ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಕಚೇರಿಯು ಸಿಬ್ಬಂದಿಗಳಿಲ್ಲದೆ ಕೊಠಡಿಯಲ್ಲಿ ಖಾಲಿ ಖುರ್ಚಿಗಳಿಂದ ಕೂಡಿದ್ದು ಧೂಳು ತಿನ್ನುತ್ತಿರುವದು.
ನೂತನ ಅಧ್ಯಕ್ಷರಿಗೆ ಸವಾಲಾದ `ಪ್ರಾಧಿಕಾರ ಕಚೇರಿ’
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಜು9: ಈಗಷ್ಟೇ ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ರಬಕವಿಯ ಈಶ್ವರ ನಾಗರಾಳ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಮಸ್ಯೆಗಳ ಸರಮಾಲೆಯೇ ಇವರ ಕೊರಳಿಗೆ ಬಿದ್ದಿದೆ.
ಹೆಸರಿಗೆ ಒಂದು ಕಚೇರಿಯೆಂದರೆ ಕನಿಷ್ಠ ಓರ್ವ ಸಿಬ್ಬಂದಿಯಾದರೂ ಇರಲೇಬೇಕು. ಇಲ್ಲೊಂದು ಸರ್ಕಾರಿ ಇಲಾಖೆಯ ಕಚೇರಿಯು ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಇಲ್ಲಿಯವರೆಗೂ ಅಧಿಕೃತ ಓರ್ವ ಸರ್ಕಾರಿ ಸಿಬ್ಬಂದಿಯೂ ಇಲ್ಲವೆಂದರೆ ನಂಬುತ್ತೀರಾ? ನಂಬಲೇಬೇಕು.
ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಕಚೇರಿಯು ಪ್ರಾರಂಭವಾಗಿ 25 ವರ್ಷಗಳೇ ಗತಿಸಿವೆ. ದಿನಗೂಲಿ ನೌಕರನೋರ್ವ ಕೆಲಸ ನಿರ್ವಹಿಸುತ್ತಿದ್ದರೆ ಇತರೆ ಸಿಬ್ಬಂದಿಗಳೇ ಇಲ್ಲ. ಇದಕ್ಕೆ ಸಂಬಂಧಿಸಿದ ಸದಸ್ಯ ಕಾರ್ಯದರ್ಶಿ ಜಮಖಂಡಿಯಿಂದಲೇ ನಿರ್ವಹಣೆ ಮಾಡುತ್ತ ಈ ಭಾಗದ ಜನತೆಗೆ ದೊರಕಬೇಕಾದ ಸೌಲಭ್ಯಗಳಿಗೆ ಸ್ಪಂದಿಸದೆ ಜನತೆ ತೀವ್ರ ಪರದಾಡುವಂತಾಗಿದೆ.
ಈ ನಗರ ಯೋಜನಾ ಪ್ರಾಧಿಕಾರಕ್ಕೆ ರಬಕವಿ-ಬನಹಟ್ಟಿ-ಹೊಸೂರ-ರಾಮಪೂರ-ಯಲ್ಲಟ್ಟಿ-ಆಸಂಗಿ-ಅಸ್ಕಿ-ಜಗದಾಳ-ನಾವಲಗಿ-ಚಿಮ್ಮಡ-ಹಣಗಂಡಿ-ಹೊಸೂರ-ಯರಗಟ್ಟಿ-ಮದನಮಟ್ಟಿ ಹೀಗೆ ಹಲವಾರು ಗ್ರಾಮಗಳು ವ್ಯಾಪ್ತಿಗೆ ಬರುತ್ತವೆ.
ಈ ಭಾಗದ ಕಟ್ಟಡ ಪರವಾನಿಗೆ, ಕೆಜೆಪಿ, ಅನುಮತಿ ಪತ್ರ ಹೀಗೆ ಹಲವಾರು ಕಾರ್ಯಗಳಿಗೆ ಕಚೇರಿಗೆಂದು ಬಂದರೆ ಉತ್ತರ ಒಂದೇ ಜಮಖಂಡಿ ಕಚೇರಿಗೆ ಹೋಗಿ ಎಂದು.
ಹೆಸರಿಗೆ ಮಾತ್ರ ಕಚೇರಿ: ಇಲ್ಲಿನ ಪ್ರಾಧಿಕಾರ ಕಚೇರಿಯಲ್ಲಿ ಈ ಭಾಗದ ಯಾವದೇ ದಾಖಲಾತಿಗಳಿಲ್ಲ. ಸಂಗ್ರಹ ವ್ಯವಸ್ಥೆಯೂ ಇಲ್ಲ. ಯಾರಾದರೂ ತಮ್ಮ ಕೆಲಸಕ್ಕೆಂದು ಕಚೇರಿಗೆ ತೆರಳಿದರೆ ದೂರದ ಜಮಖಂಡಿಗೆ ಹೋಗಿ ಎಂಬ ಉತ್ತರ ಅಲ್ಲಿನ ದಿನಗೂಲಿ ನೌಕರನದ್ದು, ಹೀಗಿದ್ದಾಗ್ಯೂ ಜನತೆ ಅನಿವಾರ್ಯವಾಗಿ 20 ಕಿ.ಮೀ. ದೂರ ಸಾಗುತ್ತಿದ್ದಾರೆ.
ಹೀಗೆ ಹಲವಾರು ಸಮಸ್ಯೆಗಳನ್ನು ಹೊತ್ತು ನಿಂತಿರುವ ಇಲ್ಲಿನ ನಗರ ಯೋಜನಾ ಪ್ರಾಧಿಕಾರಕ್ಕೆ ಶಾಶ್ವತ ಸಮಸ್ಯೆಗಳ ಶಮನ ಅನಿವಾರ್ಯವಾಗಿದೆ.
-ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin