◆ KGF ವೀರ, ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಅವರಿಗೆ ಮಲಯಾಳಿಗಳ ಗೌರವ...◆
ನಿನ್ನೆ ಕಾಸರಗೋಡಿನಲ್ಲಿರುವ ಸೋದರ ಸುಕೇಶನ ಮಗ ಆದರ್ಶ ನನ್ನ ಮೊಬೈಲ್'ಗೊಂದು ವಿಡಿಯೋ ಲಿಂಕ್ ಕಳಿಸಿದ. ನೋಡುತ್ತೇನೆ, ದಂಗು ಬಡಿದು ಹೋದೆ! ಅದೊಂದು FBಯಲ್ಲಿ ಪೋಸ್ಟ್ ಆಗಿದ್ದ ಮಲಯಾಳದ ಪೇಜ್. ಬರೋಬ್ಬರಿ ಅರ್ಧ ಗಂಟೆಯ ಕಾರ್ಯಕ್ರಮ. ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಅವರ ಬದುಕಿನ ಏಳು-ಬೀಳುಗಳನ್ನು ಹೇಳುವ ಕಥೆ ಹೊಂದಿರುವ ವಿಡಿಯೋ. ನೋಡುತ್ತಾ ಕೂತು ಬಿಟ್ಟೆ. ಪ್ರಾಯಶಃ ಕನ್ನಡದ ಈ ಪ್ರತಿಭೆ ಬಗ್ಗೆ ಕನ್ನಡದಲ್ಲೇ ಇಂಥಾದ್ದೊಂದು ವಿಡಿಯೋ ಬಂದಿರಲಾರದೇನೋ! ಅಷ್ಟು ಅಚ್ಚುಕಟ್ಟಾಗಿ ಸಿದ್ದ ಪಡಿಸಿದ ಈ ವಿಡಿಯೋ ರವಿ ಬಸ್ರೂರು ಅವರ ಕಿರೀಟಕ್ಕೊಂದು ಗರಿ ಎಂದು ಧಾರಾಳವಾಗಿ ಹೇಳಬಹುದು...
'ಈ ಫೋಟೋದಲ್ಲಿ ಕಾಣುವ ವ್ಯಕ್ತಿ ಯಾರೆಂದು ಯಾರಿಗೂ ಗೊತ್ತಿಲ್ಲ, ಗೊತ್ತಿರಬೇಕಾಗೂ ಇಲ್ಲ. ಆದರೆ ಇವರು ಜಾಗತಿಕ ಖ್ಯಾತಿ ಹೊಂದಿರುವ KGF ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ಎಂದು ಹೇಳಿದರೆ ನಿಮ್ಮ ಹುಬ್ಬು ಮೇಲೆರಬಹುದು. ಹೌದು, ಇದು ನಿಜ. ಕನ್ನಡ ಚಿತ್ರರಂಗ ಹುಬ್ಬೇರಿಸಿ ನೋಡಿದ 'ಉಗ್ರಂ' ಮತ್ತು KGF ಚಿತ್ರಗಳ ಸಂಗೀತ ನಿರ್ದೇಶಕ ಇವರೇ...' - ಎಂದು ಆರಂಭವಾಗುವ ವಿಡಿಯೋದಲ್ಲಿ ರವಿಯವರ ಬದುಕಿನ ಸಂಪೂರ್ಣ ಚಿತ್ರಣವಿದೆ. ಬಸ್ರೂರು ಎಂಬ ಹಳ್ಳಿಯಿಂದ ಆರಂಭವಾಗುವ ರವಿ ಬದುಕು, ಬಾಂಬೆ, ಚೆನ್ನೈ, ಹೈದರಾಬಾದ್...ಎಲ್ಲಾ ಕಡೆ ಸುತ್ತಿ ಬಳಸಿ ಹೇಗೆ ಬೆಂಗಳೂರಿನಲ್ಲಿ ಮತ್ತೆ ಆರಂಭವಾಗಿ ವೃತ್ತಿ ಬದುಕಿನ ಅಲ್ಟಿಮೇಟ್ ಎತ್ತರಕ್ಕೆ ಏರಿತು ಎನ್ನುವುದರ ಸಚಿತ್ರ ವರದಿ ಈ ವಿಡಿಯೋದಲ್ಲಿದೆ. ಕುಲುಮೆ ಕೆಲಸದಿಂದ ಆವೆಮಣ್ಣಿನ ಮೂರ್ತಿ ರಚಿಸುವವರೆಗಿನ ಬದುಕನ್ನು ಈ ರವಿ ನನ್ನಲ್ಲೂ ಕೂಡಾ ಹೇಳಿ ಕೊಂಡಿರಲಿಲ್ಲ. 'ಒಮ್ಮೆ ಮಾತಾಡೋಣ' - ಎಂದು ಹೇಳಿದ್ದಷ್ಟೇ! ಮತ್ತೆ ಮಾತುಕತೆ ಮುಂದುವರೀಲಿಲ್ಲ. ಆದರೆ ಸವೆಸಿ ಬಂದದ್ದು ಅತ್ಯಂತ ಕಷ್ಟದ ದಿನಗಳು ಎಂದು ಮಾತ್ರ ಗೊತ್ತಿತ್ತು. ಈ ವಿಡಿಯೋ ನೋಡಿದ ಮೇಲೆ ರವಿಯ ಬಡತನದ ಬದುಕಿನ ವಿರಾಟ್ ದರ್ಶನವಾಯಿತು! ಫೋನ್ ಮಾಡಿ ಮಾತಾಡೋಣವೆಂದರೆ ನಂಬರ್ ಇರಲಿಲ್ಲ. ಡ್ರೈವ್ ಮಾಡಿದರೆ ಉಜಿರೆಯಿಂದ ಒಂದೆರಡು ಗಂಟೆಗಳ ದಾರಿಯೆಂದು ಯಾರೋ ಹೇಳಿದ್ದ ನೆನಪು. ನೋಡೋಣ...
ವಿಷಯ ಇದಲ್ಲ. 'ಗಿರ್ಮಿಟ್' ಹೆಸರು ಕೇಳಿದ್ದೀರಾ? ಇದು ಈಯಪ್ಪ ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ. ಮಕ್ಕಳು ಹಿರಿಯರಂತೆ ನಟಿಸಿದ ಸಿನಿಮಾ. 5 ನಿಮಿಷ ನೋಡಿದರೆ ಸಾಕು ಇದರ ಹಣೆಬರಹ ಗೊತ್ತಾಗಿ ಬಿಡುತ್ತದೆ. ಆದರೆ ರವಿಯಂಥಾ ಬುದ್ಧಿವಂತರಿಗೆ ಯಾಕೆ ಗೊತ್ತಾಗಲಿಲ್ಲ ಎನ್ನುವುದೇ ಚೋದ್ಯ! ಖ್ಯಾತಿಯ ಉತ್ತುಂಗದಲ್ಲಿರುವಾಗ ನಿರ್ದೇಶಿಸಿದ ಚಿತ್ರ. ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲೇ ಹೇಳಬೇಕೆಂದಿದ್ದೆ. ಆದರೆ ನೆಗೆಟಿವ್ ಅಭಿಪ್ರಾಯ ಹೇಳುವಾಗ ಸ್ವಲ್ಪ ಯೋಚಿಸಬೇಕಾಗುತ್ತದೆ. ನಾನು ಯೋಚಿಸುವಷ್ಟರಲ್ಲಿ ರವಿ ಚಾನಲ್'ಗಳ ಕ್ಯಾಮರಾ ಮುಂದೆ ನಿಂತಿದ್ದರು. ಏನೂ ಹೇಳದೆಯೇ ಹಿಡಿರುಗಿದ್ದೆ. 'ಗಿರ್ಮಿಟ್' ತೆರೆ ಕಂಡಿತು. ನನ್ನ ನಿರೀಕ್ಷೆಯಂತೆಯೇ ಸೋತು ಸುಣ್ಣವಾಯಿತು. ರವಿ ಅತ್ತರು, ಕಿರುಚಾಡಿದರು. ಒಂದೊಳ್ಳೆಯ ಪ್ರಯೋಗವನ್ನು ಮಾಧ್ಯಮದವರು ಕೊಂದೇ ಬಿಟ್ಟರು ಎನ್ನುವಂತೆ ಕೂಗಿಕೊಂಡರು. ತಮ್ಮ ಮೈಯನ್ನು ತಾವೇ ಪರಚಿಕೊಂಡರು! ಚಾನಲ್'ಗಳ ಮುಂದೆ ಅಕ್ಷರಶಃ ಕಣ್ಣೀರಿಟ್ಟರು, ಗೋಳಾಡಿದರು. ಮುಂದೇನು?
ಆ ಮಲಯಾಳಿ FB ಪೋಸ್ಟ್ ಪ್ರಕಾರ ಹುಡುಕಿದರೆ ರವಿ ಸಿಕ್ಕಿದ್ದು ಅದೇ ಬಸ್ರೂರಿನ ಕುಲುಮೆಯಲ್ಲಿ! ಸೋ ಸ್ಯಾಡ್...
◆ 'ಶುಭಂ' ಪ್ರತಿಗಳಿಗಾಗಿ ಸಂಪರ್ಕಿಸಿ :

Social Plugin