ಬನಹಟ್ಟಿಯ ಮುಖ್ಯ ಬೀದಿಯಲ್ಲಿ ಕಬ್ಬಿಣದ ಕಾರ್ಯದಲ್ಲಿ ತೊಡಗಿರುವ ಅಲೆಮಾರಿ ಕಮ್ಮಾರ ಕುಟುಂಬಗಳು.
`ಭಿಕ್ಷೆ’ ಬೇಡುವ ಸ್ಥಿತಿಯಲ್ಲಿ `ಕಮ್ಮಾರರು’
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಜು30: ಅಕ್ಷರಸಹ ಅಲೆಮಾರಿ ಜನಾಂಗ. ಯಾವ ಊರಿನಲ್ಲಿರುವರೋ ಅದೇ ಅವರ ಸ್ವಂತ ಊರು. ತಮ್ಮ ಸರಕು ಹೊತ್ತು ತಂದ ವಾಹನವೇ ಅವರ ಸ್ವಂತ ಮನೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವಾರು ವರ್ಷಗಳಿಂದ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದ ಕಮ್ಮಾರ ಕುಟುಂಬಗಳು ಇದೀಗ ಕೊರೊನಾ ಹೊಡೆತಕ್ಕೆ ಭಿಕ್ಷೆ ಬೇಡುವ ಪ್ರಸಂಗ ದುರದೃಷ್ಟಕರವಾದುದು.
ಇದೀಗ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಅಲ್ಲಲ್ಲಿ ಕಂಡು ಬರುವ ಕಮ್ಮಾರರು ಕಾದ ಕಬ್ಬಿಣ ಬದಿಡು ಕುಲುಮೆಯಿಂದಲೇ ಜೀವನದ ಸಾಗಿಸುವ ಕಮ್ಮಾರರ ಕುಲುಮೆಗೆ ಕೊರೊನಾ ಸಂಕಟಪ್ರಾಯವಾಗಿದೆ.
ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಸೇರಿದಂತೆ ಇತರೆ ಬೆಳೆಗಳ ಕಟಾವಿನ ಸಮಯ ಸಮೀಪಿಸಿದೆ ತಮ್ಮ ಬಳಿ ಇರುವ ಕೃಷಿ ಪರಿಕರಗಳನ್ನು ಕಮ್ಮಾರರಿಗೆ ನೀಡಿ ಹರಿತ ಮಾಡಿಸಿಕೊಳ್ಳಲು ಕಮ್ಮಾರನ ಸಹಾಯ ಬೇಕೆ ಬೇಕು.
ಚಕ್ಕಡಿ ಗಾಲಿ, ಕುಂಟೆ ಹೊಡೆಯುವ ಫಲಗ, ನೇಗಿಲು ಕೊಡ್ಲಿ, ಕುರುಪಿ, ಪಿಕಾಶಿ ಹೊಸದಾಗಿ ಸಿದ್ಧಪಡಿಸುವದು ಮತ್ತು ಅವುಗಳನ್ನು ದುರಸ್ಥಿ ಮೊನಚು ಮಾಡಿಕೊಡುವ ಕೆಲಸವು ಜೋರು ಆದರೆ ಪ್ರಸಕ್ತ ವರ್ಷ ರೈತರು ಮನೆಯಿಂದ ಹೊರಬಂದಿಲ್ಲ. ಇದರಿಂದ ಕಮ್ಮಾರರಿಗೆ ಕೆಲಸವಿಲ್ಲ.
ನಿತ್ಯ 400 ರಿಂದ 500 ರೂ.ಗಳವರೆಗೆ ದುಡಿಮೆ ಮಾಡಿಕೊಳ್ಳುತ್ತಿದ್ದೇವು. ಇದೀಗ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರೂ ನಮ್ಮತ್ತ ಸುಳಿಯುತ್ತಲೇ ಇಲ್ಲ. ಹೀಗಾದರೆ ಭಿಕ್ಷೆ ಬೇಡುವ ಸ್ಥಿತಿ ಒದಗುವದು ನಿಶ್ಚಿತವೆಂಬ ಆತಂಕದಲ್ಲಿ ಕಮ್ಮಾರಿಕೆಯ ಕುಟುಂಬಗಳ ಕಳವಳವಾಗಿದೆ.

Social Plugin