◆ 'ಒಳಿತು ಮಾಡು ಮನುಸಾ ' - ಎಂಬ ಹಾಡನ್ನು ಬರೆದ ಕವಿ ಯಮನನ್ನು ಸ್ವಾಗತಿಸುತ್ತಿರುವುದೇಕೆ?
● ಮಾನ-ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಲು ಹೊರಟರಾ ಮನುಕುಲಕ್ಕೆ ಪಾಠ ಮಾಡಿದ ಋಷಿ? ●
^^^^^^^^^^^^^^^^^^^^^^^^^^^^^^^^^^^^^^^^^^^^^^^^
◆ 'ಒಳಿತು ಮಾಡು ಮನುಸಾ ನೀ ಇರೋದು ಮೂರು ದಿವಸಾ' - ಎಂಬ ಜನಪ್ರಿಯ ಹಾಡನ್ನು ಬರೆದು ಜಗದ್ವಿಖ್ಯಾತರಾದ ಋಷಿ ಎಂಬ ಹೆಸರಿನ ಸಿನಿಮಾ ನಿರ್ದೇಶಕ ನನಗೊಂದು ಮೆಸೇಜ್ ಮಾಡಿದರು : 'ಜವರಾಯನ ಸ್ವಾಗತಕ್ಕಾಗಿ ಕಾದಿದೆ ಮನ...' - ಓದಿ ಗಾಬರಿಯಾಯಿತು. ಸಾಯುವಂಥಾ ದುಃಸ್ಥಿತಿ ಈ ಪುಣ್ಯಾತ್ಮನಿಗೆ ಹೇಗೆ ಬಂತಪ್ಪಾ ಎಂದು ಯೋಚಿಸುತ್ತಾ ಕುಳಿತಾಗ ಮಿದುಳಲ್ಲಿ ಹೆಪ್ಪುಗಟ್ಟಿದ್ದ ಹಳೆಯ ದೃಶ್ಯವೊಂದು ಸ್ಪಷ್ಟವಾಗುತ್ತಾ ಹೋಯಿತು...
ಆಕೆ ಚಪ್ಪಲಿ ಹಿಡಿದು ಆತನನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾಳೆ. ಆಕೆಯ ಈ ಅನಿರೀಕ್ಷಿತ ಅಟ್ಯಾಕ್'ನಿಂದ ತಪ್ಪಿಸಿಕೊಳ್ಳಲು ಆತ ವ್ಯರ್ಥ ಪ್ರಯತ್ನ ಮಾಡುತ್ತಾನೆ...ಅದೊಂದು ಪ್ರೆಸ್ ಮೀಟ್. ಚಿತ್ರರಂಗದ ಎಲ್ಲಾ ರಾಗ-ದ್ವೇಷಗಳಿಗೆ ಸಾಕ್ಷಿಯಾಗಿದ್ದ 'ಗ್ರೀನ್ ಹೌಸ್' ಈಗ ಈ ಘಟನೆಗೂ ಸಾಕ್ಷಿಯಾಗಿದೆ. ಆ ಸಿನಿಮಾದ ಹೆಸರು : 'ಕೋಟ್ಲ್'ಲ್ಲಪ್ಪೋ ಕೈನ' ಇರಬೇಕು. ಆ ನಟಿಯ ಹೆಸರು : ನಯನಾ ಕೃಷ್ಣ, ಆ ನಿರ್ದೇಶಕನ ಹೆಸರು : ಋಷಿ! ಪತ್ರಕರ್ತರ ಮುಂದೆ ಮಾನ-ಮರ್ಯಾದೆ ಹರಾಜಾದ ಮೇಲೆ ಕೇಸು ಪೊಲೀಸ್ ಸ್ಟೇಶನ್'ಗೂ ತಲುಪಿತು... ಮುಂದೇನಾಯಿತೋ ಗೊತ್ತಿಲ್ಲ. ಆದರೆ ಈ ಘಟನೆಗೆ ಕಾರಣವಾದದ್ದು 8 ಲಕ್ಷದ ಮೊತ್ತ! ಈ ಅಮೌಂಟನ್ನು ಆಕೆ ಋಷಿಯ ಪ್ರೊಡಕ್ಷನ್'ಗೆ ಹಾಕಿದ್ದಳು. ಸಾಲದ ರೂಪದ ಮೊತ್ತವದು. 'ಈಗಲೇ ವಾಪಸ್ಸು ಕೊಡು' ಎನ್ನುವುದು ಆಕೆಯ ಕೋರಿಕೆ. 'ನೀನು ಪಾರ್ಟ್ನರ್, ನಾನೇಕೆ ಈಗಲೇ ದುಡ್ಡು ಕೊಡಬೇಕು?' ಎನ್ನುವುದು ಈತನ ವಾದ. ಈ ವಾದ-ವಿವಾದವೇ ಚಪ್ಪಲಿ ಏಟಿಗೆ ಕಾರಣವಾಗಿ ಋಷಿಯ ಮಾನ-ಮರ್ಯಾದೆ ಹರಾಜಾದದ್ದು!
