ಕೃಷ್ಣೆಯ ಒಡಲಿಗೆ ಕಳ್ಳಗನ್ನ • ನದಿ ತೀರದ ಗುಂಡಿಗಳಾಗುತ್ತಿವೆ ಮೃತ್ಯುಕೂಪ...ರಬಕವಿ-ಬನಹಟ್ಟಿ,ಅ28: ರಬಕವಿ-ಬನಹಟ್ಟಿಗೆ ಅಂಟಿಕೊಂಡಿರುವ ಕೃಷ್ಣೆಯ ಒಡಲೊಳಗಿನ ಮರಳು ಅಕ್ರಮ ದಂಧೆ ಒಂದೆಡೆಯಾದರೆ ಇದೀಗ ತಾಲೂಕಿನ ಆಸಂಗಿ, ಅಸ್ಕಿ ಗ್ರಾಮಕ್ಕೆ ಹೊಂದಿಕೊಂಡಂತೆ ನದಿಯ ದಡದಲ್ಲಿ ಭಾರೀ ಪ್ರಮಾಣದ ಮಣ್ಣು ಸಾಗಾಣೆಯಾಗುತ್ತಿದ್ದು, ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
 

   

ಕೃಷ್ಣೆಯ ಒಡಲಿಗೆ ಕಳ್ಳಗನ್ನ
ನದಿ ತೀರದ ಗುಂಡಿಗಳಾಗುತ್ತಿವೆ ಮೃತ್ಯುಕೂಪ
-ಮಲ್ಲಿಕಾರ್ಜುನ ತುಂಗಳ

ರಬಕವಿ-ಬನಹಟ್ಟಿ,ಅ28: ರಬಕವಿ-ಬನಹಟ್ಟಿಗೆ ಅಂಟಿಕೊಂಡಿರುವ ಕೃಷ್ಣೆಯ ಒಡಲೊಳಗಿನ ಮರಳು ಅಕ್ರಮ ದಂಧೆ ಒಂದೆಡೆಯಾದರೆ ಇದೀಗ ತಾಲೂಕಿನ ಆಸಂಗಿ, ಅಸ್ಕಿ ಗ್ರಾಮಕ್ಕೆ ಹೊಂದಿಕೊಂಡಂತೆ ನದಿಯ ದಡದಲ್ಲಿ ಭಾರೀ ಪ್ರಮಾಣದ ಮಣ್ಣು ಸಾಗಾಣೆಯಾಗುತ್ತಿದ್ದು, ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಯಾವ ಪ್ರಮಾಣದಲ್ಲಿ ಮಣ್ಣು ಅಕ್ರಮ ದಂಧೆ ನಡೆಯುತ್ತಿದೆ ಎಂದರೆ, ಬೇಸಿಗೆ ಸಂದರ್ಭದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾದಾಗ ಮಣ್ಣಿನ ಗುಡ್ಡೆಗಳನ್ನು ಖಾಲಿ ಮಾಡುತ್ತಾರೆ. ನದಿ ನೀರು ತುಂಬಿ ಹರಿದರೂ ಇವರ ಅಕ್ರಮ ದಂಧೆ ಮಾತ್ರ ಹಾಗೇ ಮುಂದುವರೆಯುತ್ತಿರುವದು ಅಧಿಕಾರಿಗಳ ಕೃಪಾಪೋಷಣೆ ಯಾವ ರೀತಿ ಇದೆ ಎಂಬುದನ್ನು ತೋರಿಸುತ್ತದೆ.
