ಬನಹಟ್ಟಿಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಪತ್ರಕರ್ತರೊಂದಿಗೆ ಮಾತನಾಡಿದರು.
ಅನ್ಯ ರಾಜ್ಯಗಳಂತೆ ನೇಕಾರರಿಗೆ ರಿಯಾಯ್ತಿ ಮಾಡಿ
ರಬಕವಿ-ಬನಹಟ್ಟಿ,ಜು7: ತೀವ್ರ ಸಂಕಷ್ಟದಲ್ಲಿರುವ ನೇಕಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜವಳಿ ಉದ್ಯಮ ಪುನಶ್ಚೇತನಕ್ಕೆ ಇತರೆ ರಾಜ್ಯಗಳಲ್ಲಿರುವ ರಿಯಾಯ್ತಿಯಂತೆ ರಾಜ್ಯದಲ್ಲಿಯೂ ಸರ್ಕಾರ ನೇಕಾರರಿಗೆ ವಿಶೇಷ ರಿಯಾಯ್ತಿ ಒದಗಿಸಿದ್ದಲ್ಲಿ ನೇಕಾರರ ಬದುಕು ಕೊಂಚ ನೆಮ್ಮದಿಯಿಂದ ಇರಲು ಸಾಧ್ಯವೆಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜವಳಿ ಉದ್ಯಮ ಕೊರೊನಾ ಮಹಾಮಾರಿಗೆ ತತ್ತರಿಸಿ ಹೋಗಿದೆ. ಉಪವಾಸದಲ್ಲಿ ಬಳಲುತ್ತಿರುವ ನೇಕಾರರಿಗೆ ಸರ್ಕಾರ ತಕ್ಷಣವೇ ಸಹಾಯಕ್ಕೆ ಧಾವಿಸಬೇಕಿದೆ. ನೇಯ್ದ ಸೀರೆಗಳನ್ನು ಸ್ವತಃ ಸರ್ಕಾರವೇ ಖರೀದಿಸಬೇಕೆಂದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ನೇಕಾರರಿಗೆ ಸಂಬಂಧಿಸಿದ ಯೋಜನೆಗಳು ಯಾವದೂ ಕೈಗೆಟುಕುತ್ತಿಲ್ಲ. ಸಾಲದ ಸಂಕಷ್ಟದಲ್ಲಿರುವ ನೇಕಾರರ ಸಹಾಯಕ್ಕೆ ಸರ್ಕಾರ ಯಾವದೇ ಮುನ್ಸೂಚನೆ ಕೈಗೊಂಡಿಲ್ಲ. ಮೈಕ್ರೋ ಫೈನಾನ್ಸ ಈಗಲೂ ಮನೆ ಮುಂದೆ ಕುಂತು ಸಾಲಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಮತ್ತೊಂದೆಡೆ ವಿದ್ಯುತ್ ತೆರಿಗೆ ಹೆಚ್ಚಳಗೊಳಿಸಿದ್ದರಿಂದ ನೇಕಾರರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ವಿದ್ಯುತ್ ಬಿಲನ್ನು ರಿಯಾಯ್ತಿ ಅಥವಾ ಮನ್ನಾ ಮಾಡಬೇಕೆಂದು ಉಮಾಶ್ರೀ ಹೇಳಿದರು.
ಇದೇ ಸಂದರ್ಭ ಮಲ್ಲಪ್ಪ ಸಿಂಗಾಡಿ, ಶಂಕರ ಜಾಲಿಗಿಡದ, ಲಕ್ಷ್ಮಣ ದೇಸಾರಟ್ಟಿ ಇದ್ದರು.

- ನಿಮ್ಮ ಜಾಹೀರಾತುಗಳಿಗಾಗಿ 
  ಸಂಪರ್ಕಿಸಿ +91 9902523698