ಮುಂದಿನ ಒಂದೆರಡು ವರ್ಷಗಳಲ್ಲೇ ಋಷಿ 'ಒಳಿತು ಮಾಡು ಮನುಸಾ ನೀ ಇರೋದು ಮೂರು ದಿವಸಾ' ಹಾಡನ್ನು ಬರೆದರು, ಅಷ್ಟೇ. ಅದ್ಯಾವ ಮಟ್ಟದ ಖ್ಯಾತಿಯೋ ಗೊತ್ತಿಲ್ಲ, ಋಷಿ ಎಂಬ ನಿರ್ದೇಶಕ ಪೊರೆ ಕಳಚಿಕೊಂಡು ಎದ್ದು ನಿಂತು ಬಿಟ್ಟ! ಒಂದೇ ಒಂದು ಹಾಡಿನಿಂದಾಗಿ ಋಷಿ ಹಿಂದಿನ ಎಲ್ಲಾ ಪಾಪಗಳಿಂದ ಮುಕ್ತರಾದರು ಎಂದು ನಾನು ಭಾವಿಸಿಕೊಳ್ಳುತ್ತಿರುವಂತೆಯೇ ಬಂದದ್ದು ಇದೇ ಮೆಸೇಜ್ : 'ಜವರಾಯನ ಸ್ವಾಗತಕ್ಕಾಗಿ ಕಾಯುತ್ತಿದೆ ಮನ...'
ಆ ಹೊತ್ತಿನಲ್ಲಿ ಉಜಿರೆಯಲ್ಲಿ ಭಯಂಕರ ಮಳೆ. ಋಷಿ ಮಾನ್ವಿಯಲ್ಲೆಲ್ಲೋ ಬೈಕ್'ನಲ್ಲಿದ್ದರು. ಮೊಬೈಲ್'ನಲ್ಲಿ ಅಸ್ಪಷ್ಟವಾಗಿ ಆತನ ಮಾತು ಕೇಳುತ್ತಿತ್ತು : 'ಸುಮಾರು ಒಂದು ಕೋಟಿಯ ಸಾಲ ಗುರುಗಳೇ. ಅದು 'ONE WAY' ಚಿತ್ರಕ್ಕೆ ಸಂಬಂಧಿಸಿದ್ದು. ನೀವು ಹೇಳೋದು ನಿಜ, ಒಂದೇ ಒಂದು ಹಾಡಿನಿಂದ ನನ್ಗೆ ಸಿಕ್ಕ ಜನಪ್ರಿಯತೆಯ ಮುಂದೆ ಈ ಒಂದು ಕೋಟಿ ಯಾವ ಲೆಕ್ಕ? ಆದ್ರೆ ಸಾಲ ಕೊಟ್ಟೋರ್ಗೆ ನನ್ನ ಖ್ಯಾತಿ ಯಾಕೆ ಬೇಕು? ಅವ್ರಿಗೆ ಬೇಕಾಗಿರೋದು ರೊಕ್ಕ ಅಷ್ಟೇ! ಸುಸ್ತು ಹೊಡೆದು ಹೋದೆ ಗುರುಗಳೇ. ಸಾಲ ತೀರಿಸದಿದ್ರೆ ಅವರೂ ಬಿಡೋದಿಲ್ಲ, ಇವರೂ ಬಿಡೋದಿಲ್ಲ. ಫೇಸ್ ಬುಕ್'ನಲ್ಲಿ ಮಾನ-ಮರ್ಯಾದೆ ಹರಾಜಾಕುತ್ತಿದ್ದಾರೆ. ಸಿಕ್ಕ ಸಿಕ್ಕಲ್ಲಿ ಉಗೀತಾರೆ. ಕಂಡ ಕಂಡಲ್ಲಿ ಅಟ್ಯಾಕ್ ಮಾಡ್ತಾರೆ. ಹೀಗಾಗಿ ನನ್ನ ಸ್ವಂತ ಊರಾದ ಮಾನ್ವಿಗೆ ಬಂದಿದ್ದೇನೆ ಗುರುಗಳೇ. ಇಲ್ಲಿ ಒಂದಷ್ಟು ಜಮೀನಿದೆ ಅಂತ ಇತ್ತೀಚೆಗೆ ಗೊತ್ತಾಯ್ತು. ಅಪ್ಪನಿಂದ ಅಮ್ಮನಿಗೆ ಬಂದ 8 ಎಕರೆ ಜಮೀನು. ಎಕರೆಗೆ 15 ಲಕ್ಷ ಸಿಗಬಹುದು. ಸಾಲ ತೀರಿಸಿದ್ರೆ ಸಾಕು, ಹೇಗೋ ಬದುಕಿ ಕೊಳ್ಳುತ್ತೀನಿ. ಆ ಹಾಡಿನ ಯಶಸ್ಸನ್ನು ಎಂಜೋಯ್ ಮಾಡಲಿಕ್ಕೂ ಬಿಡದ ಮಂದಿ ಮುಂದೆ ತಲೆಯೆತ್ತಿ ಬಾಳಬೇಕು ಗುರುಗಳೇ...ಇದೇ ವ್ಯವಹಾರಕ್ಕಾಗಿ ತಾಲೂಕಾಫೀಸ್'ಗೆ ಬಂದಿದ್ದೆ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ. ನೆಮ್ಮದಿ ಬೇಕು ಗುರುಗಳೇ. ಅದಿಲ್ಲವಾದ್ರೆ ಬದುಕಿಯೂ ಸತ್ತಂತೆ. ಈ ಕಾರಣಕ್ಕೇ ನಿಮಗೆ ಅಂಥಾದ್ದೊಂದು ಮೆಸೇಜ್ ಮಾಡಿದ್ದು : 'ಜವರಾಯನ ಸ್ವಾಗತಕ್ಕಾಗಿ ಕಾದಿದೆ ಮನ' ಅಂತ! ಆದ್ರೆ ಈಗ ನಾನು ಮಾಡುತ್ತಿರುವುದು ಬದುಕುವ ಪ್ರಯತ್ನ. ಈ ಸಾರಿ ನಾನು ಸೋಲೋದಿಲ್ಲ ಗುರುಗಳೇ. ಸೋತು ಸೋತು ಸಾಕಾಗಿದೆ, ಗೆದ್ದು ತಲೆಯೆತ್ತಿ ನಿಲ್ಲ ಬೇಕು. ನಿಮ್ಮ ಸಪೋರ್ಟ್ ಬೇಕು ಗುರುಗಳೇ. ನನ್ನ ಈಗಿನ ಪರಿಸ್ಥಿಯನ್ನು ನಿಮ್ಮಲ್ಲಿ ಹೇಳಿಕೊಂಡಿದ್ದೇನೆ. ಬರೀರಿ ಗುರುಗಳೇ, ನೆಗೆಟಿವ್ ಅಂತಲ್ಲ- ಪಾಸಿಟಿವ್ ಅಂತಲೂ ಅಲ್ಲ. ವಾಸ್ತವವನ್ನು ಬರೀರಿ ಪ್ಲೀಸ್...' - ಇಷ್ಟು ಹೇಳುವಷ್ಟರಲ್ಲಿ ಉಜಿರೆಯಲ್ಲಿ ಮಳೆ ಜೋರಾಯಿತು, ಮಾನ್ವಿಯಲ್ಲಿ ಗಾಳಿ ಜೋರಾಯಿತು. ಮುಂದೆ ಏನೂ ಕೇಳಿಸಲಿಲ್ಲ...ಅರ್ಧಂಬರ್ಧ ಕೇಳಿಸಿದ್ದಿಷ್ಟು :
'ಗುರುಗಳೇ, ನಿಜ ಹೇಳ್ತಿದ್ದೇನೆ : ಆ ಹಾಡು ನನ್ನ ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಅದನ್ನು ಯಾವ ಘಳಿಗೆಯಲ್ಲಿ ಬರೆದೆನೋ? ಯಾವ ಮುಹೂರ್ತದಲ್ಲಿ ಅದು ರೆಕಾರ್ಡ್ ಆಯಿತೋ? ಯಾವ ಅಶ್ವಥ್ ಅದಕ್ಕೆ ಜೀವ ತುಂಬಿದರೋ? ಒಟ್ಟಿನಲ್ಲಿ ಅದೊಂದು ಹಾಡು ನನ್ನ ಬದುಕಿನ ಲಾಲಿಹಾಡು! ಆ ಪದಗಳ ಜೋಡಣೆ ಹೇಗಾಯಿತೋ? ಆ ಟ್ಯೂನ್ ಎಲ್ಲಿಂದ ಬಂತೋ? ಅಂತೂ ನನ್ನ ವೃತ್ತಿ ಬದುಕಿಗೆ ಮರುಜನ್ಮ ನೀಡಿದ ಹಾಡಿದು. ನೀವು ನಂಬಲೇ ಬೇಕು ಗುರುಗಳೇ, ಕರ್ನಾಟಕದ ಈ ಮಂದಿ ಈಗ ನನ್ನನ್ನು ನೋಡುವ ರೀತೀನೇ ಬದಲಾಗಿ ಬಿಟ್ಟಿದೆ. ಅರೆಸ್ಟ್ ವಾರಂಟ್ ತರುವ ಪೊಲೀಸ್ ಅಧಿಕಾರಿ ಕೂಡಾ ನನ್ನ ಮುಂದೆ ನಿಂತುಕೊಂಡೇ ಮಾತಾಡುತ್ತಾರೆ! ಒಂದು ಮಾತನ್ನು ನಾನು ನಿಮ್ಗೆ ಹೇಳಲೇ ಬೇಕು : ನಾನು ಸಾಲಗಾರ ನಿಜ, ಆದ್ರೆ ಮೋಸಗಾರನಲ್ಲ... ನಾನು ಬಾಯಿ ಬಿಟ್ಟು ಎಲ್ಲವನ್ನೂ ಹೇಳ್ತಿದ್ದೇನೆ. ಆದ್ರೆ ಬಾಯಿ ಮುಚ್ಚಿಕೊಂಡು ಯಾತನೆ ಅನುಭವಿಸೋ ಮಂದಿ ಗಾಂಧಿನಗರದಲ್ಲಿ ಎಷ್ಟಿಲ್ಲ ಹೇಳಿ ಗುರುಗಳೇ? ನನ್ನ ಪರವಾಗಿ ಬರೀರಿ ಅಂತ ಹೇಳ್ತಿಲ್ಲ. ಬಯ್ಯಿರಿ, ಉಗೀರಿ, ಇದ್ದದ್ದನ್ನು ಇದ್ದ ಹಾಗೇ ಬರೀರಿ. ನನ್ನನ್ನು ಪ್ರೀತಿಸುವ ಜನಕ್ಕೆ ನನ್ನ ದುಃಸ್ಥಿತಿ ಏನೂಂತ ಗೊತ್ತಾಗ್ಲಿ. ಬದುಕಿನ ತಿರುಗಣೆಗೆ ಸಿಕ್ಕುಹಾಕಿಕೊಂಡು ನಾನು ಹೇಗೆ ಪಡಬಾರದ ಪಾಡು ಪಡುತ್ತಿದ್ದೇನೆ ಅಂತ ನನ್ನ ಅಭಿಮಾನಿಗಳಿಗೂ ಗೊತ್ತಾಗ್ಲಿ...' - ಹೀಗೆ ಸಾಗುತ್ತದೆ 'ಋಷಿ'ಮೂಲದ ಒಕ್ಕಣೆ...ಸಾರಿ, ಋಷಿ ಮೂಲವನ್ನು ಹೇಳಬಾರದಂತೆ! ಹೇಳಬಾರದ್ದನ್ನೇ ಹೇಳುವ ನಾನು ಈ ಋಷಿಯ ಮೂಲವನ್ನು ನಿಮ್ಮ ಮುಂದಿಟ್ಟಿದ್ದೇನೆ. ಕೊಂಡೊಯ್ಯಲು ಜವರಾಯ ಬರುತ್ತಾನೋ, ಕಾಯಲು ಶಿವರಾಯ ಬರುತ್ತಾನೋ ಕಾದು ನೋಡೋಣ, ಏನಂತೀರಿ ಓದುಗ ಮಹಾಪ್ರಭೂ...?
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ. +91 9902523698

Social Plugin