ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ಶಿರಸ್ತೆದಾರ ಬಸವರಾಜ ಬಿಜ್ಜರಗಿಯವರಿಗೆ ಕಾಂಗ್ರೆಸ್ ಪಕ್ಷದಿಂದ ಮನವಿ ಅರ್ಪಿಸಿ ಎಸ್.ಜಿ. ನಂಜಯ್ಯನಮಠ ಮಾತನಾಡಿದರು. 
ತೈಲ ಬೆಲೆ ಏರಿಕೆ: ಕಾಂಗ್ರೆಸ್ ಪ್ರತಿಭಟನೆ
ರಬಕವಿ-ಬನಹಟ್ಟಿ,ಜು7:ಸತತವಾಗಿ ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. 
ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ ಮನವಿ ಪತ್ರ ಅರ್ಪಿಸಿದ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಜನವಿರೋಧಿ ಕಾರ್ಯಕ್ಕೆ ಜಿಲ್ಲೆಯ ಧ್ವನಿಯಾಗಿ ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಶ್ರೀಮಂತರ ಪರ ಸರ್ಕಾರವಾಗಿರುವ ಬಿಜೆಪಿಯಿಂದ ಜನಸಾಮಾನ್ಯರಿಗೆ ಮೋಸವೆಸಗುವಲ್ಲಿ ಕಾರಣವಾಗಿದೆ ಎಂದು ಆರೋಪಿಸಿದರು.
ಕಚ್ಚಾ ತೈಲ ಬೆಲೆ ಇಳಿಮುಖ ಕಂಡಿದ್ದರೂ ಬೆಲೆ ಹೆಚ್ಚಳದಿಂದ ಸಾವಿರಾರು ಕೋಟಿ ರೂ.ಗಳನ್ನು ಶ್ರೀ ಸಾಮಾನ್ಯರಿಂದ ಅನಾಮತ್ತಾಗಿ ಕಸಿದುಕೊಳ್ಳುವ ವ್ಯವಸ್ಥೆ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ ಎಂದರು.
ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಹೆಚ್ಚಿನ ಬೆಲೆಗೆ ಸಾಮಗ್ರಿಗಳನ್ನು ಖರೀದಿಸುವ ಮೂಲಕ ಲೂಟಿ ಹೊಡೆಯುತ್ತಿರುವ ರಾಜ್ಯ ಸರ್ಕಾರ ಪಿಪಿಇ ಕಿಟ್ ಸೇರಿದಂತೆ ಇತರೆ ಸಾಮಗ್ರಿಗಳಲ್ಲಿ ಭಾರಿ ಹಗರಣ ನಡೆಸಿದೆ. ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಸವಾಲಿಗೆ ಇಲ್ಲಿಯವರೆಗೂ ಸರ್ಕಾರದ ಉತ್ತರವಿಲ್ಲ. ಇದರಿಂದ ತಾವು ಮಾಡಿದ ತಪ್ಪು ತಿಳಿಯುತ್ತದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಕಾಂಗ್ರೆಸ್‍ನಿಂದ ನಡೆಯಲಿದೆ ಎಂದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಕೊರೊನಾ ನೆಪವೊಡ್ಡಿ ಜನಪರ ಧ್ವನಿ ಎತ್ತಲು ವಿಪಕ್ಷಕ್ಕೆ ಅವಕಾಶ ನೀಡುತ್ತಿಲ್ಲ. ದೊಡ್ಡ ರ್ಯಾಲಿಗಳನ್ನು ಬಿಜೆಪಿಯಂದ ನಡೆದರೆ ಅಪರಾಧವಲ್ಲವೆ? ಎಂದು ಪ್ರಶ್ನಿಸಿದರು.
ರೈತ ಹಾಗು ನೇಕಾರ ಸಮುದಾಯಗಳ ಯೋಜನೆಗಳ ಹಳ್ಳ ಹಿಡಿದಿವೆ. ಆತ್ಮಹತ್ಯೆಗಳಂತ ಖೇಧಕರ ಸಂಗತಿಗಳು ನಡೆದರೂ ಆಡಳಿತ ಪಕ್ಷ ಯಾವದೇ ಕ್ರಮ ಕೈಗೊಳ್ಳದಿರುವದು ವಿಪರ್ಯಾಸವೆಂದು ಉಮಾಶ್ರೀ ಬೇಸರ ವ್ಯಕ್ತಪಡಿಸಿದರು.
ನೀಲಕಂಠ ಮುತ್ತೂರ ಮಾತನಾಡಿ, ಪ್ರಧಾನಿ ಮೋದಿ ಅವಧಿಯಲ್ಲಿಯೇ ತೈಲ ಬೆಲೆ ಅತಿ ಹೆಚ್ಚು ದರವನ್ನಾಗಿಸಿದೆ. ದುರಾಡಳಿತದ ಸರ್ಕಾರವಾಗಿರುವ ಬಿಜೆಪಿ ಸರ್ವಾಧಿಕಾರ ನಡೆಸುತ್ತಿರುವದು ಆತಂಕಕಾರಿ ಬೆಳವಣಿಗೆ ಎಂದರು.
ಇದೇ ಸಂದರ್ಭ ಪಕ್ಷದ ಅಧ್ಯಕ್ಷರಾದ ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ರಾಜೇಂದ್ರ ಭದ್ರನ್ನವರ, ರಾಜು ಬಾರಕೋಲ, ಶಂಕರ ಜಾಲಿಗಿಡದ, ಈಶ್ವರ ಚಮಕೇರಿ, ಶ್ರೀಶೈಲ ಮೇಣಿ, ಗೋವಿಂದ ನಿಂಗಸಾನಿ, ದಾನಪ್ಪ ಹುಲಜತ್ತಿ, ಬಸವರಾಜ ಗುಡ್ಡೋಡಗಿ, ಓಂಪ್ರಕಾಶ ಮನಗೂಳಿ, ಬಸವರಾಜ ಶಿರೋಳ, ಪಿಂಟು ಕುಂಬಾರ, ಕಿರಣ ಕರಲಟ್ಟಿ, ಶ್ರೀಶೈಲ ಹಿತ್ತಲಮನಿ, ಬಸವರಾಜ ಬೀಳಗಿ ಉಪಸ್ಥಿತರಿದ್ದರು.

- ನಿಮ್ಮ ಜಾಹೀರಾತುಗಳಿಗಾಗಿ 
   ಸಂಪರ್ಕಿಸಿ  +91 9902523698