರ ಮಾತಾಡಿತು ಚಿತ್ರದುರ್ಗದ 'ನಾಗರಹಾವು' ಕೋಟೆ!ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು.

■ 48 ವರ್ಷಗಳ ನಂತರ ಮಾತಾಡಿತು ಚಿತ್ರದುರ್ಗದ
    'ನಾಗರಹಾವು' ಕೋಟೆ! ■
ಲೇಖನ  - ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು. 

     48 ವರ್ಷಗಳ ಹಿಂದೆ ಪುಟ್ಟಣ್ಣ ಕಣಗಾಲ್ ಚಿತ್ರಿಸಿದ 'ನಾಗರಹಾವು' ಸಿನಿಮಾದ ಚಿತ್ರದುರ್ಗ ಕೋಟೆಯ ಲೊಕೇಶನ್ ಈಗ ಹೇಗಿದೆ ಎನ್ನುವ ಕುತೂಹಲ ನನ್ನದು. ಈ ಕುತೂಹಲವೇ ಪತ್ನಿ ಗಾಯತ್ರಿ ಜತೆ ಕೋಟೆ ಸುತ್ತಲು ಪ್ರೇರಣೆಯಾಯಿತು. ಚಿತ್ರದುರ್ಗದ ಕೋಟೆಯ ದಿಡ್ಡಿಬಾಗಿಲಲ್ಲಿ ಕಾರು ನಿಲ್ಲಿಸಿ ಹೊರ ಬಂದಾಗ ಒಂದೇ ಒಂದು ಕ್ಷಣ ಚಾಮಯ್ಯ ಮೇಷ್ಟ್ರು ಜೋರಾಗಿ 'ರಾಮಾಚಾರೀ...' - ಅಂತ ಕೂಗಿದಂತಾಯಿತು!
     ಅದು ಬೆಟ್ಟದ ಬುಡ. ಸುತ್ತಲೂ ನೋಡಿದೆ. ಇಳಿ ಹೊತ್ತಿನಲ್ಲಿ ತಪಸ್ಸಿಗೆ ಕೂತ ಮುನಿಯಂತೆ ಕಂಡಿತು ಬೆಟ್ಟ! ದೂರದಲ್ಲೆಲ್ಲೋ ಗೋಪುರದ ಬುರುಜು. ಕಮಾನು ಕಾಲ್ದಾರಿ. ಉರುಟುರುಟು ಬಂಡೆ. ಅಳಿದುಳಿದ ಶಿಥಿಲ ದೇವಾಲಯ. ಎಂಭತ್ತು ಡಿಗ್ರಿಯಲ್ಲಿ ವಾಲಿ ನಿಂತ ಬೃಹತ್ ಬಂಡೆಕಲ್ಲು. ಇಲ್ಲೇ ಅಲ್ಲವೇ ನಮ್ಮ ಚಾಮಯ್ಯ ಮೇಷ್ಟ್ರು ಅಶ್ವಥ್ ಅವರು ಒಂದು ಕೈಲಿ ಕೋಲು ಮತ್ತೊಂದು ಕೈಲಿ ಚಪ್ಪಲಿ ಹಿಡಿದು ಜಾರುಬಂಡೆಯಂಥಾ ಈ ಬೆಟ್ಟವನ್ನು ಹತ್ತುತ್ತಾ 'ರಾಮಾಚಾರೀ...' ಅಂತ ಕೂಗಿದ್ದು? ಮೇಷ್ಟ್ರನ್ನು ಸತಾಯಿಸುತ್ತಾ ಮಿಂಚಿನಂತೆ ರಾಮಾಚಾರಿ ವಿಷ್ಣುವರ್ಧನ್ ಓಡಿ ಬೃಹತ್ ಬಂಡೆಯಡಿ ನಾಗರ ಹಾವಿನಂತೆ ಮಲಗಿದ್ದು? ಅಲಮೇಲು, ಮಾರ್ಗಿಯರ ಮೋಹಕ್ಕೆ ರಾಮಾಚಾರಿ ಜಾರಿ ಬಿದ್ದಿದ್ದು? ಕರ್ಪೂರ ಉರಿಸಿ 'ಮಿಂಚಂತೆ ಬಳಿ ಬಂದೆ ನೀನು' ಅಂತ ಆರತಿ ಹಾಡಿದ್ದು? ಅದೇ ಆರತಿಯನ್ನು ಚುಡಾಯಿಸಿದ ಜಲೀಲನನ್ನು ರಾಮಾಚಾರಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದು? 'ಬಾರೇ ಬಾರೇ ಚೆಂದದ ಚೆಲುವಿನ ತಾರೆ' - ಎಂದು ಹಾಡುತ್ತಾ ಸ್ಲೋಮೋಷನ್'ನಲ್ಲಿ ನಾಯಕ - ನಾಯಕಿ ಬೆಟ್ಟ ಗುಡ್ಡ ಸುತ್ತಿದ್ದು? ಶತ್ರು ಪಾಳಯವನ್ನು ಓಬವ್ವ ಒನಕೆಯಿಂದಲೇ ಚಿಂದಿ ಉಡಾಯಿಸಿದ್ದು? ಶಾಲಾ ಮಕ್ಕಳ ಮುಂದೆ ಹಾಡುತ್ತಾ ರಾಮಾಚಾರಿ ದುರ್ಗದ ಇತಿಹಾಸ ಹೇಳಿದ್ದು? ಒಂದಾ? ಎರಡಾ? ಕೊನೆಗೆ ಕೋಡುಗಲ್ಲಿನ ಮೇಲಿನಿಂದ ಹಾರಿ ಯುವ ಪ್ರೇಮಿಗಳು ಪ್ರಾಣ ಬಿಟ್ಟಿದ್ದು ಇದೇ ಬೆಟ್ಟದ ಮೇಲಲ್ಲವೇ?

     ಓಹ್, 'ನಾಗರಹಾವು' ಚಿತ್ರದ ಒಂದೊಂದು ದೃಶ್ಯ ಕೂಡಾ ಈಗಲೂ ಜೀವಂತ. ಬೃಹತ್ ಗೇಟಿನ ಬಳಿ ಬಂದೆ. ಯಾವುದೋ ಸ್ಮೃತಿಯಲ್ಲಿ, ದಿವ್ಯ ಬೆಳಕಿನಲ್ಲಿ ಪ್ರಿನ್ಸಿಪಾಲ್ ಲೋಕನಾಥ್ ಅವರ ಮನೆ ಕಂಡಂತಾಯಿತು. ತುಂಟ ರಾಮಾಚಾರಿ ಹೂಕುಂಡಗಳನ್ನು ಒಡೆದು ಹಾಕಿದ್ದು, ಪ್ರಿನ್ಸಿಪಾಲರನ್ನು ಪಟಾಪಟ್ಟಿ ಚೆಡ್ಡಿಯಲ್ಲೇ ಲೈಟು ಕಂಭಕ್ಕೆ ಕಟ್ಟಿ ಹಾಕಿದ್ದು ನೆನಪಾಗಿ ಸಣ್ಣಗೆ ನಗು ಬಂತು! ಯಾರೋ ದಾರಿಹೋಕರೊಬ್ಬರು ಬೆಚ್ಚಿ ಬಿದ್ದು ನನ್ನನ್ನೇ ನೋಡಿದರು. 