ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಗಣಪತಿ ಉತ್ಸವ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿದರು.
ಗಣೇಶ ಮೂರ್ತಿಗಳ ಮೆರವಣಿಗೆ ನಿಷೇಧ ರಬಕವಿ-ಬನಹಟ್ಟಿ,ಅ19:ಕೊರೊನಾ ಮಹಾಮಾರಿ ಹಿನ್ನಲೆ ಗಣೇಶ ಹಬ್ಬ ಆಚರಣೆಯಲ್ಲಿ ಕೆಲವಾರು ನಿರ್ಬಂಧಗಳನ್ನ ರಬಕವಿ-ಬನಹಟ್ಟಿ ತಾಲೂಕಾಡಳಿತ ವಿಧಿಸಿದೆ. ಸ್ಯಾನಿಟೈಸರ್, ಧರ್ಮಲ್ ಸ್ಕ್ಯಾನರ್ ಇತ್ಯಾದಿ ಸೇರಿದಂತೆ ಸರ್ಕಾರದ ಮಾರ್ಗಸೂಚಿ ಪಾಲಸಬೇಕೆಂದು ಸೂಚಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಹಬ್ಬದ ಆಚರಣೆ ನೀಡಿದ್ದು, ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ತರುವದದಾಗಲಿ ಅಥವಾ ವಿಸರ್ಜನೆ ಮಾಡುವದಾಗಲಿ ಸಂಪೂರ್ಣ ನಿಷೇಧ ಮಾಡಲಾಗಿದೆ ಎಂದು ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಆಚರಣೆ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಿಲ್ಲ. ಜೊತೆಗೆ ಗಣೇಶ ಕೂರಿಸಿರುವ ಸ್ಥಳದಲ್ಲಿ 20 ಜನಕ್ಕಿಂತ ಹೆಚ್ಚಿನ ಜನ ಸೇರಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದೆಂದರು.
ಎಲ್ಲ ಪಟ್ಟಣ ಹಾಗು ಗ್ರಾಮಗಳಲ್ಲಿಯೂ ನಿಯಮ ಅನ್ವಯವಾಗುವದಲ್ಲದೆ ರಸ್ತೆ ಮೇಲೆ ಅಥವಾ ಸರ್ಕಾರಿ ಪ್ರದೇಶದಲ್ಲಿ ಗಣೇಶ ಮೂರ್ತಿ ಕೂಡ್ರಿಸುವದನ್ನು ನಿಷೇಧಿಸಿದ್ದು, ಖಾಸಗಿ ಸ್ಥಳ, ಮೈದಾನ ಹಾಗು ದೇವಸ್ಥಾನಗಳಲ್ಲಿ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ತಿಳಿಸಿದರು.
ಇದೇ ಸಂದರ್ಭ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಹಿಪ್ಪರಗಿ, ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಹೆಸ್ಕಾ ಅಧಿಕಾರಿ ಎಂ.ಬಿ. ಕಲಕಂಬ, ಠಾಣಾಧಿಕಾರಿ ವಿಜಯ ಕಾಂಬಳೆ ವೇದಿಕೆ ಮೇಲಿದ್ದರು.
ಧರೆಪ್ಪ ಉಳ್ಳಾಗಡ್ಡಿ, ನಂದು ಗಾಯಕವಾಡ, ಬಸವರಾಜ ಮನ್ಮಿ, ಪಂಚಾಕ್ಷರಿ ಹಿರೇಮಠ, ಮಹಾದೇವ ಕೋಟ್ಯಾಳ, ಸಂಜಯ ತೆಗ್ಗಿ ಸೇರಿದಂತೆ ಗಣಪತಿ ಉತ್ಸವ ಸಮಿತಿಯ ನೂರಾರು ಜನರು ಭಾಗಿಯಾಗಿದ್ದರು.
Social Plugin