ಸೇವೆ ನಿಲ್ಲಿಸಿದ ವೈದ್ಯರು: ಹಿರಿಯ ಜೀವಿಗಳು ಕಂಗಾಲು
ರಬಕವಿ-ಬನಹಟ್ಟಿ,ಜು30: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಕೊರೊನಾ ತನ್ನ ರುದ್ರನರ್ತನ ಪ್ರದರ್ಶಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಖಾಸಗಿ ದವಾಖಾನೆಗಳ ವೈದ್ಯರು ಕಳೆದೆರಡು ದಿನಗಳಿಂದ ತಮ್ಮ ಸೇವೆ ಸಂಪೂರ್ಣ ನಿಲ್ಲಿಸಿದ್ದರ ಹಿನ್ನಲೆ ಐಎಲ್‍ಐ ಹಾಗು ಸಾರಿ ರೋಗಿಗಳು ಕಂಗಾಲಾಗಿದ್ದು, ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿದ್ದಾರೆ.
ಕೊರೊನಾ ರೋಗದ ಭಯದಲ್ಲಿ ವೈದ್ಯರು ಪಿಪಿಇ ಕಿಟ್ ಸೇರಿದಂತೆ ಮುಂಜಾಗ್ರತೆ ವಹಿಸುವ ಮೂಲಕ ರೋಗಿಗಳ ಆರೈಕೆಗೆ ಮುಂದಾಗಬೇಕಾಗಿರುವದು ಮಾನವೀಯ ಕಾರ್ಯ ಬದಲಾಗಿ ತೀವ್ರ ನಿರ್ಲಕ್ಷ್ಯದಿಂದ ಯಾವದೇ ಚಿಕಿತ್ಸೆ ಒದಗಿಸದೆ ದವಾಖಾನೆಗಳಿಗೆ ಕೀಲಿ ಜಡಿದಿರುವದು ವಿಪರ್ಯಾಸದ ಸಂಗತಿ.
ಸಕ್ಕರೆ ಕಾಯಿಲೆ, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳಿಂದ ಖಾಯಂ ನರಳುತ್ತಿರುವ ಹಿರಿಯ ವಯಸ್ಸಿನ ಜೀವಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಇಡೀ ತಾಲೂಕಿನಾದ್ಯಂತ ಬೆರಳಣಿಕೆಯಷ್ಟು ಮಾತ್ರ ಆಸ್ಪತ್ರೆಗಳು ತೆರೆದಿದ್ದರೆ ಇನ್ನುಳಿದ ನೂರಾರು ಆಸ್ಪತ್ರೆಗಳ ವೈದ್ಯರು ಸೇವೆ ಸ್ಥಗಿತಗೊಳಿಸಿದ್ದಾರೆ.
ಸರ್ಕಾರ ತಕ್ಷಣವೇ ಮಧ್ಯಸ್ಥಿಕೆ ವಹಿಸಿ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ಖಾಸಗಿ ವೈದ್ಯರನ್ನು ಮನವೊಲಿಸಿ ಸೇವೆಗೆ ಮುಂದಾಗುವಂತೆ ಮಾಡಬೇಕಾದ ಅನಿವಾರ್ಯತೆ ಇದೆ.
ನಿರ್ಲಕ್ಷ್ಯಬೇಡ: ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಇತರೆ ಕಾಯಿಲೆಗಳಿಂದ ನರಳುತ್ತ ಮನೆಯಲ್ಲಿಯೇ ಕಾಲಹರಣ ಮಾಡಬೇಡಿ. ಬದಲಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಇದರಿಂದ ಸೂಕ್ತ ಪರಿಹಾರ ದೊರಕುವದಲ್ಲದೆ, ಕೋವಿಡ್-19 ಪರೀಕ್ಷೆಗೂ ಅನುಕೂಲವಾಗಿದೆ. ಇತ್ತೀಚಿನ ದಿನಗಳ ವರದಿ ಪ್ರಕಾರಣ ವಯಸ್ಕರರು ಮನೆಯಲ್ಲಿಯೇ ಅನಾರೋಗ್ಯ ಕಂಡರೂ ನಿರ್ಲಕ್ಷ್ಯದಿಂದ ಇರುವದು ಬೆಳಕಿಗೆ ಬರುತ್ತಿದೆ. ಸಮಸ್ಯೆ ಎದುರಿಸುವ ಬದಲು ಸಂಶಯವಾದಲ್ಲಿ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ತಹಶೀಲ್ದಾರ ಪ್ರಶಾಂತ ಚನಗೊಂಡ ಮನವಿ ಮಾಡಿದ್ದಾರೆ.

Social Plugin