ಶವದ ಜತೆ ಕೊರೊನಾ ತಂದ ವೃದ್ಧೆ
*ನೂರಾರು ಗ್ರಾಮಸ್ಥರು ಸಾಂಸ್ಥಿಕ ಕ್ವಾರಂಟೈನ್
ರಬಕವಿ-ಬನಹಟ್ಟಿ,ಜ3: ಅಂತ್ಯಸಂಸ್ಕಾರಗೊಂಡ 94 ವರ್ಷದ ಮಹಿಳೆಯೋರ್ವಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಕಾರಣ ಸದ್ಯ ನೂರಾರು ಜನ ಸಾಂಸ್ಥಿಕ ಕ್ವಾರಂಟೈನ್ ಆದ ಘಟನೆ ರಬಕವಿ-ಬನಹಟ್ಟಿ ತಾಲೂಕು ವ್ಯಾಪ್ತಿಯ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 94 ವರ್ಷದ ಅಜ್ಜಿಯೋರ್ವಳಿಗೆ ವಯೋಸಹಜ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಜು.1 ರಂದು ವಿಜಯಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಿನ್ನೆ ಜು.2 ಗುರುವಾರ ಸಂಜೆ ಹೊತ್ತು ಹೃದಯಾಘಾತದಿಂದ ಮೃತರಾದ ಕಾರಣ ರಾತ್ರಿ ಸ್ವಗ್ರಾಮವಾದ ಹಿಪ್ಪರಗಿಗೆ ಶವವನ್ನು ತಂದು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಇವರ ಗಂಟಲು ದ್ರವ ಹಾಗು ರಕ್ತದ ಮಾದರಿಯನ್ನು ಜು.1 ರಂದು ಸ್ವ್ಯಾಬ್ ಪರೀಕ್ಷೆಗೆಂದು ಕಳಿಸಲಾಗಿತ್ತು. ಜು.3 ಶುಕ್ರವಾರದಂದು ಬೆಳಿಗ್ಗೆ ಅಜ್ಜಿಗೆ ಕೊರೊನಾ ಪಾಸಿಟಿವ್ ಇದ್ದ ಕಾರಣ ಅಂತ್ಯ ಸಂಸ್ಕಾರದಲ್ಲಿ ಹಾಗು ಮರುದಿನ ಮನೆಗೆ ಶೋಕ ವ್ಯಕ್ತಪಡಿಸಿದ 13 ಜನ ಕುಟುಂಬಸ್ಥರು ಸೇರಿ ನೂರಾರು ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿದ ಘಟನೆ ನಡೆದಿದೆ.
ವಿಚಿತ್ರ ಪ್ರಕರಣ: ಗ್ರಾಮದಲ್ಲಿಯೇ ಇದ್ದ ಅಜ್ಜಿಗೆ ಯಾರ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ ಎಂಬುದು ತಾಲೂಕಾಡಳಿತಕ್ಕೆ ತಲೆನೋವಾಗಿದೆ.
ವೈದ್ಯರ ಯಡವಟ್ಟು?: ವರದಿ ಬರುವ ಮೊದಲೇ ಶವವನ್ನು ಹಸ್ತಾಂತರಿಸುವದರಿಂದ ವೈದ್ಯರ ಯಡವಟ್ಟು ಕಾರಣವಾಗಿದೆ ಎಂಬುದು ಮೆಲ್ನೋಟಕ್ಕೆ ಕಂಡು ಬರುವ ವಿಷಯ. ವರದಿ ಬಂದ ನಂತರ ಕುಟುಂಬಸ್ಥರಿಗೆ ವೃದ್ಧೆಯ ಶಸವನ್ನು ನೀಡಬೇಕಿತ್ತೆಂಬುದು ಗ್ರಾಮಸ್ಥರ ಹೇಳಿಕೆಯಾಗಿದೆ.
ಆತಂಕದಲ್ಲಿ ಗ್ರಾಮಸ್ಥರು: ಗುರುವಾರ ರಾತ್ರಿ ವೃದ್ಧೆಯ ಅಂತ್ಯ ಸಂಸ್ಕಾರದಲ್ಲಿ ನೂರಾರು ಜನ ಭಾಗವಹಿಸಿದ್ದರು. ಇದರಿಂದ ಬಹುತೇಕ ಹಿರಿಯರನ್ನು ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲ ಕುಟುಂಬಸ್ಥರಲ್ಲಿ ಆತಂಕ ಆವರಿಸಿದೆ.

Social Plugin