ಮನೆ ಮನೆ ಮುಸುರೆ ತಿಕ್ಕುವ ಕಾಯಕದಲ್ಲಿರುವ ವಿದ್ಯಾರ್ಥಿ ವರ್ಷಾ ತಳವಾರ ಪಿಯು ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುವದು.
ಮನೆ ಮನೆ ಮುಸುರೆ ತಿಕ್ಕುವ ವಿದ್ಯಾರ್ಥಿಗೆ ಕೆಎಎಸ್ ಕನಸು
*ಬಡತನ ಹಾಸಿ ಹೊಚ್ಚಿ ಮಲಗಿದ ಕುಟುಂಬದ ವಿದ್ಯಾರ್ಥಿ ಕಾಲೇಜಿಗೆ ಪ್ರಥಮ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಜು17: ಕಿತ್ತು ತಿನ್ನುವ ಬಡತನ ತಂದೆ ಗೌಂಡಿ ಕೆಲಸಕ್ಕೆಂದು ತೆರಳಿದರೆ ತಾಯಿ ಅಲ್ಲೋ ಇಲ್ಲೋ ಮನೆ ಮನೆಗೆ ತೆರಳಿ ಭಾಂಡೆ, ಕಸಗುಡಿಸುವ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುವ ಕುಟುಂಬ ಈ ಕುಟುಂಬದ ನೊಗಕ್ಕೆ ಸಹಾಯಕಳಾಗಿ ಬಾಲ್ಯದಿಂದಲೂ ತಾಯಿಯ ಕೆಲಸಕ್ಕೆ ನೆರವಾಗುವದರೊಂದಿಗೆ ಪಾಠ ಕಲಿಯುವ ವಿದ್ಯಾರ್ಥಿ ಸದ್ಯ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುವದು ಅಚ್ಚರಿ ಮೂಡಿಸುವಂಥದ್ದು.
ಬನಹಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಪಿಯು ವಿದ್ಯಾರ್ಥಿ ಗೊಲ್ಲರ ಓಣಿಯ ನಿವಾಸಿ ವರ್ಷಾ ಭೀಮಪ್ಪ ತಳವಾರ ಈ ಬಾರಿಯ ದ್ವಿತೀಯ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕ ಗಳಿಸುವ ಮೂಲಕ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಕನ್ನಡ-96, ಅರ್ಥಶಾಸ್ತ್ರ-97, ಇತಿಹಾಸ-90, ಸಾಮಾನ್ಯ ವಿಜ್ಞಾನ-94, ಸಮಾಜ ಶಾಸ್ತ್ರ-92, ಇಂಗ್ಲೀಷ್-68 ಅಂಕದೊಂದಿಗೆ 537 ಅಂಕ ಪಡೆದಿದ್ದಾಳೆ.
ಅಧಿಕಾರಿಯಾಗುವಾಸೆ: ಬಿ.ಎ. ವ್ಯಾಸಾಂಗದ ನಂತರ ಉನ್ನತ ವ್ಯಾಸಾಂಗ ಮಾಡುವ ಮೂಲಕ ಸರ್ಕಾರಿ ಅಧಿಕಾರಿಯಾಗುವ ಕನಸನ್ನು ಹೊತ್ತಿರುವ ವರ್ಷಾ ಕೆಎಎಸ್ ಪರೀಕ್ಷೆ ಬರೆಯುವ ಬಯಕೆಯಿದೆ. ವ್ಯಾಸಾಂಗಕ್ಕಾಗಿ ಸಹಾಯ ಮಾಡಲಿಚ್ಛಿಸುವವರು 94488-89482 ನಂಬರ ಸಂಪರ್ಕಿಸಿ ಸಹಾಯ ಮಾಡಬಹುದು.

Social Plugin