ಬನಹಟ್ಟಿಯ ಮಾರುಕಟ್ಟೆ ಜನರಿಂದ ತುಂಬಿ ನಿಯಮ ಮುರಿಯುವಲ್ಲಿ ಕಾರಣವಾಗಿದ್ದ ಸಂದರ್ಭ ತಹಶೀಲ್ದಾರ, ಪೌರಾಯಕ್ತ, ಸಿಪಿಐ ಸೇರಿದಂತೆ ಅಧಿಕಾರಿಗಳ ತಂಡ ದಿಢೀರನೆ ಆಗಮಿಸಿ ಜನರನ್ನು ಚದುರಿಸಿದರು.
ರಬಕವಿ-ಬನಹಟ್ಟಿ: ಸಂಪೂರ್ಣ ಲಾಕ್‍ಡೌನ್ ಅನಿವಾರ್ಯ
ಬನಹಟ್ಟಿಯ ಮಾರುಕಟ್ಟೆಯು ಮಾಸ್ಕ್ ಹಾಗು ಸಾಮಾಜಿಕ ಅಂತರವಿಲ್ಲದೆ ಜನತೆ ನಿರ್ಲಕ್ಷ್ಯದಿಂದ ಬೇಕಾಬಿಟ್ಟಿಯಾಗಿ ಸಂಚಾರ ನಡೆಸುತ್ತಿರುವದನ್ನು ಗಮನಿಸಿದ ಅಧಿಕಾರಿಗಳು ದಿಢೀರನೆ ಆಗಮಿಸಿ ಗುಂಪು ಗುಂಪಾಗಿದ್ದ ಜನರನ್ನು ಚದುರಿಸುವಲ್ಲಿ ಯಶಸ್ವಿಯಾದರು.
ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ, ರಬಕವಿ, ಬನಹಟ್ಟಿ, ಹಿಪ್ಪರಗಿ, ಚಿಮ್ಮಡ ಗ್ರಾಮಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸಮುದಾಯದತ್ತ ಹರಡುವ ಭೀತಿ ಭಯಂಕರವಾಗಿದೆ.
ಕಳೆದೆರೆಡು ದಿನಗಳಿಂದ ಯಾವದೇ ಶಂಕೆಯಿಲ್ಲದೆ ವ್ಯಕ್ತಿಗಳಿಗೆ ಸೋಂಕು ತಗುಲುತ್ತಿದ್ದರೆ, ಕೆಲ ಸಾರಿ ಹಾಗು ಐಎಲ್‍ಐ ಕೇಸ್‍ಗಳಿಂದ ಆಸ್ಪತ್ರೆಗಳಿಗೆ ತೆರಳಿದ ನಂತರ ರ್ಯಾಪಿಡ್ ಪರೀಕ್ಷೆಯ ನಂತರ ರೋಗಿಗಳಲ್ಲಿ ಕೊರೊನಾ ಇರುವದು ಪತ್ತೆಯಾಗುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿನ ಸಿಬ್ಬಂದಿಗಳಿಗೂ ಸೋಂಕು ತಗುಲಿದ ಉದಾಹರಣೆಗಳು ತಾಲೂಕಿನಲ್ಲಿ ನಡೆದಿವೆ.
ತೇರದಾಳ, ರಬಕವಿ ಹಾಗು ಬನಹಟ್ಟಿ ಪಟ್ಟಣದ ಮಧ್ಯ ಭಾಗಗಳಲ್ಲಿಯೇ ಕಂಟೇನ್ಮೆಂಟ್ ವಲಯಗಳಾಗಿದ್ದು, ಜನತೆ ತೀವ್ರ ಎಚ್ಚರದಿಂದ ಮಾಸ್ಕ್ ಹಾಗು ಸಾಮಾಜಿಕ ಅಂತರದಿಂದ ಕಾರ್ಯ ನಿರ್ವಹಣೆ ಮಾಡಬೇಕಿದೆ.
ಕೆಲ ಸೋಂಕಿತರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದ್ದರೂ, ಇವರನ್ನು ಬಿಟ್ಟು ಇತರೆಡೆ ಸೋಂಕು ಪಸರಿಸುತ್ತಿರುವದು ಆತಂಕ ಮೂಡಿಸುವಲ್ಲಿ ಕಾರಣವಾಗಿದೆ.
ಅರ್ಧ ಲಾಕ್‍ಡೌನ್: ಈಗಾಗಲೇ ತಾಲೂಕಿನಾದ್ಯಂತ ಅರ್ಧ ಲಾಕ್ ಡೌನ್ ಮುಂದುವರೆದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಅನಿವಾರ್ಯವಾಗಿದೆ.
ಸಂತೆ ತಂದ ಆತಂಕ: ಬನಹಟ್ಟಿಯಲ್ಲಿ ಬೆಳಿಗ್ಗೆಯಿಂದ ನಡೆಯುವ ಸಂತೆಯಲ್ಲಿ ಯಾರೋಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನಜಂಗುಳಿಯಿಂದ ಸೇರುತ್ತಿರುವದು ಕೊರೊನಾ ಭೀತಿಗೆ ಮತ್ತಷ್ಟು ಪುಷ್ಟಿ ನೀಡುವಲ್ಲಿ ಕಾರಣವಾಗುತ್ತಿದೆ. ಸಂತೆ ಬರುವ ಜನತೆಗೆ ಅಧಿಕಾರಿಗಳು ಮನವಿ ಮಾಡಿದರೂ ಸಹಿತ ಸಂಬಂಧವೇ ಇಲ್ಲದಂತೆ ಕಾರ್ಯನಿರ್ವಹಿಸುತ್ತಿರುವದು ಬೇಸರದ ಸಂಗತಿ.

Social Plugin