ನದಿ ತೀರದಲ್ಲಿ ಸುಂದರ ಬಿದಿರಿನ ಗಡ್ಡೆಗಳು, ಗಿಡಗಳು ರಾರಾಜಿಸುತ್ತಿದ್ದವು. ಮಣ್ಣುಗಳ್ಳರ ಕೈಯಲ್ಲಿ ಸಿಲುಕಿ ಗಿಡಗಳ ಬುಡಗಳಿಗೆ ಬೇಕಾದಷ್ಟು ಮಣ್ಣು ಬಿಟ್ಟು ಸುತ್ತಲಿನ ಪ್ರದೇಶವನ್ನೆಲ್ಲಾ ಖಾಲಿ ಮಾಡುತ್ತ ಸರ್ಕಾರದ ಬೊಕ್ಕಸಕ್ಕೆ ಹಾನಿಯುಂಟು ಮಾಡುತ್ತಿದ್ದರೆ ಮತ್ತೊಂದೆಡೆ ಪರಿಸರ ಸಂಪೂರ್ಣ ನಾಶ ಮಾಡುವಲ್ಲಿ ಕಾರಣರಾಗುತ್ತಿದ್ದಾರೆ.
ಖಾಸಗಿಯಾಗಿ ಮಾರಾಟ: ನದಿಯಲ್ಲಿನ ಮಣ್ಣನ್ನು ಅಕ್ರಮವಾಗಿ ಅಗೆದು ಯಾವದೇ ಅನುಮತಿಯಿಲ್ಲದೆ ಇಟ್ಟಿಗೆ ಗೂಡು, ಖಾಸಗಿ ವ್ಯಕ್ತಿಗಳ ತೋಟಗಳಿಗೆ, ದಾಸ್ತಾನು ಮಳಿಗೆ ನಿಮಾಣ ಸ್ಥಳಗಳಿಗೆ ಟ್ರ್ಯಾಕ್ಟರ್ ಲೊಡ್‍ಗೆ 800 ರಿಂದ 1000 ರೂ. ನಂತೆ ಮಾರಾಟ ಮಾಡುವ ಮೂಲಕ ಕೃಷ್ಣೆಯ ಒಡಲಿಗೆ ಕನ್ನವಾಕುತ್ತಿದ್ದಾರೆ.
ಮೃತ್ಯುಕೂಪ: ನದಿ ತುಂಬಿದ ದಿನಗಳಲ್ಲಿ ಮಣ್ಣುಗಳ್ಳರು ತೆಗೆದ ಗುಂಡಿಗಳಲ್ಲಿ ನದಿ ತೀರದಲ್ಲಿಯೇ ದೊಡ್ಡ ದೊಡ್ಡ ಗುಂಡಿಗಳು ಕಾಣಸಿಗುವದಿಲ್ಲ. ಇದರಿಂದ ದನಕರುಗಳು ನೀರು ಕುಡಿಯಲು, ಜನರು ಬಟ್ಟೆ ತೊಳೆಯಲು, ಮಕ್ಕಳು ಈಜಾಡಲು ಹೋದರೆ ಸಾವು ನಿಶ್ಚಿತ. ನದಿಗೆ ಅಂಟಿಕೊಂಡೇ 8-10 ಅಡಿಗೂ ಹೆಚ್ಚು ಆಳವಾಗಿರುವ ಗುಂಡಿಗಳು ಮೃತ್ಯುಕೂಪದಂತೆ ಜನರನ್ನು ಆತಂಕಕ್ಕೆ ಕಾರಣವಾಗಿದ್ದು, ಅನಾಹುತಗಳನ್ನು ಸ್ವಾಗತಿಸುತ್ತಿವೆ.
ಅಧಿಕಾರಿಗಳ ನಿರ್ಲಕ್ಷ್ಯ: ಸರ್ಕಾರಿ ಆಸ್ತಿ ರಕ್ಷಿಸಬೇಕಾದ ಅಧಿಕಾರಿಗಳು ನದಿಯ ಒಡಲಿಗೆ ಕನ್ನ ಹಾಕಿ, ಮಣ್ಣಿನ ಸಾಗಾಟ ಮಾಡುತ್ತಿದ್ದರೂ, ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಕುಮ್ಮಕುನಿಂದಲೇ ಅಕ್ರಮ ನಡೆಯುತ್ತಿದೆ ಎಂದು ಆಸಂಗಿ, ಅಸ್ಕಿ ಗ್ರಾಮಸ್ಥರು ಆರೋಪಿಸಿದ್ದಾರೆ.