'ಯಾಕ್ಸಾರ್ ನಗ್ತೀರಾ?' ಎಂದು ಕೇಳಿದರು ಅವರು. 'ನೀವು ನಾಗರಹಾವು ಸಿನೆಮಾ ನೋಡಿದ್ದೀರಾ?' ಎಂದು ಕೇಳಿದೆ.  'ನೋಡೋದೇನು ಬಂತು ಸಾರ್? ಅದ್ರಲ್ಲಿ ನಾನು ಪಾರ್ಟ್ ಮಾಡಿದ್ದೇನೆ ಕೂಡಾ...' ಅಂದರು! ಆಶ್ಚರ್ಯವಾಯಿತು. 'ನಾಗರಹಾವು' ಚಿತ್ರದಲ್ಲಿ ಪಾರ್ಟ್ ಮಾಡಿದ್ದಾರೆಂದರೆ ಆಗ ಇವರಿಗೆ ಹನ್ನೆರಡರ ಪ್ರಾಯವಿರಬೇಕು! ದುರ್ಗದ ಕೋಟೆಯ ಇತಿಹಾಸವನ್ನು ಹಾಡಾಗಿ ಹೇಳುವ ಹೊತ್ತಿನಲ್ಲಿ ವಿಷ್ಣುವರ್ಧನ್ ಮುಂದೆ ಕುಳಿತ ಶಾಲಾ ಮಕ್ಕಳ ಪೈಕಿ ಇವರೂ ಒಬ್ಬರಾಗಿರಬಹುದಾ? ಎಂದು ಯೋಚಿಸುತ್ತಿರುವಂತೆಯೇ ಅವರು ಹೇಳಿದರು : 'ಏನು ಸ್ವಾಮಿ ಯೋಚಿಸುತ್ತಿದ್ದೀರಾ? ನಿಮ್ಮ ಯೋಚನೆ ಸರಿಯಾಗಿದೆ. ನಾನು ಆಗ ಸ್ಕೂಲ್ ಯೂನಿಫಾರಂ ಹಾಕಿಕೊಂಡು ಓಡಾಡಿದ್ದೆ. ನನ್ನ ಹೆಸರು : ನಂಜುಂಡ ಸ್ವಾಮಿ. ಪುಟ್ಟಣ್ಣ ನನ್ನನ್ನು ಪ್ರೀತಿಯಿಂದ ನಂಜೂ ಅಂತ ಕರೀತಿದ್ರು. ಒಮ್ಮೆ ಅವ್ರು ನನ್ನನ್ನು ಕರೆದು ಚಾಕೊಲೇಟ್ ಕೂಡಾ ಕೊಟ್ಟಿದ್ರು ಗೊತ್ತಾ?' ಎಂದು ಹೇಳುತ್ತಾ ನಕ್ಕರು ಅವರು...
     ಬಂದಿರುವ ಉದ್ದೇಶ ಸಾರ್ಥಕವಾಯಿತೆಂದುಕೊಂಡೆ! ಅನಾಯಾಸವಾಗಿ ರೊಟ್ಟಿ ಜಾರಿ ತುಪ್ಪದಲ್ಲೇ ಬಿದ್ದಿತ್ತು! ನಂಜುಂಡಸ್ವಾಮಿಯ ಸ್ನೇಹ ಬೆಳೆಸಿಕೊಂಡೆ. ಪಕ್ಕದಲ್ಲೇ ಇದ್ದ ಅವರ ಕಾಂಡಿಮೆಂಟ್ ಸ್ಟೋರ್'ಗೆ ಹೋಗಿ ಬಿಸ್ಕತ್ ತಿಂದೆ. ಬಾದಾಮಿ ಹಾಲು ಕುಡಿದೆ. ಪರ್ಸ್'ಗೆ ಕೈ ಹಾಕಿದಾಗ 'ನೀವು ನಮ್ಮ ಗೆಸ್ಟ್' ಅಂದರು! ನಂತರ ಶುರುವಾದದ್ದೇ 48 ವರ್ಷಗಳ ಹಿಂದಿನ ದುರ್ಗದ ಕಥೆ...

