ರಬಕವಿಯಲ್ಲಿ ಕೊರೊನಾ ಭೀತಿ ಎದುರಾಗುತ್ತಿರುವ ಹಿನ್ನಲೆ ಅಧಿಕಾರಿಗಳು ಕಟ್ಟೆಚ್ಚರ ವಹಿಸುತ್ತ ಸೀಲ್‍ಡೌನ್ ಮಾಡುತ್ತಿರುವದು.

ಮುಂಗಾರಿನ ಬೆನ್ನಲ್ಲೇ ಐಎಲ್‍ಐ, ಸಾರಿ ಕೇಸ್ ಹೆಚ್ಚಳ
*ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕೊರೊನಾ ತಾಂಡವ
ರಬಕವಿ-ಬನಹಟ್ಟಿ,ಜು19: ಬೇಸಿಗೆಯ ಬಿರು ಬಿಸಿಲ ದಿನಗಳಿಂದ ಚಳಿಯ ವಾತಾವರಣಕ್ಕೆ ಬದಲಾಗುವ ಹವಾಮಾನದ ವೇಳೆಯೇ ಐಎಲ್‍ಐ, ಹಾಗು ಸಾರಿಯಂಥ ಆರೋಗ್ಯ ಲಕ್ಷಣಗಳು ಹೆಚ್ಚಾಗಿ ಕಾಣಿಸುತ್ತಿವೆ.
ತಾಲೂಕಿನಲ್ಲಿ ಮುಂಗಾರು ಚುರುಕುಗೊಂಡಿದ್ದು ವಿಷಮಶೀತ ಜ್ವರ ಹಾಗು ಉಸಿತಾಟದ ತೊಂದರೆ(ಸಾರಿ)ಯಿರುವ ವ್ಯಕ್ತಿಗಳಿಗೆ ಆರೋಗ್ಯದ ಸಮಸ್ಯೆ ಎದುರಿಸಿ ಆಸ್ಪತ್ರೆಗೆ ದಾಖಲಾದವರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವದು ಆತಂಕ ಹೆಚ್ಚಿಸಿದೆ.
ನೆರೆಯ ರಾಜ್ಯಗಳಿಂದ ಆಗಮಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ, ಸ್ಥಳೀಯವಾಗಿ ಕೊರೊನಾ ಸೋಂಕು ಹರಡುವಿಕೆ ತೀವ್ರಗೊಂಡಿದೆ. ಸಮುದಾಯ ಹಂತದಲ್ಲಿ ಸೋಂಕು ಹರಡುತ್ತಿರುವದು ಆಡಳಿತಕ್ಕೆ ಆತಂಕ ತಂದಿದೆ. ಹತ್ತು ಹಲವು ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ಜಿಲ್ಲೆಯ ಜನರ ಸ್ಪಂದನೆ ಕೊರತೆ ಇದೀಗ ಸಮಸ್ಯೆ ಸೃಷ್ಟಿಸಿದೆ.
ಸದ್ಯ ಮಹಾಲಿಂಗಪೂರನಲ್ಲಿ ಲಾಕ್‍ಡೌನ್ ಜಾರಿಮಾಡಿದರೂ ಯಶಸ್ವಿ ಕಂಡಿಲ್ಲ. ಇದೀಗ ತೇರದಾಳ ಹಾಗು ರಬಕವಿ ಪಟ್ಟಣಗಳ ಜನತೆ ಒಂದು ವಾರ ಕಾಲ ಸ್ವಯಂಪ್ರೇರಿತವಾಗಿ ಲಾಕ್‍ಡೌನ್ ಘೋಷಣೆ ವ್ಯಕ್ತಪಡಿಸಿದ್ದಾರೆ. ಇದೀಗ ತಾಲೂಕಿನ ಎಲ್ಲ ಗ್ರಾಮ ಹಾಗು ಪಟ್ಟಣಗಳ ಪ್ರಮುಖ ಪ್ರದೇಶಗಳನ್ನು ಆವರಿಸಿರುವ ಹಿನ್ನಲೆ ಜನತೆ ಮಾಸ್ಕ್, ಸಾಮಾಜಿಕ ಅಂತರದಿಂದ ತೀವ್ರ ಕಟ್ಟೆಚ್ಚರದಿಂದ ಇರಬೇಕಿದೆ.