ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸ್ಥಾನವನ್ನು ರಾಜಶೇಖರ ಅಂಬಲಿ ಅವರಿಗೆ ನೀಡಬೇಕೆಂದು ಒತ್ತಾಯಿಸಿ ನೇಕಾರ ಮುಖಂಡ ಬ್ರಿಜ್‍ಮೋಹನ ಡಾಗಾ ಮಾತನಾಡಿದರು.
ಅಂಬಲಿಗೆ ಕೆಎಚ್‍ಡಿಸಿ ಅಧ್ಯಕ್ಷ ಸ್ಥಾನ ನೀಡಲಿ
ರಬಕವಿ-ಬನಹಟ್ಟಿ,ಜು30: ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ತೇರದಾಳ ಶಾಸಕ ಸಿದ್ದು ಸವದಿಯವರಿಗೆ ಅಧಿಕಾರ ಸ್ವೀಕಾರಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕೃತ ಆದೇಶ ನೀಡಿದ್ದರು. ಇದನ್ನು ತಿರಸ್ಕರಿಸಿದ ಶಾಸಕರು ನೇಕಾರ ಪ್ರಮುಖರಿಗೆ ನಿಗಮದ ಅಧ್ಯಕ್ಷ ಸ್ಥಾನ ಕಲ್ಪಿಸಬೇಕೆಂದು ಹೇಳುತ್ತಿದ್ದಂತೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ನೇಕಾರ ಸಮುದಾಯದ ಮುಖಂಡ ರಾಜಶೇಖರ ಅಂಬಲಿ ಅವರಿಗೆ ಸ್ಥಾನ ಕಲ್ಪಿಸಬೇಕೆಂದು ಅವಳಿ ನಗರದ ನೇಕಾರ ಮುಖಂಡರು ಒತ್ತಾಯಿಸಿದರು.
ಗುರುವಾರ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿ ಮಾತನಾಡಿದ ಬ್ರಿಜ್‍ಮೋಹನ ಡಾಗಾ, ನೇಕಾರರ ಪರ ದಿಟ್ಟ ಹಾಗು ತೀಕ್ಷ್ಣವಾಗಿ ಯೋಜನೆಗಳನ್ನು ಹೊತ್ತು ತರುವಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಅಂಬಲಿ ಯೋಗ್ಯ ವ್ಯಕ್ತಿಯಾಗಿದ್ದು, ಕೈಮಗ್ಗ ನೇಕಾರರ ಸಮಸ್ಯೆಗಳನ್ನು ಆಲಿಸುವ ಕಳಕಳಿಯ ವ್ಯಕ್ತಿತ್ವ ಹೊಂದಿದವರಾಗಿರುವ ಹಿನ್ನಲೆ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದರು.
ಇದೇ ಸಂದರ್ಭ ರಬಕವಿಯ ಸಂಜಯ ತೆಗ್ಗಿ ಮಾತನಾಡಿ, ಮುಖ್ಯಮಂತ್ರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸುವ ಮೂಲಕ ನಿಯೋಗದೊಂದಿಗೆ ಒತ್ತಾಯವನ್ನೂ ಮಾಡಲಾಗಿ ಅಂಬಲಿಗೆ ಸ್ಥಾನ ಒದಗಿಸಬೇಕೆಂದು ಆಗ್ರಹಪಡಿಸುತ್ತೇವೆಂದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಈಶ್ವರ ನಾಗರಾಳ, ಹಟಗಾರ ಸಮಾಜದ ಜಿಲ್ಲಾಧ್ಯಕ್ಷ ಸೋಮು ಗೊಂಬಿ, ಶ್ರೀಶೈಲ ಯಾದವಾಡ, ಪ್ರಭು ಪೂಜಾರಿ ಮಾತನಾಡಿದರು. ವೇದಿಕೆ ಮೇಲೆ ವಿರುಪಾಕ್ಷಪ್ಪ ಕೊಕಟನೂರ, ಸಿದ್ರಾಯಪ್ಪ ಶೀಲವಂತ, ಶಂಕರ ಟಿರಕಿ, ರಾಜು ಬಾಣಕಾರ, ಜನತಾ ಶಿಕ್ಷಣ ಸಂಘದ ಚೇರಮನ್ ಬಸವರಾಜ ಜಾಡಗೌಡ, ರಾಮದಾಸ ಸಿಂಗನ್, ಗಿರಮಲ್ಲಪ್ಪ ಬಾಗೇವಾಡಿ ವೇದಿಕೆ ಮೇಲಿದ್ದರು.
ಕುಮಾರ ಕದಂ ಸ್ವಾಗತಿಸಿದರು. ಸಂಗಮೇಶ ಗುಟ್ಲಿ ನಿರೂಪಿಸಿದರು. ಅರವಿಂದ ಹೊರಟ್ಟಿ ವಂದಿಸಿದರು.