20 ಕ್ಕೂ ಅಧಿಕ ಅಕ್ರಮ ಇಟ್ಟಂಗಿ ಭಟ್ಟಿಗಳು: ಆಸಂಗಿ-ಕುಲಹಳ್ಳಿ ಗ್ರಾಮೀಣ ರಸ್ತೆಯಲ್ಲಿ 20 ಕ್ಕೂ ಅಧಿಕ ಅಕ್ರಮವಾಗಿ ಇಟ್ಟಂಗಿ ಭಟ್ಟಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕುರಿತು ಯಾವದೇ ಅಧಿಕಾರಿಗಳೂ ಇತ್ತು ಸುಳಿವೂ ನೀಡದೆ, ಬೇಕಾಬಿಟ್ಟಿಯಾಗಿ ಕಾರ್ಯಚಟುವಟಿಕೆಗೆ ಅನಧಿಕೃತವಾಗಿ ಅನುಮತಿ ನೀಡುವಲ್ಲಿ ಕಾರಣರಾಗಿದ್ದಾರೆ. ಅಲ್ಲದೆ ನದಿಗೆ ಅಂಟಿಕೊಂಡೇ ಈ ಅಕ್ರಮ ದಂಧೆ ನಡೆಯುತ್ತಿರುವ ಕಾರಣ ನದಿ ಪಾತ್ರದ ಮಣ್ಣನ್ನು ಸರಾಗವಾಗಿ ತಂದು ಅಲ್ಲಿಯೇ ಇಟ್ಟಂಗಿಗಳನ್ನು ತಯಾರಿಸುವ ಮೂಲಕ ಅಕ್ರಮ ದಂಧೆಗೆ ಮತ್ತಷ್ಟು ಅನುಕೂಲ ಮಾಡಿಕೊಳ್ಳುವಲ್ಲಿ ಕಾರಣವಾಗಿದೆ.
ಇವೆಲ್ಲದರ ವಿರುದ್ಧ ಗಣಿ ಹಾಗು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಅಕ್ರಮವಾಗಿ ನಡೆಸುತ್ತಿರುವ ದಂಧೆಕೋರರ ಹೆಡೆಮುರಿ ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ.
`ಹಾಡುಹಗಲೇ ನದಿಯ ಮಣ್ಣು ಬಗೆದು ಸಂಪತ್ತು ಲೂಟಿ ಮಾಡುತ್ತಿರುವವರ ಹಿಂದೆ ಅಧಿಕಾರಿಗಳ ಜಾಲವೇ ಅಡಗಿದೆ. ಶ್ಯಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಅಕ್ರಮ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಗ್ರಾಮಸ್ಥರಿಗೆ ಪ್ರತಿಭಟನೆ ಅನಿವಾರ್ಯ.’----ಹರ್ಷವರ್ಧನ ಪಟವರ್ಧನ, ನ್ಯಾಯವಾದಿಗಳು.
`20 ಕ್ಕೂ ಅಧಿಕ ಎಲ್ಲ ಇಟ್ಟಂಗಿ ಭಟ್ಟಿಗಳು ಅಕ್ರಮವಾಗಿವೆ. ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ರಸ್ತೆ ಬದಿಯಲ್ಲಿದ್ದರೂ ನೋಡಿಯೂ ನೋಡದಂತೆ ಸಂಚರಿಸುತ್ತಿದ್ದಾರೆ. ಈ ಕುರಿತು ಲೋಕಾಯುಕ್ತ, ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಸಾಕಷ್ಟು ಭಾರಿ ಪತ್ರ ಬರೆದರೂ ಪ್ರಯೋಜನವಾಗದಿರುವದು ಅಸಹ್ಯಪಡುವಂತದ್ದು, ಸರ್ಕಾರ ಹಾಗು ಜಿಲ್ಲಾಡಳಿತ ತಕ್ಷಣವೇ ಕಾರ್ಯಪ್ರವರ್ತರಾಗಿ ಕ್ರಮ ಕೈಗೊಳ್ಳಬೇಕು’.----ಪರಮಾನಂದ ಮಗದುಮ್, ಆಸಂಗಿ.