ತೇರದಾಳ ಪಟ್ಟಣದ ಅಂಬೇಡ್ಕರ ನಗರದಲ್ಲಿ ವಾಸಿಸುವ ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳಿವೆ ಎಂದು ಅಲ್ಲಿನ ಮಹಿಳೆಯರು ಹೇಳಿಕೊಂಡರು.

ಸಮಸ್ಯೆಗೆ ಸ್ಪಂದಿಸದಿದ್ದರೆ ಪುರಸಭೆ ಕಚೇರಿ ಮುಂದೆ ಹೋರಾಟ.

ತೇರದಾಳ: ಪಟ್ಟಣದ ಅಂಬೇಡ್ಕರ ನಗರದಲ್ಲಿ ವಾಸಿಸುವ ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳಿಂದ ರೋಸಿ ಹೋಗಿ ಪ್ರತಿಭಟನೆ ಹಾದಿ ತುಳಿಯುವ ಹ0ತದಲ್ಲಿದ್ದಾರೆ ಎಂದು ಗಂಗವ್ವ ನಡುವಿನಕೇರಿ, ರುಕ್ಮವ್ವ ಸಿಂಗೆ, ಭಾಗಿರಥಿ ನಡುವಿನಕೇರಿ, ಹನಮವ್ವ ಮಾಸ್ತಿ, ಬಾಳವ್ವ ಮಾಸ್ತಿ ದುರಿದ್ದಾರೆ. 

  ಈಗಾಗಲೆ ಕೊರೋನಾ ಕಾಟ ಎಲ್ಲಕಡೆ ಹಬ್ಬಿರುವದರಿಂದ ನಮ್ಮ ನಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅವಶ್ಯಕತೆ ಇದೆ. ಆದರೆ ನಾವು ವಾಸಿಸುವ ಪ್ರದೇಶವು ಎಲ್ಲರಿಂದಲೂ ನಿರ್ಲಕ್ಷಕ್ಕೊಳಗಾಗಿದೆ. ಇಡಿ ಪ್ರದೇಶದಲ್ಲಿರುವ ಚರಂಡಿಗಳು ತುಂಬಿ ಗಬ್ಬೆದ್ದು ದುರ್ವಾಸನೆ ಬೀರುತ್ತಲಿವೆ. ಅಲ್ಲದೆ ಮಹಿಳೆಯರಿಗಾಗಿ ನಿರ್ಮಿಸಿದ ಶೌಚಾಲಯಗಳು ಸಹ ನೀರಿನ ಕೊರತೆಯಿಂದ ಅವುಗಳು ಸಹ ಹೇಳಲಾರದ ಪರಿಸ್ಥಿತಿಯಲ್ಲಿವೆ. ಈ ಪ್ರದೇಶದಲ್ಲಿ ವಿದ್ಯುತ್ ಬಲ್ಬಗಳಿಲ್ಲದೆ ಈಡಿ ಪ್ರದೇಶವು ಕತ್ತಲಿನಿಂದ ಕೂಡಿ ರಾತ್ರಿ ಹೊತ್ತು ಹೊರಗಡೆ ತಿರುಗಾಡದಂತಹ ಪರಿಸ್ಥಿತಿ ಬಂದಿದೆ. ಈ ಕಾರಣದಿಂದಾಗಿ ಹಲವಾರು ಜನರು ಶೌಚಾಲಯದವರೆಗೆ ಹೋಗದೆ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿಯೇ ಮಲಮೂತ್ರವನ್ನು ಮಾಡಿ ಈಡಿ ಪ್ರದೇಶದ ವಾತಾವರಣವನ್ನು ಕಲುಷಿತಗೊಳಿಸಿದ್ದಾರೆ. ಇದರಿಂದ ಈ ಮಲೀನಗೊಂಡ ವಾತಾವರಣದಿಂದ ಮನೆಯಲ್ಲಿ ಮಕ್ಕಳು, ವಯೋವೃದ್ದರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಗಳು ನಮ್ಮ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ ನಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸೂಕ್ತ ಕ್ರಮ ಕೈಕೊಳ್ಳಬೇಕು.

ಮಂಗಗಳ ಕಾಟ : ದಿನಬೆಳಗಾಯಿತೆಂದರೆ ಸಾಕಷ್ಟು ಮಂಗಗಳು ನಮ್ಮ ಪ್ರದೇಶದಲ್ಲಿ ಬಂದು ಮಾಳಿಗೆಯಿಂದ ಮಾಳಿಗೆ ಮೇಲೆ ಜಿಗಿದಾಡಿ ಮಾಳಿಗೆಯ ಮೇಲ್ಛಾವಣಿಗಳನ್ನು ಜಕಂ ಗೊಳಿಸುತ್ತಲಿವೆ. ಅದು ಅಲ್ಲದೆ ಇದನ್ನು ತಡೆಯಲು ಹೋದ ಸಾಕಷ್ಟು ಮಕ್ಕಳು ಹಾಗೂ     ಮಹಿಳೆಯರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಲಿವೆ. ಹೀಗಾಗಿ ಈ ವಿಷಯವನ್ನು ನಾವು ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೆ ಇದು ನಮಗೆ ಸಂಬಂಧವಿಲ್ಲ ನೀವು ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿ ಎಂದು ಹೇಳುತ್ತಾರೆ. ಅರಣ್ಯ ಇಲಾಖೆಯವರನ್ನು ಕೇಳಿದರೆ ಇದು ನಮಗೆ ಸಂಬಂಧವಿಲ್ಲ ನೀವು ನಿಮ್ಮ ಪುರಸಭೆಯವರನ್ನ ಸಂಪರ್ಕಿಸಿ ಎಂದು ಹೇಳುತ್ತಾರೆ. ಹೀಗಾಗಿ ಈ ಬಗ್ಗೆ ನಾವೆಲ್ಲ ಕಚೇರಿ ಕಚೇರಿ ಅಲೆದಾಡಿ ಸುಸ್ತಾಗಿ ಹೋಗಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಇತ್ತಕಡೆ ಗಮನಹರಿಸಿ ನಮಗಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ನಾವೆಲ್ಲ ಸೇರಿ ಪುರಸಭೆಯ ಕಚೇರಿಯ ಎದುರುಗಡೆ ಪ್ರತಿಭಟನೆ ಮಾಡುತ್ತೇವೆ ಎಂದು ದಲಿತ ಮುಖಂಡರುಗಳಾದ ದಯಾನಂದ ಕಾಳೆ, ಸಿದ್ದು ದೊಡಮನಿ, ತುಕಾರಾಮ ಸಿಂಗೆ ಹಾಗೂ ಇಲ್ಲಿಯ ಮಹಿಳೆಯರಾದ ಪುತಳವ್ವಾ ಸಿಂಗೆ, ಸುನಂದಾ ಕಾಂಬಳೆ, ದುಂಡವ್ವ ಗೋಟಡಕಿ, ಚ0ದ್ರವ್ವಾ ಮಾಸ್ತಿ, ರಂಗವ್ವಾ ಮಾಸ್ತಿ, ಮಹಾದೇವಿ ನಡುವಿನಕೇರಿ, ನಾಗವ್ವಾ ಸಿಂಗೆ, ಸಾವಿತ್ರಿ ಮಾಸ್ತಿ, ಅನೀತಾ ನಡುವಿನಕೇರಿ ಸೇರಿದಂತೆ ಇನ್ನೂ ಸಾಕಷ್ಟು ಮಹಿಳೆಯರು ಸಂಬಂಧಿಸಿದವರಿಗೆ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.