ಸಾವರಿನ್ ಸಕ್ಕರೆ ಕಾರ್ಖಾನೆಯ ಕಬ್ಬಿನ ಬಾಕಿ ಪಾವತಿಗೆ ರೈತರೊಂದಿಗೆ ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿದರು.
ಕಬ್ಬಿನ ಬಾಕಿ ಪಾವತಿಗೆ ರೈತರ ಒತ್ತಾಯ
*ದಿ.13 ರೊಳಗಾಗಿ ಅಧಿಕಾರಿಗಳ ಜೊತೆ ಚರ್ಚೆ
ರಬಕವಿ-ಬನಹಟ್ಟಿ,ಜು3: ಕಳೆದೆರಡು ವರ್ಷಗಳಿಂದ ರಬಕವಿ-ಬನಹಟ್ಟಿ ತಾಲೂಕಿನ ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣ ಪಾವತಿಗೆ ಒತ್ತಾಯಿಸಿ ರಬಕವಿಯ ಅತಿಥಿ ಗೃಹದ ಆವರಣದಲ್ಲಿ ನೆರೆದಿದ್ದ ರೈತರು ತಹಶೀಲ್ದಾರರಿಗೆ ಒತ್ತಾಯಿಸಿದರು.
ಶುಕ್ರವಾರ ಮಧ್ಯಾಹ್ನ ದಿಢೀರ್ ಸಭೆ ಸೇರುವ ಮೂಲಕ ತಮ್ಮ ಬಿಲ್ ಬಾಕಿಗಾಗಿ ತಾಲೂಕಾಡಳಿತವನ್ನು ಒತ್ತಾಯಿಸಿದರು. ಬಾಗಲಕೋಟ, ವಿಜಯಪುರ ಹಾಗು ಬೆಳಗಾವಿ ಜಿಲ್ಲೆಗಳ 996 ರೈತರ ಒಟ್ಟು 21 ಕೋಟಿ ರೂ.ಗಳಷ್ಟು ಕಬ್ಬಿನ ಬಿಲ್ ಬಾಕಿ ಇಲ್ಲಿಯವರೆಗೂ ಬಾರದ ಕಾರಣ ರೈತರ ಬದುಕು ಚಿಂತಾಜನಕವಾಗಿದೆ. ತಕ್ಷಣವೇ ಬಿಲ್ ಪಾವತಿಯಾಗಬೇಕೆಂದು ಒತ್ತಾಯಿಸಿದರು.
ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ, ಹಿರಿಯ ಅಧಿಕಾರಿಗಳೊಂದಿಗೆ ಬರುವ ಜು.13 ರೊಳಗಾಗಿ ಮಹತ್ವದ ಚರ್ಚೆ ನಡೆಸಿ ಸೂಕ್ತ ವ್ಯವಸ್ಥೆಗೆ ಅವಕಾಶ ಕಲ್ಪಿಸುತ್ತೇನೆ. ಈಗಾಗಲೇ ಹರಾಜು ಪ್ರಕ್ರಿಯೆ ನಡೆದಿತ್ತು. ಕೆಲ ತಾಂತ್ರಿಕ ತೊಂದರೆಗಳ ಕಾರಣ ವಿಳಂಬವಾಗಲು ಕಾರಣವಾಗಿದೆ.
ಈಗಾಗಲೇ ಅಪೆಕ್ಸ್ ಬ್ಯಾಂಕ್ ಜೊತೆಗೆ ಈ ಕುರಿತು ಚರ್ಚೆಯಲ್ಲಿದ್ದು, ಮುಂದಿನ ಪ್ರಗತಿ ಬಗ್ಗೆ ಮಾಹಿತಿ ಒದಗಿಸಲಾಗುವದೆಂದರು. ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ಉಪಸ್ಥಿತರಿದ್ದರು.
ರೈತ ಮುಖಂಡರಾದ ರಬಕವಿ-ಬನಹಟ್ಟಿ ತಾಲೂಕಾಧ್ಯಕ್ಷ ಹೊನ್ನಪ್ಪ ಬಿರಡಿ, ಮಹಾಲಿಂಗಪೂರ ಘಟಕದ ಗಂಗಾಧರ ಮೇಟಿ, ಶ್ರೀಕಾಂತ ಗುಳ್ಳನವರ, ಬಂದು ಪಕಾಲಿ, ಹನಮಂತ ಪೂಜಾರಿ, ಶಿವಪ್ಪ ಓಟ್ಕರ್, ಬಸವಣೆಪ್ಪ ಪಾಟೀಲ, ಸುಭಾಷ ಬಿರಾಣಿ, ಲಕ್ಷ್ಮಣಗೌಡ ಪಾಟೀಲ, ಪರಮಾನಂದ ಅಕ್ಕಿಮಡ್ಡಿ, ಆದಿನಾಥ ಕೋಳಿ ಸೇರಿದಂತೆ ಅನೇಕರಿದ್ದರು.

- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698