ಯಾರಿಗೂ ನೋವುಂಟು ಮಾಡಲಾರೆ
ರಬಕವಿ-ಬನಹಟ್ಟಿ,ಜು30: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನನಗೆ ನೀಡಿರುವ ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸ್ಥಾನವನ್ನು ನೇಕಾರ ಸಮುದಾಯಕ್ಕೆ ನೀಡಬೇಕೆಂದು ತಿಳಿಸಿದ್ದು ನಿಜ. ಆದರೆ ವರಿಷ್ಠರಿಗೆ ಮುಜುಗರವಾಗುವಂತೆ ಎಂದಿಗೂ ವರ್ತಿಸುವದಿಲ್ಲ. ಇನ್ನೊಂದು ವಾರ ಸಮಯದ ನಂತರ ಸ್ಪಷ್ಟ ನಿರ್ಧಾರ ತಿಳಿಸುವದಾಗಿ ತೇರಾಳ ಶಾಸಕ ಸಿದ್ದು ಸವದಿ ಪತ್ರಿಕೆಗೆ ತಿಳಿಸಿದರು.
ಕೈಮಗ್ಗ ನೇಕಾರರು ಒತ್ತಾಯಪೂರ್ವಕವಾಗಿ ನನ್ನನ್ನೇ ಮುಂದುವರೆಯಬೇಕೆಂಬ ಒತ್ತಾಸೆಯಾಗಿದೆ. ಆದರೆ ಸ್ಥಳೀಯ ಮುಖಂಡರೋರ್ವರಿಗೆ ಸ್ಥಾನ ದೊರಕಬೇಕೆಂಬ ಉದ್ದೇಶ ನನ್ನದಾಗಿದೆ ಎಂದರು.
ನೇಕಾರರಿಗೆ ಜಮೆಯಾಗುತ್ತಿದೆ: ಕೊರೊನಾ ಸಂಕಷ್ಟದಲ್ಲಿ ರಾಜ್ಯ ಸರ್ಕಾರದ `ನೇಕಾರ ಸಮ್ಮಾನ್ ಯೋಜನೆ’ಗೆ ಸಂಬಂಧಿಸಿದಂತೆ ಪ್ರತಿ ನೇಕಾರ ಕುಟುಂಬಕ್ಕೆ 2 ಸಾವಿರ ರೂ.ಗಳಷ್ಟು ಹಣ ಜಮಾ ಆಗುತ್ತಿದೆ. ಸದ್ಯ 10 ಸಾವಿರ ನೇಕಾರರಲ್ಲಿ 3 ಸಾವಿರ ಕುಟುಂಬಗಳಿಗೆ ಬ್ಯಾಂಕ್ ಖಾತೆ ಮೂಲಕ ಜಮೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 6 ಸಾವಿರ ನೇಕಾರ ಘಟಕಗಳಿದ್ದು, ಇದರಲ್ಲಿ 5.5 ಸಾವಿರ ಯುನಿಟ್‍ಗಳ ಮಾಹಿತಿ ಜವಳಿ ಇಲಾಖೆಗೆ ತಲುಪಿದೆ. ಇನ್ನುಳಿದ ಯುನಿಟ್‍ಗಳ ನೇಕಾರರನ್ನೂ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.
ಕೆಲವರಿಗೆ ಹಣ ಜಮೆಯಾಗುವಲ್ಲಿ ವಿಳಂಬಕ್ಕೆ ಕಾರಣ ತಾಂತ್ರಿಕ ಸಮಸ್ಯೆ ಅಡ್ಡಿಯಾಗಿದೆ. ನೇಕಾರ ಉಳಿತಾಯ ಖಾತೆಗೆ ಸಂಬಂಧ ಆಯಾ ಬ್ಯಾಂಕ್‍ಗಳಲ್ಲಿ ಸಮರ್ಪಕವಾಗಿ ಆಧಾರ್ ಲಿಂಕ್ ಸೇರಿದಂತೆ ಇತರೆ ಕಾಗದಗಳನ್ನು ಒದಗಿಸದ ಕಾರಣ ಚಾಲ್ತಿಯಲ್ಲಿಲ್ಲ. ಅಂಥವರು ತಕ್ಷಣವೇ ಬ್ಯಾಂಕ್‍ಗಳಿಗೆ ತೆರಳಿ ಖಾತೆಗಳನ್ನು ಮರುಪ್ರಾರಂಭಿಸಿಕೊಳ್ಳಲು ಶಾಸಕ ಸವದಿ ಮನವಿ ಮಾಡಿದರು.

Social Plugin