ರಬಕವಿ-ಬನಹಟ್ಟಿ ತಹಶೀಲ್ದಾರ ಕಛೇರಿಯಲ್ಲಿ ಪ.ಪಂದ ಜಾತಿಯ ನಕಲಿ ಪ್ರಮಾಣ ಪತ್ರವನ್ನು ಪಡೆಯುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಉಪ ತಹಶೀಲ್ದಾರ ಎಸ್.ಎಲ್. ಕಾಗಿಯವರ ಅವರಿಗೆ ಮನವಿ ಅರ್ಪಿಸಿದರು. 
ನಕಲಿ ಪ್ರಮಾಣ ಪತ್ರ ಪಡೆಯುವವರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹ
ರಬಕವಿ-ಬನಹಟ್ಟಿ,ಜು1: ಪರಿಶಿಷ್ಟ ಪಂಗಡದ (ಎಸ್‍ಟಿ) ಪಟ್ಟಿಯ ಕ್ರಮ ಸಂಖ್ಯೆ 38 ರಲ್ಲಿಯ ನಾಯ್ಕಡ, ನಾಯಕಾ, ಚೋಲಿವಾಲಾ ನಾಯಕ, ಮೋಟನಾಯಕ, ಕಪಾಡಿಯಾ ನಾಯಕ, ಬೇಡ, ಬೇಡರ ಮತ್ತು ವಾಲ್ಮೀಕಿ ಜನಾಂಗದ ಪರ್ಯಾಯ ಪದಗಳಾದ ತಳವಾರ ಮತ್ತು ಪರಿವಾರ ಜಾತಿಯವರಿಗೆ ಮಾತ್ರ ಎಸ್‍ಟಿ ಪ್ರಮಾಣ ಪತ್ರ ನೀಡಬೇಕು ಎಂದು ರಬಕವಿ-ಬನಹಟ್ಟಿ ಶ್ರೀ ಮಹರ್ಷಿ ವಾಲ್ಮೀಕಿ (ಪರಿಶಿಷ್ಟ ಪಂಗಡ) ಸಮಾಜದ ಕ್ಷೇಮಾಭಿವೃದ್ದಿ ಸಂಘ(ರಿ) ದ ಸದಸ್ಯರು ರಬಕವಿ-ಬನಹಟ್ಟಿ ಉಪ ತಹಶೀಲ್ದಾರ ಎಸ್. ಎಲ್ ಕಾಗಿಯವರ ಅವರಿಗೆ ಮನವಿ ಅರ್ಪಿಸಿದರು.
ಪರಿಶಿಷ್ಟ ಪಂಗಡದ (ಎಸ್‍ಟಿ) ಪಟ್ಟಿಯ ಕ್ರಮ ಸಂಖ್ಯೆ 38 ರಲ್ಲಿಯ ನಾಯ್ಕಡ, ನಾಯಕಾ, ಚೋಲಿವಾಲಾ ನಾಯಕ, ಮೋಟನಾಯಕ, ಕಪಾಡಿಯಾ ನಾಯಕ, ಬೇಡ, ಬೇಡರ ಮತ್ತು ವಾಲ್ಮೀಕಿ ಜನಾಂಗದ ಪರ್ಯಾಯ ಪದಗಳಾದ ತಳವಾರ ಮತ್ತು ಪರಿವಾರ ಜಾತಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಆದ್ದರಿಂದ ಹಿಂದುಳಿದ ವರ್ಗದಲ್ಲಿ ಬರುವ ಗಂಗಾಮತಸ್ಥ, ಬೇಸ್ತ, ಕೋಳಿ, ಮಹಾದೇವ ಕೋಳಿಗಳು, ಕೋಲಿ, ಸುಣಗಾರ, ಅಂಬಿಗ, ಅಂಬಿಗೇರ ಈ ಜನಾಂಗದ ಪರ್ಯಾಯ ಪದವೂ ಕೂಡಾ ತಳವಾರ ಎಂದು ಇರುತ್ತದೆ. ಈ ಜಾತಿಯವರು ಈ ಅವಕಾಶವನ್ನು ದುರುಪಯೋಗ ಮಾಡಿಕೊಂಡು ಪರಿಶಿಷ್ಟ ಪಂಗಡ ಕ್ರಂ. ಸಂ.38 ರಲ್ಲಿ ಬರುವ ಬೇಡರ, ವಾಲ್ಮೀಕಿ ಪರ್ಯಾಯ ಪದ ಎಂದು ಹೇಳಿ ಖೊಟ್ಟಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಇವರ ಕುಲಶಾಸ್ತ್ರ ಅಧ್ಯಯನ ಇಲ್ಲದೇ ಎಸ್‍ಟಿ ಜಾತಿ ಪ್ರಮಾಣ ಪತ್ರವನ್ನು  ಕ್ರಂ. ಸಂ. 38 ರ ಅಡಿಯಲ್ಲಿ ವಿತರಣೆ ಮಾಡದೆ ತಿರಸ್ಕರಿಸಬೇಕು. ಹಾಗೂ ಖೊಟ್ಟಿ ಜಾತಿ ಪ್ರಮಾಣ ಪತ್ರವನ್ನು ಪಡೆಯುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಅಂಬಿಗೇರ, ತಳವಾರ ಜಾತಿಯವರಿಗೆ ಎಸ್‍ಟಿ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಿದ್ದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್‍ಸಿಎಲ್) ಹಾಗೂ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. 
ಈ ಸಂದರ್ಭದಲ್ಲಿ ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದ ಕಾರ್ಯದರ್ಶಿ ಎಫ್.ಬಿ. ತಳವಾರ ಮಾತನಾಡಿದರು. ರಬಕವಿ-ಬನಹಟ್ಟಿ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ (ಪರಿಶಿಷ್ಟ ಪಂಗಡ) ಸಮಾಜದ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಮೇಶ ಮಿಳ್ಳಿಗೇರಿ, ಸುರೇಶ ವಾಲಿಕಾರ, ಸುರೇಶ ತಳವಾರ, ಅರ್ಜುನ ಹಳ್ಳೂರ, ದೇವನಾಳ, ರಮೇಶ ದಳವಾಯಿ, ಪರಸಪ್ಪ ಗುಬ್ಬಿ ಸೇರಿದಂತೆ ವಾಲ್ಮೀಕಿ ಸಮಾಜದ ಹಿರಿಯರು ಇದ್ದರು.

- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698