     ಆಗ ವಿಷ್ಣುವರ್ಧನ್, ಅಂಬರೀಶ್ ಯಾರೂಂತ ಯಾರಿಗೂ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದದ್ದು ಪುಟ್ಟಣ್ಣ ಕಣಗಾಲ್, ಅಶ್ವಥ್, ಲೋಕನಾಥ್, ಶಿವರಾಮ್, ಎಂ.ಪಿ.ಶಂಕರ್, ಲೀಲಾವತಿ, ಆರತಿ ಮೊದಲಾದವರು ಮಾತ್ರ! ಆಗ ಚೆಡ್ಡಿ ಧರಿಸಿ ಓಡಾಡುತ್ತಿದ್ದ ನಂಜುಂಡಸ್ವಾಮಿ ಈಗ ಪಂಚೆಧಾರಿ! ಯಾವುದೋ ಹಳೆಯ ಜೀರ್ಣವಾದ ಮನೆಗೆ ಕರೆದುಕೊಂಡು ಹೋಗಿ ಕೋಣೆಯೊಂದನ್ನು ತೋರಿಸಿ ನಂಜುಂಡಸ್ವಾಮಿ ವಿವರಿಸುತ್ತಾ ಹೋದರು : 'ಇಲ್ಲೇ ಆರತಿ ಮೇಕಪ್ ಹಾಕಿದ್ದು, ಇಲ್ಲೇ ಪುಟ್ಟಣ್ಣ ಮಲಗಿ ವಿಶ್ರಾಂತಿ ಪಡೆಯುತ್ತಿದ್ದುದು, ಅಶ್ವಥ್ ಸದಾ ಇಲ್ಲೇ ಕುಳಿತುಕೊಳ್ಳುತ್ತಿದ್ದುದು, ಈ ಕೋಣೆಯಲ್ಲೇ ಲೀಲಾವತಿ ರಾಮಾಚಾರಿಯನ್ನು ಮುದ್ದು ಮಾಡುತ್ತಿದ್ದುದು, ಓ...ಅಲ್ಲಿ ಪ್ರಿನ್ಸಿಪಾಲ್ ಲೋಕನಾಥರನ್ನು ರಾಮಾಚಾರಿ ಕಟ್ಟಿ ಹಾಕಿದ್ದು...!' - ಎಂದು ಹೇಳುತ್ತಾ ಹೋದ ನಂಜುಂಡಸ್ವಾಮಿ ನನ್ನ ಪಾಲಿಗೆ ಸಾಕ್ಷಾತ್ ಗೈಡ್'ನಂತೆ ಕಂಡರು!
      ನಂಜುಂಡಸ್ವಾಮಿಯ ಜೊತೆ ಬೆಟ್ಟ ಹತ್ತಲು ಹೊರಟೆ. ಆ ಬೃಹತ್ ಮೆಟ್ಟಿಲುಗಳನ್ನು ಕಂಡು ಹತ್ತುವ ಮೊದಲೇ ಆಯಾಸವಾದಂತಾಯಿತು! ನಂಜುಂಡಸ್ವಾಮಿ ಸಲೀಸಾಗಿ ಬೆಟ್ಟ ಹತ್ತುತ್ತಿದ್ದರು. ದೂರದಲ್ಲೆಲ್ಲೋ ಕೈ ತೋರಿಸುತ್ತಾ ವಿವರವಾಗಿ ಹೇಳ ಹೊರಟರು : 'ಅಲ್ಲಿ ವಿಷ್ಣುವರ್ಧನ್ ಅಡಗಿ ಕುಳಿತುಕೊಂಡಿದ್ದರು...ಓ ಅಲ್ಲಿ ಅಲಮೇಲು ಜೊತೆ ರಾಮಾಚಾರಿ ಚಕ್ಕಂದವಾಡಿಕೊಂಡಿದ್ದರು. ಹಾಗೆ ನೋಡಿದರೆ ಈ ಕೋಟೆಯನ್ನು ಕರ್ನಾಟಕದ ಜನತೆಗೆ ಪರಿಚಯಿಸಿದ್ದೇ ಪುಟ್ಟಣ್ಣ ಕಣಗಾಲರು. ನಾಶವಾಗಿ ಹೋಗಲಿದ್ದ ಕೋಟೆಕೊತ್ತಲಗಳಿಗೆ ಮರುಜೀವ ನೀಡಿದ್ದೇ ಅವರು. ಪ್ರವಾಸೋದ್ಯಮದಲ್ಲಿ ದುರ್ಗದ ಬೆಟ್ಟಕ್ಕೂ ಒಂದು ಸ್ಥಾನ ಸಿಗುವಂತೆ ಮಾಡಿದ್ದು ಪುಟ್ಟಣ್ಣ. ಇವರ ನಂತರವೂ ಸಾಕಷ್ಟು ಮಂದಿ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಆದರೆ ಯಾರೂ ಈ ಕೋಟೆಗೆ ಜೀವ ತುಂಬುವ ಕೆಲಸ ಮಾಡಲಿಲ್ಲ. ನಿಜ ಹೇಳ್ತಿದ್ದೇನೆ ಸರ್, ನಮಗೆಲ್ಲಾ ಇದು ಬರಿಯ ಬೆಟ್ಟವಲ್ಲ, ಇಡಿಯ ಚಿತ್ರದುರ್ಗ ನಗರವನ್ನು ಕಾಯುವ ಕೊತ್ವಾಲನಂತೆ ಕಾಣಿಸುತ್ತಾನೆ...' - ಎಂದು ಹೇಳುತ್ತಾ ಮತ್ತೆ 'ನಾಗರಹಾವು' ಚಿತ್ರದ ಚಿತ್ರೀಕರಣದ ವಿವರದತ್ತ ಬಂದರು ಸ್ವಾಮಿ : 'ಸುಮಾರು ನಾಲ್ಕು ತಿಂಗಳುಗಳ ಕಾಲ ಚಿತ್ರೀಕರಣ ನಡೆಸಿದ್ದರು ಪುಟ್ಟಣ್ಣ. ಪುಟ್ಟಣ್ಣನವರು ಸಿಟಿಯ ರೂಪವಾಣಿ ಲಾಡ್ಜ್'ನಲ್ಲಿ ರೂಮು ಮಾಡಿಕೊಂಡಿದ್ದರು. ಉಳಿದವರಿಗೆ ಬೇರೆ ಲಾಡ್ಜ್. ಆಗ ಶಾಲಾ ಬಾಲಕರಾಗಿದ್ದ ನಮಗೆಲ್ಲಾ ಶೂಟಿಂಗ್ ನೋಡುವ ಕುತೂಹಲ. ಶಾಲೆಗೆ ಚಕ್ಕರ್ ಹಾಕಿ ಶೂಟಿಂಗ್ ನೋಡಿದ್ದೋ ನೋಡಿದ್ದು! ಮನೆಗೆ ಬಂದರೆ ಅಪ್ಪನಿಂದ, ಶಾಲೆಗೆ ಹೋದರೆ ಮೇಷ್ಟರಿಂದ ಮತ್ತು ಶೂಟಿಂಗ್'ಗೆ ಹೋದರೆ ಪುಟ್ಟಣ್ಣರಿಂದ ಬೈಸಿಕೊಂಡದ್ದೆಷ್ಟೋ.? ವಿಷ್ಣುವರ್ಧನ್ ಇಷ್ಟು ದೊಡ್ಡ ನಟರಾಗ್ತಾರೆ, ಅಂಬರೀಶ್ ಇಷ್ಟು ದೊಡ್ಡ ರಾಜಕಾರಣಿಯಾಗ್ತಾರೆ, ಪುಟ್ಟಣ್ಣ ಕಣಗಾಲ್ ಸಹಿತ ಇವರೆಲ್ಲಾ ಇಷ್ಟು ಬೇಗ ಹೊರಟು ಹೋಗ್ತಾರೆ ಅಂತ ಆಗ ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ...' - ಎಂದು ಹೇಳುತ್ತಾ ಒಂದು ಸುದೀರ್ಘ ನಿಟ್ಟುಸಿರು ಬಿಟ್ಟರು ನಂಜುಂಡಸ್ವಾಮಿ! ಚಿತ್ರದುರ್ಗದ ಕೋಟೆ ಏನೂ ಅರಿಯದಂತೆ ಬಂಡೆಯ ಮುಸುಕು ಹೊದ್ದು ಮಲಗಿತ್ತು...
^^^^^^^^^^^^^^^^^^^^^^^^^^^^^^^^^^^^^^^^^^^^^^^^◆  ಮೂರನೇ ಫೋಟೋ : ನಂಜುಂಡಸ್ವಾಮಿ.