ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು.
ರಬಕವಿ-ಬನಹಟ್ಟಿಯಲ್ಲಿ ಕೋವಿಡ್ ಕೇಂದ್ರ ಸ್ಥಾಪನೆ
*ಪ್ರವಾಹ ಭೀತಿ ಎದುರಿಸಲು ಸನ್ನದ್ಧ
ರಬಕವಿ-ಬನಹಟ್ಟಿ,ಜು17: ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ವೇಗವಾಗಿ ಮೆರೆಯುತ್ತಿರುವ ಹಿನ್ನಲೆ ತಾಲೂಕಾಡಳಿತ ಇದನ್ನು ಕಟ್ಟಿ ಹಾಕಲು ಸಕಲ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಇದೀಗ ಕೋವಿಡ್ ಆಸ್ಪತ್ರೆಯನ್ನು ರಬಕವಿ-ಬನಹಟ್ಟಿ ತಾಲೂಕಿಗೆ ಸಂಬಂಧ ರಬಕವಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 60 ಹಾಸಿಗೆಗಳ ಕೊರೊನಾ ಕಾಳಜಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಸ್ಪಷ್ಟಪಡಿಸಿದರು.
ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನತೆ ಯಾವದೇ ಕ್ಷಣದಲ್ಲಿಯೂ ನಿರ್ಲಕ್ಷ್ಯವಹಿಸುವಂತಿಲ್ಲ. ಗುಂಪುಗೂಡುವದು, ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವದರ ಜೊತೆಗೆ ಮಾಸ್ಕ್, ಸ್ಯಾನಿಟೈಜರ್ ಕಡ್ಡಾಯವಾಗಿಲೆಂದು ಸವದಿ ಮನವಿ ಮಾಡಿದರು.
ಮದುವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ನೋಂದಣಿ ಇಲಾಖೆಗೆ ತೆರಳಿ ತಮ್ಮ ಕಾನೂನಾತ್ಮಕ ಕಾರ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಶುಭ ಹಾಗು ಅಶುಭ ಕಾರ್ಯಕ್ರಮಗಳಲ್ಲಿ ಜನಜಂಗುಳಿಯಾಗದಂತೆ ಕನಿಷ್ಠ 20 ರಿಂದ 30 ಜನರೊಂದಿಗೆ ಕಾರ್ಯಗಳನ್ನು ನಡೆಸಬೇಕೆಂದರು.
ಮಳಿಗೆ ಜಪ್ತಿ: ತಾಲೂಕಿನಾದ್ಯಂತ ವ್ಯಾಪಾರ ನಿರ್ವಹಿಸುವ ಅಂಗಡಿಕಾರರು ನಿಯಮದಂತೆ ಸ್ಯಾನಿಟೈಜರ್ ಬಳಕೆ ಕಡ್ಡಾಯ, ಆಗಮಿಸುವ ಗ್ರಾಹಕರನ್ನು ಒಳಗೆ ಪ್ರವೇಶಪಡಿಸುವಂತಿಲ್ಲ. ಎಲ್ಲವನ್ನೂ ಪಾಲಿಸಬೇಕಿದೆ. ಒಂದು ವೇಳೆ ನಿರ್ಲಕ್ಷ್ಯವಾದಲ್ಲಿ ಅಂತಹ ಮಳಿಗೆಯನ್ನು ಕಂದಾಯ ಇಲಾಖೆ ಜಪ್ತಿ ಮಾಡಲಿದೆ ಎಂದು ಖಡಕ್ ಸಂದೇಶವನ್ನು ರವಾನಿಸಿದರು.
ಪ್ರವಾಹ ಎದುರಿಸಲು ಸಿದ್ಧ: ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹದ ಯಾವದೇ ಮುನ್ಸೂಚನೆಗಳಿಲ್ಲ. ಹಿಪ್ಪರಗಿ ಜಲಾಶಯದಲ್ಲಿ 21 ಸಾವಿರ ಕ್ಯುಸೆಕ್ ನೀರಿನ ಪ್ರಮಾಣವಿದ್ದು, 3 ಲಕ್ಷದವರೆಗೂ ಯಾವದೇ ಸಮಸ್ಯೆಯಾಗದು ಎಂದು ಸಿದ್ದು ಸವದಿ ತಿಳಿಸಿದರು.
ಕಳೆದ ವರ್ಷ ಪ್ರವಾಹ ಸಂದರ್ಭ ಹಲವಾರು ಗ್ರಾಮಗಳು ಜಲಾವೃತಗೊಂಡ ನೋವು ಇನ್ನೂ ಇದೆ. ಆ ಸಂದರ್ಭ ಕಾರ್ಯನಿರ್ವಹಿಸಿದ ಅನೇಕ ಇಲಾಖೆಗಳ ಕಾರ್ಯದಿಂದ ಪೂರ್ವ ತಯಾರಿಯಲ್ಲಿದ್ದು, ಆಗಿನ ತಾತ್ಕಾಲಿಕ ಶೆಡ್‍ಗಳನ್ನು ತೆರವುಗೊಳಿಸಿಲ್ಲ. ಯಾರೂ ಹೆದರುವ ಕಾರಣವಿಲ್ಲ. ಸಂದಿಗ್ಧ ಪರಿಸ್ಥಿತಿ ಎದುರಾದರೆ ತಾಲೂಕಾಡಳಿತದಿಂದ ಸರಳ ರೀತಿಯ ಕಾರ್ಯಗಳು ಸುಲಭವಾಗಿ ನಡೆಯತ್ತವೆ ಎಂದು ಧೈರ್ಯದ ಮಾತುಗಳನ್ನಾಡಿದರು.
ತಹಶೀಲ್ದಾರ ಪ್ರಶಾಂತ ಚನಗೊಂಡ, ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಬನಹಟ್ಟಿ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ತೇರದಾಳ ಠಾಣಾಧಿಕಾರಿ ವಿಜಯ ಕಾಂಬಳೆ, ಮಹಾಲಿಂಗಪುರ ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ಕಮತಗಿ, ತೇರದಾಳ ಪುರಸಭೆ ಮುಖ್ಯಾಧಿಕಾರಿ ಬಸವರಾಜ ದಡ್ಡಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಉಪಸ್ಥಿತರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin